ವಿಜಯಪುರ: ಪೊಲೀಸ್ ವೈಫಲ್ಯದ ಕಾರಣಕ್ಕೆ ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿನ ಭೀಮಾ ನದಿ ತೀರದಲ್ಲಿ ಅಕ್ರಮ ಮರಳು ಮಾಫಿಯಾ, ಡ್ರಗ್ಸ್ ದಂಧೆ, ಕಾನೂನು ಬಾಹಿರ ಕೃತ್ಯದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಪರಿಣಾಮ ನನಗೆ ಜೀವ ಬೆದರಿಕೆ ಹಾಕಲಾಗಿದ್ದು, ನನ್ನ ಹಾಗೂ ನನ್ನ ಕುಟುಂಬ ಸದಸ್ಯರಿಗೆ ಅಪಾಯ ಸಂಭವಿಸಿದರೆ ಜಿಲ್ಲಾಳಡಳಿತ ಹಾಗೂ ಪೊಲೀಸರೇ ಕಾರಣ ಎಂದು ಜಿಲ್ಲೆಯ ನಾಗಠಾಣಾ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಆರೋಪಿಸಿದರು.
ಗುರುವಾರ ಎಸ್ಪಿ ಕಛೇರಿಗೆ ತೆರಳಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಪೊಲೀಸ್ ಭದ್ರತೆ ಕೋರಿ ಲಿಖಿತ ಮನವಿ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಪ್ರತಿನಿಧಿಸುವ ಭೀಮಾ ನದಿ ಪರಿಸರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸ್ ಸಹಕಾರದಲ್ಲೇ ಈ ಪ್ರದೇಶದಲ್ಲಿ ಅಕ್ರಮ ಮರಳು ದಂದೆ, ಮಾದಕ ವಸ್ತುಗಳ ಮಾರಾಟ, ಬಳಕೆ ಸೇರಿದಂತೆ ಕಾನೂನು ಬಾಹೀರ ಕೃತ್ಯಗಳು ನಡೆಯುತ್ತಿವೆ. ಸಮಾಜ ಬಾಹೀರ ಕೃತ್ಯದ ವಿರುದ್ಧ ಸಾರ್ವಜನಿಕವಾಗಿ ನಾನು ನೇರವಾಗಿ ಧ್ವನಿ ಎತ್ತಿದ್ದೇನೆ. ಹೀಗಾಗಿ ನನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿದರು.
ಕೆಲ ದಿನಗಳ ಹಿಂದೆ ನನ್ನ ಮನೆಯ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಕಡಿದು ಕಳ್ಳತನಕ್ಕೆ ಯತ್ನಿಸಲಾಗಿತ್ತು. ಈ ಸಂದರ್ಭದಲ್ಲಿ ಎಚ್ಚೆತ್ತ ನಾವು ಪೊಲೀಸರಿಗೆ ಮಾಹಿತಿ ನೀಡುತ್ತಲೇ ಪರಾರಿಯಾದ ಕಳ್ಳರು ತಾವು ತಮ್ಮನ್ನು ಕೊಲ್ಲುವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಭೀಮಾ ತೀರದಲ್ಲಿ ಸಕ್ರೀಯವಾಗಿರುವ ರೌಡಿಗಳ ಹೆಸರು ಹೇಳಿಕೊಂಡು ನಾವು ಅವರ ಕಡೆಯವರು ಎಂದು ನನಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿದರು.
ಶ್ರೀಗಂಧದ ಕಳ್ಳತನ ಕೇವಲ ನೆಪ ಮಾತ್ರ ಎನಿಸುತ್ತಿದೆ. ಈ ಕೃತ್ಯದ ಹಿಂದೆ ಬೇರೆಯದೇ ವ್ಯವಸ್ಥಿತ ಸಂಚು ಇರುವ ಅನುಮಾನ ಮೂಡುತ್ತಿದೆ. ಶ್ರೀಗಂಧ ಮರಗಳ್ಳತನಕ್ಕೆ ಬಂದವರು ಕೇವಲ ಕಳ್ಳತನ ಮಾಡಿ ಹೋಗಿಲ್ಲ. ಬದಲಾಗಿ ಮನೆಗೆ ನುಗ್ಗಲು ಮುಂದಾಗಿದ್ದಾರೆ. ಯಾರು ನೀವು, ಏಕೆ ಬಂದಿದ್ದೀರಿ ಎಂದು ಕೇಳಿದಾಗ ನಿನ್ನನ್ನೇ ನೋಡಲು ಬಂದಿದ್ದು, ಗುಂಡು ಹಾರಿಸಿ ನಿನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡುವುದನ್ನು ಗಮನಸಿ ಓಡಿ ಹೋಗಿದ್ದಾರೆ. ಇದು ನನ್ನ ವಿರುದ್ಧ ನಡೆಯುತ್ತಿರುವ ಸಂಚು ಎಂಬುದು ಸ್ಪಷ್ಟವಾಗುತ್ತಿದೆ ಎಂದರು.
ಇಷ್ಟಕ್ಕೆ ನಿಲ್ಲದ ಸಂಚುಕೋರರು, ಹಂಚನಾಳ ತಾಂಡಾ ಬಳಿ ನಿಂತಿದ್ದ ನಮ್ಮ ತಾಂಡಾದ ಜನರನ್ನು ಕರೆದು, ನಾವು ಮಹಾದೇವ ಸಾಹುಕಾರ ಕಡೆಯವರಿದ್ದೇವೆ ಎಂದು ಹೇಳಿಕೊಂಡು ನನ್ನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದಲ್ಲದೇ ನಿಮ್ಮ ಶಾಸಕನಿಗೆ ಪೊಲೀಸ್ ಗನ್ ಮ್ಯಾನ್‍ಗಳಿದ್ದರೂ ಎಷ್ಟು ದಿನ ಗನ್‍ಮ್ಯಾನ್ ಇರುತ್ತಾರೋ ನಾವು ನೋಡುತ್ತೇವೆ. ನಿಮ್ಮ ಶಾಸಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ. ಈ ಎಲ್ಲ ಘಟನೆಗಳು, ಬೆಳವಣಿಗೆಗಳು ನನ್ನ ಹತ್ಯೆಗೆ ಸಂಚು ನಡೆಯುತ್ತಿರುವುದು ಸ್ಪಷ್ಟವಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ನನಗೆ ಸರ್ಕಾರ ಇಬ್ಬರು ಗನ್ ಮ್ಯಾನ್‍ಗಳನ್ನು ನೀಡಿದ್ದರೂ ರಾತ್ರಿ ಒಬ್ಬರೇ ಓಡಾಡುವಾಗ ಅಪಾಯ ಮಾಡುವ ಸಾಧ್ಯತೆ ಇದೆ. ಹೀಗಾಗಿ ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ರಕ್ಷಣೆಗೆ ಹೆಚ್ಚಿನ ಪೊಲೀಸ್ ಭದ್ರತೆಯ ಅಗತ್ಯವಿದೆ. ಒಂದೊಮ್ಮೆ ಭದ್ರತೆ ಸಿಗದೇ ನನ್ನ ಕುಟುಂಬಕ್ಕೆ ಅಪಾಯವಾದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಹೊಣೆ ಎಂದು ಎಚ್ಚರಿಸಿದರು.