Advertisement

ಕೆಂಪೇಗೌಡ ಸಾಧನೆ ಪ್ರೇರಣೆಯಾಗಲಿ

12:20 PM Jun 28, 2019 | Naveen |

ವಿಜಯಪುರ: ಬೆಂದಕಾಳೂರು ಎಂಬ ಯೋಜನಾಬದ್ಧ ಪ್ರದೇಶವನ್ನು ಬೆಂಗಳೂರು ಮಹಾನಗರವನ್ನಾಗಿ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವಂತೆ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹೇಳಿದರು.

Advertisement

ಗುರುವಾರ ನಗರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮಗೆ ಮಾರ್ಗದರ್ಶನ ನೀಡಿದಂತಹ ಮಹನೀಯರ ತತ್ವಾದರ್ಶ ಹಾಗೂ ಮಾಡಿದ ಮಹತ್ಕಾರ್ಯಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಇದೇ ಕಾರಣಕ್ಕೆ ಮಹಾತ್ಮರ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಮಾರ್ಗದಲ್ಲಿ ಸಾಗುವ ಉದ್ದೇಶದಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನ ದೊಡ್ಡ ದೊಡ್ಡ ಕಟ್ಟಡಗಳು ಕೆಂಪೇಗೌಡರ ಹೆಸರಿನಲ್ಲಿವೆ. ಒಬ್ಬ ವ್ಯಕ್ತಿ ಇಂಥದ್ದೊಂದು ಮಹಾನಗರವನ್ನು ಅತ್ಯಂತ ಯೋಜನಾಬದ್ಧವಾಗಿ ಹಾಗೂ ಸುವ್ಯವಸ್ಥಿತವಾಗಿ ನಿರ್ಮಾಣ ಮಾಡ ಬಹುದು ಎಂಬುದಕ್ಕೆ ನಾಡಪ್ರಭು ಕೆಂಪೇಗೌಡರೆ ಸಾಕ್ಷಿ. ಅವರ ಸಾಧನೆ ನಮಗೆಲ್ಲ ಪ್ರೇರಣೆಯಾಗಬೇಕು ಎಂದು ಹೇಳಿದರು.

ಹಂಪಿ ಕನ್ನಡ ವಿವಿ ಪ್ರಸಾರಾಂಗ ಸಲಹಾ ಸಮಿತಿ ಸದಸ್ಯ ಸಾಹಿತಿ ಡಾ| ಸಿದ್ದಣ್ಣ ಉತ್ನಾಳ ಉಪನ್ಯಾಸ ನೀಡಿ, ಒಂದು ಕಾಡಿನಲ್ಲಿ ನಿರ್ಮಾಣವಾದ ಬೆಂಗಳೂರು ನಗರ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು, ಸಿಲಿಕಾನ್‌ ಸಿಟಿಯಾಗಿ ಹೆಸರು ಪಡೆದುಕೊಂಡಿದೆ. ಇದಕ್ಕೆ ಕೆಂಪೇಗೌಡರ ಶ್ರಮವೇ ಕಾರಣ ಎಂದರು.

Advertisement

ಎಲ್ಲ ಸಮುದಾಯದ ಜನರನ್ನು ಸೇರಿಸಿಕೊಂಡು ನಗರವನ್ನು ನಿರ್ಮಿಸಿದರು. ಅದರಂತೆ ಅವರು ಅನೇಕ ಕೆರೆಗಳು, ಉದ್ಯಾನ ವನಗಳು, ದೇವಾಲಯಗಳನ್ನು ನಿರ್ಮಿಸಿದ್ದಾರೆ. ದಿನಕ್ಕೆ 99 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೃಷಿಕರಾದ ಕೆಂಪೇಗೌಡರು ತಮ್ಮ ದೂರದೃಷ್ಟಿಯಿಂದ ವಿಶ್ವ ಮಟ್ಟದಲ್ಲಿ ಗುರುತಿಸುವಂತ ನಗರವನ್ನು ನಿರ್ಮಿಸಿದ ಮಾನವ ಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಅವರ ಚರಿತ್ರೆ ನಮಗೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾತ್ಮಾಜಿ ಉತ್ನಾಳ ದೇಗಿನಾಳ ಮಾತನಾಡಿದರು. ಶಂಕರಗೌಡ ಬ್ಯಾಕೋಡ, ಮಲ್ಲನಗೌಡ ಶಿವಪುತ್ರಗೌಡ, ಗಿರೀಶ ಕುಲಕರ್ಣಿ, ಸೋಮನಗೌಡ ಕಲ್ಲೂರ ಸೇರಿದಂತೆ ಇತರರು ಇದ್ದರು. ಕುಮಾರೇಶ್ವರ ಸಂಗೀತ ಶಾಲೆ ಮಕ್ಕಳು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಎಚ್.ಬಿ. ಸ್ವಾಗತಿಸಿದರು. ಶಿಕ್ಷಕ ಹುಮಾಯೂನ ಮಮದಾಪುರ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next