ವಿಜಯಪುರ: ಮುಂಗಾರು ಮಳೆ ಪ್ರಾರಂಭವಾಗಲಿರುವ ಕಾರಣ ಕೋಟಿ ವೃಕ್ಷ ಅಭಿಯಾನ ಸಂಪೂರ್ಣ ಸಫಲತೆ ಸಾಧಿಸಲು ಜಿಲ್ಲೆಯ ಅಧಿಕಾರಿಗಳು, ಸಾರ್ವಜನಿಕರು ಒಗ್ಗಟ್ಟಿನಿಂದ ಕೈಜೋಡಿಸಬೇಕು. ಜಿಲ್ಲೆಯಲ್ಲಿ 1 ಕೋಟಿ ಸಸಿ ಬೆಳೆಸುವ ಗುರಿಯಲ್ಲಿ ಬಾಕಿ ಇರುವ 25 ಲಕ್ಷ ಸಸಿ ನೆಡುವ ಗುರಿ ಸಾಧನೆಗೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಕೋಟಿ ವೃಕ್ಷ ಅಭಿಯಾನದ ಪೂರ್ವ ಸಿದ್ಧತೆ ಕುರಿತು ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಕಳೆದ 4 ವರ್ಷಗಳಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 75 ಲಕ್ಷ ಸಸಿ ನೆಡಲಾಗಿದೆ. ಈ ವರ್ಷ 25 ಲಕ್ಷ ಸಸಿ ನೆಡುವ ಮೂಲಕ ಜಿಲ್ಲೆಯಲ್ಲಿ ಕೋಟಿ ವೃಕ್ಷ ನೆಡುವ ಹಾಗೂ ಬೆಳೆಸುವ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯ ಭೂತನಾಳ ಕೆರೆ ಬಳಿಯ ಕರಾಡದೊಡ್ಡಿ ಸೇರಿದಂತೆ ಜಿಲ್ಲೆಯಾದ್ಯಂತ ಈಗಾಗಲೇ ನೆಡಲಾಗಿರುವ 75 ಲಕ್ಷ ಸಸಿಗಳು ಮರವಾಗಿ ಬೆಳೆಯುತ್ತಿವೆ. ಇದರಿಂದ ಪಕ್ಷಿ ಸಂಕುಲಕ್ಕೆ ಹೆಚ್ಚಿನ ರೀತಿಯ ಆಕರ್ಷಣೆಯಾಗುತ್ತಿದೆ. ಜಿಲ್ಲೆಯಲ್ಲಿ ವಿವಿಧ ಜಾತಿ, ಪ್ರಬೇಧಕ್ಕೆ ಸೇರಿದ 285 ಪಕ್ಷಿಗಳಿದ್ದು, ಭೂತನಾಳದ ಸುತ್ತಮುತ್ತಲಿನ ಒಂದೇ ಪ್ರದೇಶದಲ್ಲಿ 185ಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿ ಸಂಕುಲ ವಾಸ ಇರುವುದು ಪತ್ತೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಅರಣ್ಯವಲಯ ಹೆಚ್ಚಿನ ಪ್ರಮಾಣದಲ್ಲಿ ಬಲ ಹೊಂದುತ್ತಿದೆ. ಅರಣ್ಯ ಪ್ರದೇಶಕ್ಕೆ ನಾವೆಲ್ಲರು ಹೆಚ್ಚಿನ ರೀತಿಯಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.
ಈ ವರ್ಷ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 25 ಲಕ್ಷ ಸಸಿ ನೆಡುವ ಗುರಿ ಮುಟ್ಟಲು ಕೆಬಿಜೆಎನ್‌ಎಲ್ ಹಾಗೂ ವಿವಿಧ ನರ್ಸರಿಗಳಿಂದ 8 ಲಕ್ಷ ಸಸಿ ಗುರುತಿಸಿ ಜೂನ್ ತಿಂಗಳಲ್ಲಿ ನೆಡುವ ಕಾರ್ಯ ಆರಂಭಿಸಬೇಕು. ವಿವಿಧ ಜಾತಿಯ ಸಸಿಗಳನ್ನು ಜಿಲ್ಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಬೇಕು. ಅವುಗಳ ಸೂಕ್ತ ಪೋಷಣೆ ಮಾಡುವಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಆಕ್ರಮಿತ ಪ್ರದೇಶ ಹಾಗೂ ಖಾಲಿ ಇರುವ ಜಾಗಗಳನ್ನು ಈಗಲೇ ಗುರುತಿಸಲು ಪ್ರಾರಂಭಿಸಬೇಕು. ಜತೆಗೆ ಸಸಿ ನೆಡಲು ಇರಾದೆ ವ್ಯಕ್ತವಾಗಿದ್ದು, ಜಿಲ್ಲೆಯ ವಾತಾವರಣಕ್ಕೆ ಹೊಂದಿಕೊಳ್ಳುವ ವಿವಿಧ ಜಾತಿಯ ಸಸಿ ನೆಡಲು ಹಾಗೂ ಅವುಗಳನ್ನು ಮರವಾಗಿ ಬೆಳೆಸಲು ಆದ್ಯತೆ ನೀಡಬೇಕು. ಜೂನ್ ಮೊದಲ ವಾರದಿಂದ ಕೆಬಿಜೆಎನ್ ಎಲ್ ನರ್ಸರಿಗಳಲ್ಲಿ ಕೃಷ್ಣಾ ನದಿ ತೀರದ ರೈತರಿಗೆ ಸಸಿ ವಿತರಣೆ ಆರಂಭಿಸಬೇಕು. ವಿವಿಧ ನರ್ಸರಿಗಳು ತಮ್ಮಲ್ಲಿರುವ ಸಸಿಗಳ ಮಾಹಿತಿ ನೀಡಬೇಕು. ಸರ್ಕಾರಿ ಕಚೇರಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಕಾಲೇಜು ಆವರಣಗಳಲ್ಲಿ ಸಸಿ ನೆಡುವಂತಾಗಬೇಕು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಉದ್ಯಾನವನಗಳ ಸುತ್ತಲು ಗಿಡಗಳನ್ನು ನೆಡಬೇಕು ಹಾಗೂ ಅವುಗಳ ಪಾಲನೆ, ಪೋಷಣೆ ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೋಟಿವೃಕ್ಷ ಅಭಿಯಾನದ ಅಂಗವಾಗಿ ಜಿಲ್ಲೆಯ ಕರಾಡದೊಡ್ಡಿ ಪ್ರದೇಶದಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಸಸ್ಯ ಸಂಗಮ ಉದ್ಯಾನವನ ನಿರ್ಮಿಸಲು ವಿವಿಧ ಜಾತಿಯ ಗಿಡಗಳ ವರದಿ ಪಡೆಯಲಾಗಿದೆ. ಈ ಕುರಿತು ಕೂಡಲೇ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಜಿಪಂ ಸಿಇಒ ಗೋವಿಂದರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ವಿಜಯಪುರ ಉಪವಿಭಾಗಾ ಧಿಕಾರಿ ಸೋಮಲಿಂಗ ಗೆಣ್ಣೂರ, ಸಂಗಮೇಶ ಬಿರಾದಾರ, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.