Advertisement

ಜಿಲ್ಲಾದ್ಯಂತ ಕನಕ ಜಯಂತಿ ಸಂಭ್ರಮ

11:46 AM Nov 16, 2019 | Naveen |

ವಿಜಯಪುರ: ಸಂತ ಶ್ರೇಷ್ಠ ಕನಕದಾಸರು ಜಾತಿ ರಹಿತ ಸಮಾಜ ನಿರ್ಮಿಸಲು ಜಾತ್ಯತೀತ, ತತ್ವಾದರ್ಶ ಬೋಧಿ ಸುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಿದ್ದರು. ಅವರ ತತ್ವಾದರ್ಶ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ನಾಗರಿಕತೆಯ ಸಾಮರಸ್ಯದ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಸಂಸದ ರಮೇಶ ಜಿಗಜಿಣಗಿ ಆಭಿಪ್ರಾಯಪಟ್ಟರು.

Advertisement

ಶುಕ್ರವಾರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಮಾತನಾಡಿ, ಸಂತ-ಶರಣರ ಬಗ್ಗೆ ಓದಿ ತಿಳಿದು ಜ್ಞಾನ ಹೊಂದಿದರೆ ಬಾಳು ಬೆಳಕು; ಇಲ್ಲವಾದರೆ ಅಜ್ಞಾನದ ಕತ್ತಲೇ ಗತಿ. ಹಾಗಾಗಿ ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಸಂತ-ಶರಣರ ಇತಿಹಾಸವನ್ನು ನಿರಂತರ ಅಧ್ಯಯನ ಮಾಡುವ ಮೂಲಕ ಆದರ್ಶ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಮಾಜಕ್ಕೆ ಸಂದೇಶ: ಜಾತಿ, ಮತಗಳ ಹೆಸರಿನಲ್ಲಿ ಹೊಡೆದಾಡುವ ವ್ಯವಸ್ಥೆಗೆ ಕಡಿವಾಣ ಹಾಕುವುದೇ ಶರಣರು-ಸಂತರ ಜಯಂತಿ ಆಚರಣೆ ಮೂಲ ಉದ್ದೇಶ. ಕುಲದ ಹೆಸರಿನಲ್ಲಿ ಹೊಡೆದಾಡುವ ಮನುಜರು ಕುಲದ ನೆಲೆಯನ್ನು ಬಲ್ಲಿರೇನು ಎಂದು ಪ್ರಶ್ನಿಸುವ ಮೂಲಕ ನಾಗರಿಕ ಸಮಾಜದ ಸಂದೇಶ ನೀಡಿದ್ದಾರೆ. ದೇವರ ಇರುವಿಕೆ ಕುರಿತು ಜಗತ್ತಿಗೆ ವಿಶಿಷ್ಟತೆ ಮೂಲಕ ಸಾರಿದ ಕನಕದಾಸರು ಸಂತ ಶ್ರೇಷ್ಠ ಎನಿಸಿಕೊಂಡಿದ್ದಾರೆ ಎಂದರು.

ಉಪನ್ಯಾಸ ನೀಡಿದ ಜಿಲ್ಲಾ ಆಸ್ಪತ್ರೆ ಎಆರ್‌ಟಿ ಕೇಂದ್ರದ ಹಿರಿಯ ಆಪ್ತ ಸಮಾಲೋಚಕ ರವಿ ಕಿತ್ತೂರ, ಹಾಲುಮತ ಸಮಾಜದಲ್ಲಿ ಹುಟ್ಟಿದರೂ ಕನಕದಾಸರು, ಅಹಲ್ಯಾಬಾಯಿ ಹೋಳ್ಕರ್‌, ಸಂಗೊಳ್ಳಿ ರಾಯಣ್ಣ ಅವರಂಥ ಸಂತರು ಇಡೀ ಸಮುದಾಯಕ್ಕಾಗಿ ಮಿಡಿದರು. ಮನುಲಕುಲ ಪ್ರೀತಿಸುವುದನ್ನು ಹೇಳಿದ ಈ ಮಹಾತ್ಮರು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಂದೇಶ ನೀಡಿದರು. ಇಂತಹ ಮಹಾನ್‌ ಚೇತನರ ತತ್ವಗಳ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಬೇಕು ಎಂದರು.

Advertisement

ಕಾಗಿನೆಲೆ ಕ್ಷೇತ್ರ ಅಭಿವೃದ್ಧಿಗೆ ಒತ್ತು: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಬೆಂಗಳೂರು ಸೇರಿದಂತೆ ಇತರೆ ವಿಶ್ವವಿದ್ಯಾಲಯಗಳಲ್ಲಿ ಕನಕ ಅಧ್ಯಯನ ಪೀಠ ಸ್ಥಾಪಿಸಿ, ಕನಕದಾಸರ ಸಾಹಿತ್ಯ- ತತ್ವಾದರ್ಶಗಳನ್ನು ಸಮಾಜಕ್ಕೆ ಬಿತ್ತುವ ಕಾರ್ಯ ನಡೆಯುತ್ತಿದೆ. ಕಾಗಿನೆಲೆ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರಗಳು ಗಮನ ನೀಡಿದ್ದು, ಇನ್ನೂ ಹೆಚ್ಚಿನ ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸವಾಗಬೇಕು ಎಂದರು.

ಪ್ರೊ| ಎ.ಎಚ್‌. ಕೊಳಮಲಿ, ಬೀರಪ್ಪ ಜುಮನಾಳ, ವಿಜಯಲಕ್ಷ್ಮೀ  ಹುಡೇದ ಕನಕದಾಸರ ಕುರಿತ ಕವನ ವಾಚಿಸಿದರು. ಯರಝರಿ ಮಲ್ಲಾರ ಶ್ರೀ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ಪುರಸ್ಕೃತ ಡಿವೈಎಸ್‌ಪಿ ಕೆ.ಎಸಿ. ಲಕ್ಷ್ಮೀನಾರಾಯಣ ಅವರನ್ನು ಸನ್ಮಾನಿಸಲಾಯಿತು. ಆಕಾಶವಾಣಿ ಕಲಾವಿದ ಬಸವರಾಜ ಭಂಟನೂರ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಚ್‌. ಪ್ರಸನ್ನ, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ಬಿ. ಕುಂಬಾರ, ಕೃಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ, ಜಿಪಂ ಸದಸ್ಯೆ ಸುಜಾತಾ ಕಳ್ಳಿಮನಿ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಶಿಕ್ಷಕ ಎಚ್‌.ಎ. ಮಮದಾಪುರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next