ವಿಜಯಪುರ: ಕಾರ್ಗಿಲ್ ಯುದ್ಧ ನಮ್ಮ ದೇಶದ ಸೈನಿಕರ ಕೆಚ್ಚೆದೆಯ ಪ್ರತೀಕ. ಕಾರ್ಗಿಲ್ ಯುದ್ಧ ವಿಜಯ ದಿವಸದ ಮೂಲಕ ಯುದ್ಧ ಸೈನ್ಯದ ಶೌರ್ಯವನ್ನು ಜಗತ್ತಿಗೆ ಪರಿಚಯಿಸುವ ವೇದಿಕೆ ಎನಿಸಿದೆ. ಆದ್ದರಿಂದ ಈ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಸಮರ್ಪಿಸಿದ ಭಾರತ ಮಾತೆ ವೀರ ಸೇನಾನಿಗಳಿಗೆ ನಮನ ಸಲ್ಲಿಸುವುದು ಪ್ರತಿ ಭಾರತೀಯನ ಕರ್ತವ್ಯ ಎಂದು ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಹವಾಲ್ದಾರ್ ಕೈಲಾಸಸಿಂಗ್ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ವಿ.ವಿ.ಎಸ್. ಕಲಾ ವಾಣಿಜ್ಯ ಮತ್ತು ಬಿ.ಸಿ.ಎ. ದರಬಾರ ಮಹಾವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಹುತಾತ್ಮ ಯೋಧರನ್ನು ಸ್ಮರಿಸುವುದು, ಸೇನೆಯ ತ್ಯಾಗ-ಬಲಿದಾನಗಳನ್ನು ಇಂದಿನ ಯುವ ವಿದ್ಯಾರ್ಥಿ ಸಮೂಹದ ಮನದಲ್ಲಿ ಬಿತ್ತುವ ಮೂಲಕ ದೇಶ ಸೇವೆಗೆ ತಮ್ಮನ್ನು ಸರ್ಪಿಸಿಕೊಳ್ಳುವ ಮನೋಭಅವ ಬೆಳೆಸಬೇಕು. ದೇಶ ಭಕ್ತಿ ಬೀಜ ಬಿತ್ತಿ, ಅವರಲ್ಲಿ ಛಲವನ್ನು ಹುಟ್ಟು ಹಾಕಿ ದೇಶ ಸೇವೆಗೆ ಸನ್ನದ್ಧರನ್ನಾಗಿ ಮಾಡಬೇಕಾಗಿದೆ ಎಂದರು.
ದರಬಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜೇಶ ದರಬಾರ ಮಾತನಾಡಿ, ಭಾರತೀಯ ಸೇನೆ ವಿವಿಧ ವಿಭಾಗಗಳಲ್ಲಿ ದೇಶ ಸೇವೆ ಮಾಡುವ ಸೈನಿಕರು, ತಮ್ಮ ಎದೆಗೆ ವೈರಿಗಳ ಗುಂಡು ತಾಗಿದರೂ ಕೊನೆ ಉಸಿರು ಇರುವವರೆಗೆ ದೇಶದ ರಕ್ಷಣೆಗಾಗಿ ಹೋರಾಡುವ ಪರಿ ನಿಜಕ್ಕೂ ಮೈ ರೋಮಾಂಚನ ಮೂಡಿಸುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಸಾಧಿಸಿದ ಗೆಲುವು ನಿಜಕ್ಕೂ ಸ್ಮರಣೀಯ. ನಮ್ಮ ಸುರಕ್ಷತೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಸೈನಿಕರ ತ್ಯಾಗ-ಬಲಿದಾನಗಳ ಋಣವನ್ನು ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಕನಿಷ್ಠ ಅವರನ್ನು ಸ್ಮರಿಸುವ ಮೂಲಕ ನಮ್ಮ ಹೆಮ್ಮೆಯನ್ನು ನಮ್ಮ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ಪ್ರಾಚಾರ್ಯ ಗಿರೀಶ ಮಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಸುನೀಲ ಕುಮಾರ ಯಾದವ ಸ್ವಾಗತಿಸಿದರು. ಮಂಜುನಾಥ ಜುನಗೊಂಡ ನಿರೂಪಿಸಿದರು. ಶಕೀಲ್ ಮುಲ್ಲಾ ವಂದಿಸಿದರು.