Advertisement

Vijayapura; ವಿಜಯೇಂದ್ರ ಹಗರಣದ ತನಿಖೆಗೆ ಯತ್ನಾಳ ಪಾದಯಾತ್ರೆ ನಡೆಸಲಿ:ಎಂ.ಬಿ.ಪಾಟೀಲ ವ್ಯಂಗ್ಯ

12:27 PM Aug 11, 2024 | Team Udayavani |

ವಿಜಯಪುರ: ಬಿಜೆಪಿ ಪಕ್ಷದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಮತ್ತೊಂದು ಪಾದಯಾತ್ರೆ ನಡೆಸಲಿದ್ದಾರಂತೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನೀಡಿರುವ ಭ್ರಷ್ಟಾಚಾರದ ಪಟ್ಟಿ ಇರಿಸಿಕೊಂಡು ಯತ್ನಾಳ್ ಪಾದಯಾತ್ರೆ ನಡೆಸಲಿ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕುಟುಕಿದ್ದಾರೆ.

Advertisement

ಭಾನುವಾರ (ಆ.11) ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರ, ಬಿಎಸ್ವೈ ಒಂದು ಬಣ, ಅಶೋಕ್ ಬಣ, ಅಶ್ವತ್ಥನಾರಾಯಣ ಬಣ, ರಮೇಶ ಜಾರಕಿಹೊಳಿ, ಯತ್ನಾಳ ಬಣ, ಬಿ.ಎಲ್. ಸಂತೋಷ ಬಣ ಅಂತೆಲ್ಲ ನನ್ನ ಪ್ರಕಾರ 15-20 ಬಣಗಳಿವೆ. ಎಲ್ಲ ಬಣಗಳೂ ಒಂದೊಂದು ಪಾದಯಾತ್ರೆ ನಡೆಸಲಿ ಎಂದು ವ್ಯಂಗ್ಯವಾಡಿದರು.

ಯತ್ನಾಳ ಅವರೇ ಹೇಳುವಂತೆ ಎಲ್ಲ ಪಕ್ಷಗಳೂ ಸ್ವಚ್ಛವಾಗಲಿ. ತಾವೇ ಹೇಳಿದಂತೆ ವಿಜಯೇಂದ್ರ ಅವರ ಕೋವಿಡ್ ಹಗರಣ, ಮಾರಿಷಸ್ ನಲ್ಲಿ ಇಟ್ಟಿರುವ ಅಕ್ರಮ ಹಣದ‌ ವಿಷಯ ಮುಂದಿರಿಸಿಕೊಂಡು ಪಾದಯಾತ್ರೆ ನಡೆಸಲಿ ಎಂದು ಆಗ್ರಹಿಸಿದರು.

ವಾಲ್ಮೀಕಿ ಹಗರಣ ವಿಚಾರವಾಗಿ ಕೂಡಲಸಂಗಮದಿಂದ ಹೊಸಪೇಟೆವರೆಗೆ ವಿಜಯೇಂದ್ರ ವಿರೋಧಿ ಬಣದಿಂದ ಯೋಜಿಸುತ್ತಿದೆ ಎಂಬ ವಿಷಯವಾಗಿ ಮಾತನಾಡಿದ ಪಾಟೀಲ, ವಾಲ್ಮೀಕಿ ಹಗರಣ ಈಗಾಗಲೇ ಎಸ್ ಐಟಿ ತನಿಖೆ ನಡೆಯುತ್ತಿದೆ. ಸಚಿವರ ಪಾತ್ರ ಇದೆಯೋ ಇಲ್ಲವೋ ಗೊತ್ತಿಲ್ಲ, ರಾಜೀನಾಮೆ ಕೊಟ್ಟಿದ್ದಾರೆ, ತನಿಖೆ ನಡೆಯುತ್ತಿದೆ. ಇಡಿ ಕೂಡಾ ತನಿಖೆ ಮಾಡ್ತಿದೆ ಸತ್ಯಾಂಶ ಹೊರಗೆ ಬರುತ್ತದೆ ಎಂದರು.

89 ಕೋಟಿ ರೂ. ಹಣದಲ್ಲಿ ಈಗಾಗಲೇ 45 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಅಕ್ರಮ ಆಗಿಲ್ಲ ಅಂತೇನಿಲ್ಲ, ಆಗಿದೆ, ಕ್ರಮ ಕೈಗೊಂಡಿದ್ದೇವೆ ಎಂದರು.

Advertisement

ಯತ್ನಾಳ್ ತಾವೇ ಹೇಳಿದಂತೆ ಕೋವಿಡ್ ನಲ್ಲಿ 2 ಸಾವಿರ ಕೋಟಿ ರೂ. ಹಗರಣ, ವಿಜಯೇಂದ್ರ ಮಾರಿಷಸ್ ನಲ್ಲಿ 10 ಸಾವಿರ ಕೋಟಿ ರೂ. ಇರಿಸಿದ್ದಾರೆ ಎಂದು ನಾನು ಹೇಳಲ್ಲ, ಯತ್ನಾಳ ಈ ವಿಷಯ ಮುಂದಿಟ್ಟುಕೊಂಡು ಹೋರಾಟ ಮಾಡಲಿ ಎಂದು ಕುಟುಕಿದರು.

ಭೋವಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ದೇವರಾಜ ಅರಸು ನಿಗಮದಲ್ಲಿ ಅಕ್ರಮ ಆಗಿದೆ. ಈ ವಿಷಯ ಮುಂದಿಟ್ಟುಕೊಂಡು ಯತ್ನಾಳ ಪಾದಯಾತ್ರೆ ಮಾಡಲಿ ಎಂದು ವ್ಯಂಗ್ಯವಾಡಿದರು.

ವಾಲ್ಮೀಕಿ ಹಗರಣ ಒಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ 20 ಹಗರಣಗಳಿವೆ ಎಲ್ಲವೂ ಸ್ವಚ್ಛ ಮಾಡಬೇಕು ಎನ್ನುವ ಯತ್ನಾಳ ಈ ವಿಷಯಗಳ ನೇತೃತ್ವದಲ್ಲಿ ಹೋರಾಟ ಮಾಡಲಿ ಎಂದರು.

ಯತ್ನಾಳ ಪಕ್ಷಾತೀತವಾಗಿ ಹಗರಣ ಹೊರಗೆ ಬರಲಿ ಎಂದಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಯಾವ ಇಲಾಖೆಯಲ್ಲಿ ಹಗರಣ ಆಗಿದೆ ಎಂಬುದರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇವೆಲ್ಲವನ್ನೂ ಇಟ್ಟುಕೊಂಡು ಯತ್ನಾಳ ಪಾದಯಾತ್ರೆ ಮಾಡಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next