Advertisement

25 ಲಕ್ಷ ಸಸಿ ವಿತರಣೆಗೆ ಸಿದ್ಧ

10:35 AM Jun 02, 2019 | Naveen |

ವಿಜಯಪುರ: ಅರಣ್ಯ ಪ್ರದೇಶ ಶೇಕಡಾವಾರು ಅತ್ಯಂತ ಕಡಿಮೆ ಶೇ 0. 17 ಇರುವ ವಿಜಯಪುರ ಜಿಲ್ಲೆಯಲ್ಲಿ ಗಿಡ-ಮರಗಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ 3 ವರ್ಷಗಳ ಹಿಂದೆ ಆರಂಭಗೊಂಡ ಕೋಟಿವೃಕ್ಷ ಅಭಿಯಾನ ಈ ಬಾರಿ 4ನೇ ವರ್ಷಕ್ಕೆ ಕಾಲಿಟ್ಟಿದೆ. ಜಿಲ್ಲೆಯಲ್ಲಿ ಈ ವರೆಗೆ 60 ಲಕ್ಷ ಸಸಿಗಳನ್ನು ವಿತರಿಸಿ ನೆಡಲಾಗಿದೆ ಎಂದು ವೃಕ್ಷ ಅಭಿಯಾನ ಟ್ರಸ್ಟ್‌ ಸಂಯೋಜಕ ಪ್ರೊ| ಮುರುಗೇಶ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

Advertisement

ವಿಶ್ವ ಮಾನದಂಡಗಳಿಗೆ ಅನುಸಾರವಾಗಿ ಭೌಗೊಳಿಕ ಪರಿಸರದಲ್ಲಿ ಶೇ. 33 ಅರಣ್ಯವಿರಬೇಕು ಎಂಬುದು ಸಮತೋಲಿತ ಪ್ರಕೃತಿಯ ಲಕ್ಷಣ. ಆದರೆ ವಿಜಯಪುರ ಜಿಲ್ಲೆ ಅತಿ ಕನಿಷ್ಠ ಮಾನದಂಡದ ಅರಣ್ಯ ಕೂಡ ಇಲ್ಲದ ಸ್ಥಿತಿಯಲ್ಲಿ ನಾವು ವಾಸಿಸುತ್ತಿದ್ದೇವೆ. ಹೀಗಾಗಿ ಕಳೆದ 100 ವರ್ಷಗಳ ಮಳೆ ಬೀಳುವ ಪ್ರಮಾಣ ನೋಡಿದಾಗ, ಅತ್ಯಂತ ಕಡಿಮೆ ಇದ್ದು ಮತ್ತು 3 ವರ್ಷಕ್ಕೊಮ್ಮೆ ತೀವ್ರ ಬರಗಾಲ ಎದುರಿಸಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ವಿಜಯಪುರ ಜಿಲ್ಲೆಯಲ್ಲಿ ಭವಿಷ್ಯದಲ್ಲಿ ಕೇವಲ ಬೇಸಿಗೆ ಹಾಗೂ ಕಡು ಬೇಸಿ‌ಗೆ ಕಾಲಗಳ ಜೊತೆಗೆ ಶಾಶ್ವತ ಬರಗಾಲ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.

ಈ ದುಸ್ಥಿತಿಯಿಂದ ಜಿಲ್ಲೆಯನ್ನು ರಕ್ಷಿಸಲು ಹಾಗೂ ದೂರದೃಷ್ಟಿಯಿಂದ ಅರಣ್ಯೀಕರಣ ಮಾಡಲು ಇಂದಿನ ಗೃಹ ಸಚಿವ ಎಂ.ಬಿ. ಪಾಟೀಲ ಅವರು ಜಲ ಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ 5 ವರ್ಷಗಳ ಕಾಲ ಮಿತಿಯಲ್ಲಿ ಕೋಟಿ ವೃಕ್ಷ ಅಭಿಯಾನ ರೂಪಿಸಿದ್ದು, ಪ್ರತಿ ವರ್ಷವೂ 25 ಲಕ್ಷ ಸಸಿ ನೆಟ್ಟು ಪೋಷಿಸುವ ಗುರಿ ಹಾಕಿಕೊಂಡಿದ್ದರು. ಇದಕ್ಕೆ ತಕ್ಕಂತೆ ಅಭಿಯಾನ ಈ ನಿಟ್ಟಿನಲ್ಲಿ ಯಶಸ್ಸಿನತ್ತ ಸಾಗಿದೆ ಎಂದು ವಿವರಿಸಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್‌ 5ರಂದು ಜಿಲ್ಲೆಯಾದ್ಯಂತ ಸರ್ಕಾರಿ ಇಲಾಖೆಗಳು, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೃಹತ್‌ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವೃಕ್ಷ ಅಭಿಯಾನದಿಂದ ಸೈನಿಕ ಸ್ಕೂಲ್ ಆವರಣದಲ್ಲಿ, ಅರಣ್ಯ ಇಲಾಖೆಯಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ, ಕೃಷ್ಣಾ ಭಾಗ್ಯ ಜಲ ನಿಗಮದಿಂದ ಆಲಮಟ್ಟಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡಲಾಗುವದು. ಅಲ್ಲದೇ ಜಿಲ್ಲೆಯ ವಿವಿಧ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಜಿಲ್ಲಾಯಾದ್ಯಂತ ಇರುವ ಹಲವಾರು ಸಂಘ ಸಂಸ್ಥೆಗಳು, ಸಾರ್ವಜನಿಕರು ಅಂದು ಸಸಿಗಳನ್ನು ನೆಟ್ಟು, ಪೋಷಿಸಲು ಮುಂದೆ ಬಂದಿದ್ದಾರೆ.

ಪ್ರಸಕ್ತ ವರ್ಷವೂ ವಿವಿಧ 150 ಜಾತಿಗೆ ಸೇರಿದ 25 ಲಕ್ಷ ಸಸಿಗಳನ್ನು ನರ್ಸರಿಯಲ್ಲಿ ಸಾರ್ವಜನಿಕರಿಗೆ ವಿತರಿಸಲು ಸಿದ್ಧವಾಗಿವೆ. ರೈತರಿಗೆ ಆರ್ಥಿಕವಾಗಿ ಲಾಭ ತಂದು ಅನುಕೂಲ ಕಲ್ಪಿಸುವ ಹಣ್ಣು-ಹಂಪಲು ನೀಡುವ ಹಾಗೂ ನೆರಳು ನೀಡುವ ಸಸಿಗಳನ್ನು ಬೆಳೆಸಲಾಗಿದೆ. ಇದಲ್ಲದೇ ವಿಜಯಪುರ ಪರಿಸರದ ಕಲ್ಲು ಭೂಮಿಯಲ್ಲೂ ನೀರಿಲ್ಲದೇ ಬೆಳೆಯುವ ಸಸಿಗಳನ್ನೂ ಬೆಳೆಸಿದ್ದು ವಿತರಣೆಗೆ ಸಿದ್ಧವಾಗಿವೆ.

Advertisement

ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ನರ್ಸರಿಯಲ್ಲಿ ಮಾವು, ತೆಂಗು, ಪೇರು, ಚಿಕ್ಕು, ದಾಳಿಂಬೆ, ಸಿತಾಫಲ, ಬಾರಿ, ನಿಂಬು, ಶ್ರೀಗಂಧ, ರಕ್ತಚಂದನ, ಹೆಬ್ಬೆವು ಸೇರಿದಂತೆ ಹಣ್ಣು ಹಾಗೂ ವಾಣಿಜ್ಯ ಸಸಿಗಳನ್ನು ವಿಶೇಷವಾಗಿ ತಯಾರಿಸಲಾಗಿದೆ.

ಹೀಗಾಗಿ ಜಿಲ್ಲೆಯ ಸಂಘ-ಸಂಸ್ಥೆಗಳು, ಸಾರ್ವಜನಿಕರು ತಾವು ಸಸಿ ನೆಡುವ ಜಮೀನಿನ ಉತಾರಿ ಹಾಗೂ ತಮ್ಮ ಗುರುತಿನ ಚೀಟಿ ನೀಡಿ, ಸಸಿಗಳಿಗೆ ನಿಗದಿಪಡಿಸಿದ ಅತಿ ಕನಿಷ್ಠ ಮೊತ್ತ ಪಾವತಿಸಿ ತಮಗೆ ಬೇಕಾದ ಸಸಿಗಳನ್ನು ಪಡೆದು ಸದುಯೋಗ ಪಡಿಸಿಕೊಂಡು ಕೋಟಿ ವೃಕ್ಷ ಅಭಿಯಾನ ಯಶಸ್ವಿಯಾಗಿಸಿಬೇಕು ಎಂದು ಪ್ರೊ| ಮುರುಗೇಶ ಪಟ್ಟಣಶೆಟ್ಟಿ ಮನವಿ ಮಾಡಿದ್ದಾರೆ.

ಸಂಘ-ಸಂಸ್ಥೆಗಳು, ಸಾರ್ವಜನಿಕರು ತಾವು ಸಸಿ ನೆಡುವ ಜಮೀನಿನ ಉತಾರಿ ಹಾಗೂ ತಮ್ಮ ಗುರುತಿನ ಚೀಟಿ ನೀಡಿ, ಸಸಿಗಳಿಗೆ ನಿಗದಿಪಡಿಸಿದ ಅತಿ ಕನಿಷ್ಠ ಮೊತ್ತ ಪಾವತಿಸಿ ತಮಗೆ ಬೇಕಾದ ಸಸಿಗಳನ್ನು ಪಡೆದು ಸದುಯೋಗ ಪಡಿಸಿಕೊಂಡು ಕೋಟಿ ವೃಕ್ಷ ಅಭಿಯಾನ ಯಶಸ್ವಿಯಾಗಿಸಿ.
ಪ್ರೊ| ಮುರುಗೇಶ ಪಟ್ಟಣಶೆಟ್ಟಿ
ವೃಕ್ಷ ಅಭಿಯಾನ ಟ್ರಸ್ಟ್‌ ಸಂಯೋಜಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next