Advertisement

ಉಕ್ಕಿ ಹರಿಯಿತು ಕನ್ನಡ ಪ್ರೇಮ

01:03 PM Nov 02, 2019 | Naveen |

ವಿಜಯಪುರ: ಆಧುನಿಕ ಹಾಗೂ ಕಂಪ್ಯೂಟರ್‌ ತಂತ್ರಜ್ಞಾನ ವೇಗದ ಈ ಪರಿಸ್ಥಿತಿಯಲ್ಲಿ ಮಾತೃ ಭಾಷೆ ಕನ್ನಡವನ್ನು ಭವಿಷ್ಯದ 25 ವರ್ಷಗಳಲ್ಲಿ ಸಮೃದ್ಧಗೊಳಿಸುವಲ್ಲಿ ಅಗತ್ಯ ತಂತ್ರಜ್ಞಾನ ರೂಪಿಸಬೇಕಾದ ಅವಶ್ಯಕತೆ ಇದೆ. ಜೊತೆಗೆ ಈ ತಂತ್ರಜ್ಞಾನ ಕನ್ನಡದ ಎಲ್ಲ ಮನಸ್ಸುಗಳನ್ನು ತಲುಪುವ ಕೆಲಸವೂ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಕರೆ ನೀಡಿದರು.

Advertisement

ಶುಕ್ರವಾರ ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಶತ ಶತಮಾನಗಳ ಇತಿಹಾಸ ಹೊಂದಿರುವ ಕರ್ನಾಟಕ ಹಾಗೂ ಕನ್ನಡ ಭಾಷೆ ಹಲವಾರು ರೀತಿಯಲ್ಲಿ ಬೆಳೆಯುತ್ತ ಬಂದಿದೆ. ಬನವಾಸಿ ಕಾಲದಿಂದಲೂ ಕನ್ನಡ ಭಾಷೆ, ಸಂಸ್ಕೃತಿಯನ್ನು ಅನೇಕರು ಪೋಷಿಸಿಕೊಂಡು ಬರುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್‌, ವಿಜ್ಞಾನ ಹೀಗೆ ಅನೇಕ ಕ್ಷೇತ್ರಗಳಲ್ಲಿ ಕನ್ನಡಿಗರು ಜಾಗತಿಕ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ ಎಂದರು.

ಆದರೆ ಪ್ರಸ್ತುತ ಆಧುನಿಕ ತಂತ್ರಜ್ಞಾನದ ಕ್ಷೀಪ್ರ ಬೆಳವಣಿಗೆ ಪರಿಣಾಮ ಹಲವು ರೀತಿಯಲ್ಲಿ ಪ್ರಗತಿ ಸಾಧಿಸಿದ್ದರೂ ತಂತ್ರಜ್ಞಾನದ ಹೊರತಾಗಿ ನಾವು ಹಾಗೂ ನಮ್ಮ ಭಾಷೆಗಳು ಬದುಕಲು ಅಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ನಾಡ ಜನರ ಜೀವದ ಉಸಿರ ಭಾಷೆಯಾಗಿರುವ ಕನ್ನಡ ಭಾಷೆ ಸಮೃದ್ಧಿಗೆ ಮುಂದಾಲೋಚನೆಯ ತಂತ್ರಜ್ಞಾನ ರೂಪಿಸುವ ಅಗತ್ಯವಿದೆ ಎಂದರು.

ಇಂಗ್ಲಿಷ್‌, ಜರ್ಮನಿ ಹಾಗೂ ಜಪಾನಿ ಮೊದಲಾದ ಭಾಷೆಗಳು ವಿಶ್ವದಾದ್ಯಂತ ಬೆಳೆವಣಿಗೆ ಕಂಡು ವ್ಯಾಪಕವಾಗಿ ಬಳಕೆಗೆ ಬಂದಿರುವುಕ್ಕೆ ಆ ಭಾಷೆಗಳು ತಂತ್ರಜ್ಞಾನ ಅಳಡಿಸಿಕೊಂಡಿರುವುದೇ ಪ್ರಮುಖ ಕಾರಣ. ಹೀಗಾಗಿ ಭವಿಷ್ಯದಲ್ಲಿ ಕನ್ನಡ ನಾಡಿನ ಅಧಿಕೃತ ಆಡಳಿತ ಭಾಷೆ ಕನ್ನಡ ಬದುಕಿನಲ್ಲಿ ಸಹಜವಾಗಬೇಕು. ಸರ್ಕಾರ ಕನ್ನಡವನ್ನು ಅಧಿಕೃತವಾಗಿ ಆಡಳಿತ ಭಾಷೆಯಾಗಿ ಘೋಷಿಸಿದ್ದರೂ ನಮ್ಮಲ್ಲಿರುವ ಇಂಗ್ಲಿಷ್‌ ವ್ಯಾಮೋಹ ಹಾಗೂ ಮಾತೃ ಭಾಷೆ ಕುರಿತು ನಮ್ಮ ಸಿನಿಕ ಮನಸ್ಥಿತಿಯ ಕಾರಣ ಕನ್ನಡವನ್ನು ಸಂಪೂರ್ಣ ಆಡಳಿತ ಭಾಷೆಯಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

Advertisement

ಹೀಗಾಗಿ ಕನ್ನಡ ನೆಲದ ನಾವುಗಳು ಕನ್ನಡ ಭಾಷೆಗೆ ಪ್ರಥಮಾದ್ಯತೆ ನೀಡಬೇಕು. ನಿತ್ಯದ ಬದುಕಿನಲ್ಲಿ ಕನ್ನಡವನ್ನೇ ಉಸಿರಾಗಿಸಿಕೊಳ್ಳಬೇಕು. ಆಡಳಿತದಲ್ಲಿ ಅಧಿಕಾರಿ-ಸಾರ್ವಜನಿಕರು ಕೂಡ ಕನ್ನಡವನ್ನೇ ಕಡ್ಡಾಯವಾಗಿ ಬಳಸುವುದು ನಮ್ಮ ಕರ್ತವ್ಯ ಎಂಬ ಬದ್ಧತೆ ತೋರಿದರೆ ಮಾತ್ರವೇ ಕಡ್ಡಾಯ ಕನ್ನಡದ ಅನುಷ್ಠಾನ ಸಾಧ್ಯ ಎಂದು ಹೇಳಿದರು.

ಆದಿಕವಿ ಪಂಪ, ರನ್ನ, ಕುಮಾರವ್ಯಾಸ, ಬಸವಾದಿ ಶರಣರಿಂದ ಹಿಡಿದು ಸಮಕಾಲೀನ ಖ್ಯಾತ ಸಾಹಿತಿಗಳವರೆಗೆ ಕನ್ನಡ ಭಾಷೆ ಶ್ರೀಮಂತಿಕೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾರಸ್ವತ ಲೋಕದ ಗ್ರಂಥಗಳನ್ನು ನಾವು ಅಧ್ಯಯನ ಮಾಡಬೇಕಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಇಡಿ ಜಗತ್ತಿಗೆ ವಚನ ಸಾಹಿತ್ಯ ಎಂಬ ಅಪೂರ್ವವಾದ ಸಾಹಿತ್ಯ ನೀಡಿದರು. ತಮ್ಮ ವಚನ ಸಾಹಿತ್ಯದ ಮೂಲಕ ಜೀವನ ಮೌಲ್ಯಗಳನ್ನು ಪ್ರತಿಪಾದಿಸಿದರು.

ನಾವು ನಮ್ಮ ಮಾತೃಭಾಷೆ ಕನ್ನಡದ ಬಗ್ಗೆ ಅಭಿಮಾನ ಹೊಂದಬೇಕೆ ವಿನಃ ಇನ್ನೊಂದು ಭಾಷೆ ಬಗ್ಗೆ ದುರಾಭಿಮಾನವನ್ನಲ್ಲ. ಕನ್ನಡ ನೆಲದಲ್ಲಿ ಬದುಕುತ್ತಿರುವ ನಾವೆಲ್ಲ ಜಲ, ನೆಲ ಹಾಗೂ ಭಾಷೆ ಪ್ರಶ್ನೆ ಬಂದಾಗ ಒಟ್ಟಾಗಿ ಎದುರಿಸಬೇಕು ಎಂದರು.

ಹಲವು ಆಯಾಮಗಳಿಂದ ಕನ್ನಡ ಭಾಷಾಭಿವೃದ್ಧಿಗೆ ಒತ್ತು ನೀಡುವ ಕೆಲಸ ನಡೆಯಬೇಕಿದೆ. ಆಗ ಮಾತ್ರ ಕನ್ನಡ ಭಾಷೆ ಹಾಗೂ ಕರ್ನಾಟಕವನ್ನು ವಿಶ್ವದ ನೆಲೆಗೆ ಕೊಂಡೊಯ್ಯಬಹುದು ಎಂಬ ಆಶಯವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮೇಲ್ಮನೆ ಸದಸ್ಯ ಅರುಣ ಶಹಾಪುರ, ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಪ್ರಕಾಶ ನಿಕ್ಕಂ ವೇದಿಕೆಯಲ್ಲಿದ್ದರು..

Advertisement

Udayavani is now on Telegram. Click here to join our channel and stay updated with the latest news.

Next