Advertisement

ದೇಶಕ್ಕಾಗಿ ಪ್ರಾಣತೆತ್ತ ವೀರಪುತ್ರ ದಾವಲಸಾಬ

10:44 AM Jul 26, 2019 | Naveen |

ಜಿ.ಎಸ್‌. ಕಮತರ
ವಿಜಯಪುರ:
ದೇಶಕ್ಕಾಗಿ ದುಡಿಯಬೇಕೆಂಬ ಅದಮ್ಯ ತುಡಿತ ಹೊಂದಿದ್ದ ಆ ಯುವಚೇತನ ಕೊನೆಗೂ ಭಾರತ ಮಾತೆ ರಕ್ಷಣೆಗಾಗಿಯೇ ತನ್ನ ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದಾರೆ. ದೇಶವೇ ತಮ್ಮನ್ನು ಕೊಂಡಾಡುವಂತ ವೀರ ಪರಾಕ್ರಮ ಪ್ರದರ್ಶಿಸಿ ಎರಡು ದಶಕಗಳ ಹಿಂದೆ ಪಾಕಿಸ್ತಾನ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ. ಭಾರತ ವಿಜಯ ಸಾಧಿಸುವುದಕ್ಕಾಗಿ ಪ್ರಾಣ ತೊರೆದ ಭಾರತಾಂಬೆಯ ನೂರಾರು ಧೀರ ಮಕ್ಕಳಲ್ಲಿ ಬಸವನಾಡಿನ ಯೋಧನೂ ಸೇರಿದ್ದ ಎಂಬುದು ಆತನ ಕುಟುಂಬಕ್ಕೆ ಮಾತ್ರವಲ್ಲ ಇಡಿ ಜಿಲ್ಲೆಯೇ ಹೆಮ್ಮೆಯಿಂದ ಹೇಳುತ್ತಿದೆ.

Advertisement

ದಾವಲಸಾಬ ಅಲಿಸಾಬ ಕಂಬಾರ 1972, ಜು.1ರಂದು ಮುದ್ದೇಬಿಹಾಳ ತಾಲೂಕಿನ ಬಳವಾಟದಲ್ಲಿ ಜನ್ಮ ತಳೆದಿದ್ದ. ಕೃಷಿಕರಿಗೆ ಪರಿಕರ ಮಾಡಿಕೊಡುವ ಗುಡಿ ಕೈಗಾರಿಕೆಯಿಂದ ಬರುತ್ತಿದ್ದ ಪುಡಿಗಾಸಿನಿಂದಲೇ ಅಲಿಸಾಬ ಕಂಬಾರ ಅವರ ನಾಲ್ಕು ಮಕ್ಕಳ ಸಹಿತ ಆರೇಳು ಜನರ ತುತ್ತಿನ ಚೀಲ ತುಂಬಬೇಕಿತ್ತು. ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗಲೇ ಕಂಬಾರ ಕುಟುಂಬ ಮುದ್ದೇಬಿಹಾಳ ಪಟ್ಟಣಕ್ಕೆ ವಲಸೆ ಬಂದಿತ್ತು.

ದಾವಲ ಸಾಬ ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ಹಂಬಲ ಇರಿಸಿಕೊಂಡಿದ್ದ. ಪರಿಣಾಮವೇ ಮನೆಗೆ ಹಿರಿ ಮಗನಾದ ತಾನು ವಿಜಯಪುರ ನಗರದಲ್ಲಿ ಅಂಜುಮನ್‌ ಶಾಲೆಯಲ್ಲಿ ಓದುವಾಗಲೇ 1992ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿ ದೇಶದ ಗಡಿ ಕಾಯಲು ನಿಂತಿದ್ದ. ಗಡಿಯಲ್ಲಿ ನಿಂತು ತನ್ನ ತಾಯ್ನಾಡಿನ ಜನರ ರಕ್ಷಣೆಯಲ್ಲಿ ತೊಡಗಿದ್ದಾಗ ವೈರಿ ರಾಷ್ಟ್ರ ಪಾಕಿಸ್ತಾನ 1999ರಲ್ಲಿ ಯುದ್ಧೋನ್ಮಾದಕ್ಕಾಗಿ ಕಾರ್ಗಿಲ್ ಪ್ರದೇಶದಲ್ಲಿ ಸಮರಕ್ಕೆ ನಿಂತಿತ್ತು. ಈ ಹಂತದಲ್ಲಿ ವಿಜಯಪುರ ಜಿಲ್ಲೆಯ ವೀರಪುತ್ರ ಕಾರ್ಗಿಲ್ ಪ್ರದೇಶದಲ್ಲಿ ವೈರಿ ರಾಷ್ಟ್ರದ ವಿರುದ್ಧ ಕಲಿಯಾಗಿ ಕಾದಾಡುತ್ತಿದ್ದ. ಆದರೆ ದಾವಲಸಾಬ್‌ ಜೊತೆ ದೇಶ ರಕ್ಷಣೆ ಕರ್ತವ್ಯದಲ್ಲಿದ್ದ ಉತ್ತರ ಪ್ರದೇಶ ಮೂಲದ ತನ್ನ ತಂಡದ ಕಮಾಂಡೆಂಟ್ ಅಜಯ ಶರ್ಮಾ ಹಾಗೂ ಶೇಖ್‌ ಎಂಬ ಸಹವರ್ತಿ ಮೇಲೆ ವೈರಿ ಪಾಳಯದಿಂದ ನುಗ್ಗಿದ ಗುಂಡುಗಳು ಮೂವರನ್ನೂ ಹುತಾತ್ಮರನ್ನಾಗಿಸಿತ್ತು.

ಮನೆಗೆ ಹಿರಿ ಮಗನಾಗಿದ್ದ ದಾವಲಸಾಬ್‌ ವೀರಮರ ಹೊಂದಿದಾಗ ಈತನನ್ನೇ ಅವಲಂಬಿಸಿದ ತಂದೆ ಅಲಿಸಾಬ್‌, ತಾಯಿ ಚಾಂದಬೀ, ಶಿಕ್ಷಣ ಪಡೆಯುತ್ತಿದ್ದ ತಮ್ಮಂದಿರಾದ ಲಾಡಸಾಬ್‌, ನಬಿಸಾಬ್‌ ಹಾಗೂ ಶಹಜಾನ್‌ ಸೇರಿದಂತೆ ಇಡಿ ಕುಟುಂಬ ಕಂಗಾಲಾಗಿತ್ತು. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಕ್ಕೆ ಸರ್ಕಾರ ಭೂಮಿ ಕೊಡುತ್ತೇವೆ, ಪರಿಹಾರ ನೀಡುತ್ತೇವೆ ಎಂದೆಲ್ಲ ಭರವಸೆ ನೀಡಿದ್ದವು. ದಾವಲಸಾಬ್‌ ಹೆತ್ತವರಿಗೆ ನಿಯಮದ ಪ್ರಕಾರ ಪೆನ್ಶನ್‌ ನೀಡಿದ್ದನ್ನು ಬಿಟ್ಟರೆ ಇತರೆ ಯಾವ ಬೇಡಿಕೆಯೂ ಈಡೇರಲಿಲ್ಲ. ಆದರೇ ಇಡಿ ದೇಶ ಅದರಲ್ಲೂ ಕನ್ನಡ ನಾಡು ದೇಶಕ್ಕಾಗಿ ತನ್ನನ್ನೇ ಬಲಿದಾನಗೈದ ದಾವಲಸಾಬ್‌ ಅವರ ಬಡ ಕುಟುಂಬದ ನೆರವಿಗೆ ಬಂದಿತ್ತು.

ನೆರವಿನ ಮಹಾಪೂರ: ಡಾ| ರಾಜ್‌ ಕುಟುಂಬ 1.50 ಲಕ್ಷ ರೂ. ನೀಡಿದರೆ, ನಟ ಜಗ್ಗೇಶ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವರು ತಲಾ 50 ಸಾವಿರ ರೂ. ಕೊಟ್ಟಿದ್ದು ಸೇರಿ ಕಂಬಾರ ಕುಟುಂಬಕ್ಕೆ ಸುಮಾರು 40 ಲಕ್ಷ ರೂ. ನೆರವು ಹರಿದು ಬಂದಿತ್ತು. ಹಾಲಿ ಸಚಿವರಾಗಿರುವ ಎಂ.ಬಿ. ಪಾಟೀಲ ಅವರು ಆರ್ಥಿಕ ನೆರವಿನ ಸಹಿತ ತಮ್ಮ ಅಧ್ಯಕ್ಷತೆಯಲ್ಲಿರುವ ಬಿಎಲ್ಡಿಇ ಸಂಸ್ಥೆಯಲ್ಲಿ ಹುತಾತ್ಮನ ಸಹೋದರ ಶಹಜಾನನಿಗೆ ಉದ್ಯೋಗ ನೀಡಿ ಗೌರವ ಸಲ್ಲಿಸಿದ್ದಾರೆ.

Advertisement

ಹುತಾತ್ಮನ ಕುಟುಂಬಕ್ಕೆ ಹರಿದು ಬಂದ ನೆರವಿನಿಂದ ದಾವಲಸಾಬ ಅವರ ತಮ್ಮಂದಿರಾದ ಲಾಡಸಾಬ್‌ ಹಾಗೂ ಮಬಿಸಾಬ್‌ ಅಣ್ಣ ಹಾಗೂ ಅಣ್ಣನಂತ ನೂರಾರು ಅವರ ವೀರಯೋಧರ ಸ್ಮರಣೆಗಾಗಿ ಮುದ್ದೇಬಿಹಾಳದಲ್ಲಿ ಕಾರ್ಗಿಲ್ ಎಂದೇ ಹೆಸರಿಟ್ಟಿರುವ ಆಟೋಮೊಬೈಲ್ ತೆರೆದಿದ್ದಾರೆ. ಇದಾದ ಬಳಿಕ ತಮ್ಮೂರಿನ ಯುವಕರು ಸೇರಿ ಮುದ್ದೇಬಿಹಾಳ ಹಳೇ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಕುಟುಂಬ ಸದಸ್ಯರ ಸಹಕಾರದೊಂದಿಗೆ ಕಳೆದ ವರ್ಷ ಕಾರ್ಗಿಲ್ ವೀರ ಯೋಧನ ಪುತ್ಥಳಿ ಸಹಿತ ಸ್ಮಾರಕ ನಿರ್ಮಿಸಿದೆ. ಅಷ್ಟರ ಮಟ್ಟಿಗೆ ಕಾರ್ಗಿಲ್ ಅಮರ ವೀರನಿಗೆ ತವರು ನೆಲ ಕೃತಜ್ಞವಾಗಿದೆ.

ನಮ್ಮಂಥವರ ಸಾವಿಗೆ ಯಾವ ಅರ್ಥವಿಲ್ಲ, ನನ್ನ ಅಣ್ಣ ಹಾಗೂ ಆತನಂತ ನೂರಾರು ಧಿಧೀರ ಪುತ್ರರನ್ನು ಕಳೆದುಕೊಂಡಾಗ ಇಡೀ ದೇಶವೇ ತಮ್ಮ ಮಗನನ್ನು ಕಳೆದಕೊಂಡಂತೆ ಕಣ್ಣೀರು ಹಾಕಿದೆ, ಇದಕ್ಕಾಗಿ ನನ್ನಣ್ಣನ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ಬಲಿದಾನಗೈದು, ಹುತಾತ್ಮರಾಗಿ ತಮ್ಮ ದೇಹದ ಮೇಲೆ ತ್ರಿವರ್ಣ ಧ್ವಜ ಹಾಕಿಕೊಳ್ಳುವ ಮೂಲಕ ನಮ್ಮ ಕುಟುಂಬಕ್ಕೆ ಸಮಾಜದಲ್ಲಿ, ದೇಶದಲ್ಲಿ ವಿಶೇಷ ಸ್ಥಾನ ತಂದುಕೊಟ್ಟಿದ್ದಾರೆ.
•ಲಾಡಸಾಬ ಅಲಿಸಾಬ ಕಂಬಾರ,
ಕಾರ್ಗಿಲ್ ಹುತಾತ್ಮ ಯೋಧನ ಸಹೋದರ

Advertisement

Udayavani is now on Telegram. Click here to join our channel and stay updated with the latest news.

Next