ವಿಜಯಪುರ: ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆ ಎಂದರೆ ಮೊದಲು ನೆನಪಿಗೆ ಬರುವುದು ಕಾಖಂಡಕಿ ಗ್ರಾಮದಲ್ಲಿ ನಡೆಯುವ ಹೋರಿ ಓಟದ ಸ್ಪರ್ಧೆ. ಅತ್ಯಂತ ಆಪಾಯಕಾರಿ ರೀತಿಯ ಸಾಹಸ ಎಂಬಂತೆ ಹೋರಿಗಳನ್ನು ಓಡಿಸುವ ಪಾರಂಪರಿಕವಾಗಿ ನಡೆದು ಬಂದಿರುವ ಹಬ್ಬಕ್ಕೆ ವ್ಯಕ್ತಿಯೊಬ್ಬನ ಸಾವಿನಿಂದಾಗಿ ಇದೀಗ ಕಪ್ಪು ಚುಕ್ಕೆ ಮೆತ್ತಿಕೊಂಡಿದೆ. ಸಾಂಪ್ರದಾಯಿಕ ಈ ಹಬ್ಬವನ್ನೇ ರದ್ದು ಮಾಡುವ ಕುರಿತು ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
Advertisement
ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಪ್ರತಿ ವರ್ಷದ ಕಾರ ಹುಣ್ಣಿಮೆ ನಂತರ ಏಳನೇ ದಿನ ಕರಿ ಹಬ್ಬಕ್ಕಾಗಿ ಹೋರಿ-ಎತ್ತುಗಳನ್ನು ಬೆದರಿಸಿ ಓಡಿಸುವ ಸ್ಪರ್ಧೆ ನಡೆಯುತ್ತದೆ. ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಬಹುತೇಕ ಹಳ್ಳಿಗಳಲ್ಲಿ ಕಾರ ಹುಣ್ಣಿಮೆ ಹಬ್ಬದ ದಿನದಂದು ಅನ್ನದಾತರು ತಮ್ಮ ನೆಚ್ಚಿನ ಎತ್ತು-ಹೋರಿಗಳನ್ನು ಸಿಂಗರಿಸಿ ಕರಿ ಹರಿಯಲು ಓಡಿಸುವುದು ಪರಂಪರಾಗತ ಹಬ್ಬ ಎನಿಸಿದೆ.
Related Articles
Advertisement
ಆದರೆ ಪ್ರಸಕ್ತ ವರ್ಷದ ಕರಿ ಹಬ್ಬದಲ್ಲಿ ರೊಚ್ಚಿಗೆದ್ದು ಓಡುವ ಒಂದು ಎತ್ತು ಹತ್ತಾರು ಜನರು ಎರಡು ಹಗ್ಗಗಳಿಂದ ಕಟ್ಟಿ ಹಿಡಿದಿದ್ದರೂ ಜನರ ಮೇಲೆ ಮಾರಕ ರೀತಿಯಲ್ಲಿ ದಾಳಿ ಮಾಡಿದೆ. ಬಲಭೀಮ ಮೈಲಾರಿ ಪೋಳ ಎಂಬ 40 ವರ್ಷದ ವ್ಯಕ್ತಿಯನ್ನು ಕೊಂಬಿನಿಂದ ಇರಿದು ತೀವ್ರ ಗಾಯಗೊಳಿಸಿತ್ತು. ತುರ್ತು ಚಿಕಿತ್ಸೆ ಸಿಗದೇ ಶುಕ್ರವಾರ ಅಸುನೀಗಿದ್ದಾನೆ. ಈ ಸಾವಿನ ಮೂಲಕ ಕಾಖಂಡಕಿ ಗ್ರಾಮದ ಐತಿಹಾಸಿಕ ಹಾಗೂ ಪಾರಂಪರಿಕ ಕರಿ ಹಬ್ಬದ ಮೇಲೆ ಕಪ್ಪು ಚುಕ್ಕೆ ಮೂಡಿಸಿದೆ.
ಇದಲ್ಲದೇ ಸ್ಪರ್ಧೆಯನ್ನು ನೋಡಲು ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಾಖಂಡಕಿ ಗ್ರಾಮದಲ್ಲಿ ಹಳೆ ಮನೆಗಳ ಮೇಲೆ, ವಿದ್ಯುತ್ ಕಂಬ-ಪರಿವರ್ತಕಗಳ ಮೇಲೆ, ಮರಗಳ ಮೇಲೆ ಮಿತಿ ಮೀರಿ ಜನರು ಕುಳಿತುಕೊಳ್ಳುತ್ತಾರೆ. ಇದರಿಂದ ಭವಿಷ್ಯದಲ್ಲಿ ಇನ್ನೂ ಭಾರಿ ದುರಂತ ಸಂಭವಿಸುವ ಭೀತಿಯನ್ನೂ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಸಾರ್ವಜನಿಕ ವಲಯದಲ್ಲಿ ಜೀವ ಘಾತುಕ ರೀತಿಯ ಈ ಸ್ಪರ್ಧೆಯನ್ನು ರದ್ದುಗೊಳಿಸುವ ಕುರಿತು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಸಾಂಪ್ರದಾಯಿಕ ಹೆಸರಿನಲ್ಲಿ ಈಚೆಗೆ ಕರಿ ಓಡಿಸುವ ಹೋರಿಗಳಿಗೆ ಮಾದಕ ವಸ್ತುಗಳನ್ನು ನೀಡಲಾಗುತ್ತಿದೆ. ಹೀಗಾಗಿ ಪ್ರತಿ ವರ್ಷ ಹಲವರಿಗೆ ಗಂಭೀರ ಗಾಯಾಗಳಾಗುತ್ತಿವೆ. ಮತ್ತೂಂದೆಡೆ ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿ ಪರಂಪರೆ ಹೆಸರಿನಲ್ಲಿ ಜಾನುವಾರುಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಜೀವಕ್ಕೆ ಕುತ್ತು ತರುತ್ತಿರುವ ಕಾಖಂಡಕಿ ಕರಿ ಹಬ್ಬವನ್ನು ರದ್ದು ಮಾಡುವುದೇ ಲೇಸು. ಇಲ್ಲವಾದಲ್ಲಿ ಗ್ರಾಮಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ. ಇನ್ನೂ ಹೆಚ್ಚಿನ ದುರಂತ ಸಂಭವಿಸುವ ಮುನ್ನವೇ ಸರ್ಕಾರ-ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.•ಎಸ್.ಬಿ. ಕೋರಿ, ಕಾಖಂಡಕಿ ಗ್ರಾಮಸ್ಥ ಪಾರಂಪರಿಕ ವ್ಯವಸ್ಥೆಯಲ್ಲಿ ಲೋಪಗಳಿದ್ದರೆ ನ್ಯೂನ್ಯತೆ ಸರಿಪಸಬೇಕೆ ಹೊರತು ಹಿರಿಯರು ಮಾಡಿಕೊಂಡು ಬಂದಿದ್ದ ಕರಿ ಹಬ್ಬವನ್ನೇ ರದ್ದು ಮಾಡುವುದು ಪರಿಹಾರವಲ್ಲ. ಇದೇ ಮೊದಲ ಬಾರಿಗೆ ನಮ್ಮೂರಲ್ಲಿ ನಡೆದಿರುವ ಜೀವ ಅಪಾಯಕಾರಿ ದುರಂತದಿಂದ ಪಾಠ ಕಲಿತು, ಮಾರ್ಪಾಡಿನೊಂದಿಗೆ ಕರಿ ಹಬ್ಬ ಮುಂದುವರಿಸಬೇಕು. ಘಟನೆಯಲ್ಲಿ ಮೃತನಾದ ಬಲಭೀಮ ಪೋಳ ಮದ್ಯ ವ್ಯಸನಿಯಾಗಿದ್ದು, ದೈಹಿಕ ಶಕ್ತಿ ಇಲ್ಲದಿದ್ದರೂ ಸ್ಪರ್ಧೆಯಲ್ಲಿ ಪಾಲ್ಗೊಂಡು ಹುಂಬತನದಿಂದ ವರ್ತಿಸಿದ್ದ. ಗಾಯಗೊಂಡರೂ ತನಗೇನೂ ಆಗಿಲ್ಲ ಎಂದು ತುರ್ತು ಚಿಕಿತ್ಸೆ ಪಡೆಯುವಲ್ಲಿ ನಿರ್ಲಕ್ಷ್ಯ ಮಾಡಿದ್ದೇ ಸಾವಿಗೆ ಕಾರಣವಾಗಿದೆ.
•ಮಲ್ಲಿಕಾರ್ಜುನ ಪರಸಣ್ಣವರ,
ಕಾಖಂಡಕಿ ಗ್ರಾಪಂ ಮಾಜಿ ಅಧ್ಯಕ್ಷ