Advertisement

ಪಕ್ಷದ ಟಿಕೆಟ್ ಗಾಗಿ ಆಕಾಂಕ್ಷಿಗಳ ತೀವ್ರ ಪೈಪೋಟಿ

10:53 AM May 10, 2019 | Naveen |

ತಾಳಿಕೋಟೆ: ಪ್ರತಿ ಬಾರಿ ಚುನಾವಣೆಗಿಂತಲೂ ಈ ಬಾರಿ ವಿಶಿಷ್ಟತೆ ಪಡೆದುಕೊಂಡಿರುವ ತಾಳಿಕೋಟೆ ಪುರಸಭೆ ಸದಸ್ಯ ಚುನಾವಣೆಯಲ್ಲಿ ಸ್ಪರ್ಧಾ ಆಕಾಂಕ್ಷಿಗಳು ಪಕ್ಷದ ಟಿಕೆಟ್ಗಾಗಿ ಮುಖಂಡರುಗಳ ಮನೆಬಾಗಿಲಿಗೆ ದುಂಬಾಲು ಬಿದ್ದಿದ್ದರೆ, ಇನ್ನೂ ಕೆಲವರು ಜಾತಿ ಲೆಕ್ಕಾಚಾರದ ಮೇಲೆ ಪಕ್ಷೇತರವಾಗಿ ಸ್ಪರ್ಧೆಗೆ ಒಲವು ತೋರುತ್ತಿದ್ದಾರೆ.

Advertisement

ಪಕ್ಷಕ್ಕೆ ಭಾರಿ ಬೇಡಿಕೆ: ಪುರಸಭೆ 60 ವರ್ಷಗಳ ಇತಿಹಾಸದಲ್ಲಿ ಪಕ್ಷಕ್ಕಿಂತ ಪಕ್ಷೇತರರೇ ಅತೀ ಹೆಚ್ಚು ಪ್ರಾಬಲ್ಯದೊಂದಿಗೆ ಆಯ್ಕೆಯಾಗಿ ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಆದರೆ ಇದೀಗ ಪಕ್ಷೇತರರಿಗಿಂತ ಪಕ್ಷಕ್ಕೆ ಭಾರಿ ಬೇಡಿಕೆ ಬಂದಿದೆ. ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಖಾತೆ ತೆರೆದಿದ್ದರಿಂದ ಪಕ್ಷೇತರರಿಗಿಂತ ಪಕ್ಷಕ್ಕೆ ಭಾರಿ ಬೇಡಿಕೆ ಬರಲು ಕಾರಣವೆನ್ನಲಾಗುತ್ತಿದೆ.

ಸ್ಥಳೀಯ ಸ್ಥಂಸ್ಥೆಗಳ ಚುನಾವಣೆ ಪೈಕಿ ನಡೆಯುತ್ತಿರುವ ತಾಳಿಕೋಟೆ ಪುರಸಭೆ ಚುನಾವಣೆಯಲ್ಲಿ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ತಮ್ಮ ರಾಜಕೀಯ ಭದ್ರನೆಲೆ ಯನ್ನಾಗಿಸಿಕೊಳ್ಳಲು ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರನ್ನು ಕಣಕ್ಕಿಳಿಸಲು ಪೂರ್ವ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

ಅದರಂತೆ ಶಾಸಕ ಸಿ.ಎಸ್‌. ನಾಡಗೌಡ ಕಾಂಗ್ರೆಸ್‌ ಕಾರ್ಯಕರ್ತರ ಸಭೆಗಳನ್ನು ಮೇಲಿಂದ ಮೇಲೆ ನಡೆಸುವುದರೊಂದಿಗೆ ಕಾಂಗ್ರೆಸ್‌ ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ಮತ್ತು ಪುರಸಭೆ ಆಡಳಿತದ ಗದ್ದುಗೆ ತಮ್ಮದಾಗಿಸಿಕೊಳ್ಳಲು ಸೂಕ್ತ ಅಭ್ಯರ್ಥಿ ಆಯ್ಕೆಗೊಳಿಸಲು ತಯಾರಿ ನಡೆಸಿರುವುದರಿಂದ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಮತ್ತು ಮಾಜಿ ಶಾಸಕ ಸಿ.ಎಸ್‌. ನಾಡಗೌಡರ ಪ್ರತಿಷ್ಠೆಯ ಚುನಾವಣೆಯಾಗಿ ಮಾರ್ಪಟ್ಟಿದೆ.

ದಾಖಲಾತಿ ತಯಾರಿಯಲ್ಲಿ ಆಕಾಂಕ್ಷಿಗಳು: ಚುನಾವಣೆ ಅಧಿಸೂಚನೆ ಹೊರಬಿದ್ದಿದ್ದು ಪ್ರತಿ ವಾರ್ಡ್‌ನಿಂದ ಸುಮಾರು 8ರಿಂದ 10 ಜನ ಸ್ಪರ್ಧಾ ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆಗೆ ಅಗತ್ಯ ದಾಖಲಾತಿ ತಯಾರಿಯಲ್ಲಿ ತೊಡಗಿಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ ನಾಮಪತ್ರ ಸಲ್ಲಿಕೆಗೆ ಸೂಚಕರ ಸಮಸ್ಯೆ ಆಕಾಂಕ್ಷಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾದರೆ ಓರ್ವ ಸೂಚಕ, ಪಕ್ಷೇತರವಾಗಿ ಸ್ಪರ್ಧಿಸಬೇಕೆಂದರೆ 4 ಜನ ಸೂಚಕರನ್ನು ನಿಗದಿಪಡಿಸಿದ್ದರಿಂದ ಬೇಬಾಕಿ ಹೊಂದಿದ ಸೂಚಕರು ಸಿಗುವುದು ಕಷ್ಟಸಾಧ್ಯವಾಗಿದೆ. ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಪುರಸಭೆ ಕರಬಾಕಿ, ನೀರಿನ ಕರ ಒಳಗೊಂಡಂತೆ ಇನ್ನಿತರ ಕರ ಸಾಕಷ್ಟು ಜನರು ಬಾಕಿ ಇಟ್ಟುಕೊಂಡಿದ್ದರಿಂದ ಸ್ಪರ್ಧಾ ಆಕಾಂಕ್ಷಿಗಳಿಗೆ ಬೇಬಾಕಿ ಸೂಚಕರು ಸಿಗುತ್ತಿಲ್ಲ. ಹೀಗಾಗಿ ಕೆಲವು ಆಕಾಂಕ್ಷಿಗಳು ತಮ್ಮ ವಾರ್ಡ್‌ನಲ್ಲಿಯ ತಮ್ಮ ದೂರದ ಸಂಬಂಧಿಕರು ಹಾಗೂ ತಮ್ಮ ಬೆಂಬಲಿಗರ ಆಸ್ತಿ ಕರ ಇನ್ನಿತರ ಕರವನ್ನು ತಾವೇ ತುಂಬಿ ಸೂಚಕರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

Advertisement

ಒಟ್ಟಾರೆ ಪುರಸಭೆ ಚುನಾವಣೆಯಲ್ಲಿ ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕದ ನಂತರ ಚುನಾವಣೆ ಅಖಾಡದಲ್ಲಿ ಎಷ್ಟು ಜನರು ಉಳಿಯಲಿದ್ದಾರೆಂಬ ಸಂಪೂರ್ಣ ಚಿತ್ರಣ ಸಿಗಲಿದೆ.

ಪುರಸಭೆ ಸದಸ್ಯ ಸ್ಥಾನಕ್ಕೆ ಬಿಜೆಪಿ ಬಿ ಫಾರ್ಮ್ ಮೇಲೆ ಸ್ಪರ್ಧೆ ಬಯಸಿ ಕೆಲವು ವಾರ್ಡ್‌ಗಳಿಂದ 15 ಜನರು ಅರ್ಜಿ ಸಲ್ಲಿಸಿದ್ದಾರೆ. ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ.
ರಾಘವೇಂದ್ರ ಚವ್ಹಾಣ,
ಬಿಜೆಪಿ ನಗರ ಘಟಕ ಅಧ್ಯಕ್ಷ

ಚುನಾವಣೆಗೆ ಬಿ ಫಾರ್ಮ್ ಮೇಲೆ ಸ್ಪರ್ಧೆ ಬಯಸಿ 8 ಜನರು ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ವಾರ್ಡ್‌ಗಳಿಂದಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ಸಿದ್ದನಗೌಡ ಪಾಟೀಲ,
ಕಾಂಗ್ರೆಸ್‌ ಅಧ್ಯಕ್ಷ

ಜಿ.ಟಿ. ಘೋರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next