Advertisement

2018 ಕೋಟಿ ವೆಚ್ಚದಲ್ಲಿ ಜಲಧಾರೆ ಅನುಷ್ಠಾನ

07:40 PM Dec 13, 2019 | Naveen |

ವಿಜಯಪುರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ 2018 ಕೋಟಿ ರೂ.ವೆಚ್ಚದಲ್ಲಿ ಜಲಧಾರೆ ಯೋಜನೆ ಅನುಷ್ಠಾನಗೊಳ್ಳಲಿದೆ. ಈ ಕುರಿತು ಪ್ರಾಥಮಿಕ ಸಮೀಕ್ಷಾ ವರದಿ ಸಿದ್ಧಗೊಂಡಿದೆ. ಹಣಕಾಸು ಇಲಾಖೆ ಅನುಮತಿ ಪಡೆಯುವ ಮೂಲಕ ಡಿಬಿಒಟಿ (ಡಿಸೈನ್‌ ಬಿಲ್ಟ್ ಆಪರೇಟ್‌ ಟ್ರಾನ್ಸಫರ್‌) ಆಧಾರದ ಮೇಲೆ ಟೆಂಡರ್‌ ಪ್ರಕ್ರಿಯೆ ನಡೆಸಿ, ಅರ್ಹ ಗುತ್ತಿಗೆದಾರರನ್ನು ನೇಮಿಸಲಾಗುತ್ತದೆ ಎಂದು ಜಲಧಾರೆ ಯೋಜನೆ ತಂಡದ ಗ್ರಾಮೀಣ ಕುಡಿಯುವ ನೀರು ಯೋಜನಾ ನಿರ್ವಹಣಾ ಘಟಕದ ಪಿ.ಕುರಿಯನ್‌ ತಿಳಿಸಿದರು.

Advertisement

ಗುರುವಾರ ಜಿಲ್ಲೆಯಾದ್ಯಂತ ನೀರು ಸಂಪರ್ಕ ಕಲ್ಪಿಸುವ ಜಲಧಾರೆ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಯೋಜನೆಯ ಅಧ್ಯಯನಕ್ಕೆ ಆಗಮಿಸಿರುವ ರಾಜ್ಯ ಸಾಮಾಜಿಕ ಸಲಹೆಗಾರ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ನಿರ್ವಹಣಾ ಘಟಕದ ಪ್ರತಿನಿಧಿಗಳ ತಂಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ವೈ. ಎಸ್‌. ಪಾಟೀಲ, ಜಿಪಂ ಸಿಇಒ ಗೋವಿಂದರೆಡ್ಡಿ ಇವರೊಂದಿಗೆ ಸಮಾಲೋಚನೆ ನಡೆಸಿದ ಜಲಧಾರೆ ತಂಡ, ಈ ಕುರಿತು ಚರ್ಚಿಸಿತು.

ಜಿಲ್ಲೆಯ 1000 ಕ್ಕೂ ಹೆಚ್ಚು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಎರಡು ಹಂತದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಮೊದಲ ಹಂತದಲ್ಲಿ ವಿಜಯಪುರ, ಬಸವನಬಾಗೇವಾಡಿ ಹಾಗೂ ಇಂಡಿ ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರೀ ಜಲಾಶಯದ ನೀರನ್ನು ಜಲ ಸಂಪನ್ಮೂಲವಾಗಿ ಗುರುತಿಸಿದೆ. 2ನೇ ಹಂತದಲ್ಲಿ ಜಿಲ್ಲೆಯ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕುಗಳನ್ನು ಯೋಜನೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಇದಕ್ಕಾಗಿ ನಾರಾಯಣಪುರ ಬಸವಸಾಗರ ಜಲಾಶಯದಿಂದ ಜಲಮೂಲ ಗುರುತಿಸಲಾಗಿದೆ.

ಇತರ ನಗರ ಸ್ಥಳೀಯ ವ್ಯಾಪ್ತಿಯಲ್ಲಿ 131 ಎಲ್‌ಪಿಸಿಡಿ (ಲೀಟರ್‌ ಪರ್‌ ಕ್ಯಾಪಿಟಾ ಪರ ಡೇ) ನೀರು ಸರಬರಾಜು ಉದ್ದೇಶ ಇದೆ. ಈಗಾಗಲೇ ಇಂಡಿ, ನಾರಾಯಣಪುರ ಬಸವಸಾಗರ, ಆಲಮಟ್ಟಿ ಲಾಲ ಬಹಾದ್ದೂರ ಶಾಸ್ತ್ರೀ ಸಾಗರಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ಮುದ್ದೇಬಿಹಾಳ, ಬಸವನ ಬಾಗೇವಾಡಿ ತಾಲೂಕು ವಿಶೇಷವಾಗಿ ಅತಿ ಹೆಚ್ಚು ಬುಡಕಟ್ಟು ಜನಸಂಖ್ಯೆ ಹೆಚ್ಚಿರುವ ಮುದ್ದಾಪುರ ಹಾಗೂ ಹೊನ್ನೂರಗಳಿಗೆ ಭೇಟಿ ನೀಡುವುದಾಗಿ ವಿವರಿಸಿದರು.

ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನಿಂದ ಶೇ.70ರಷ್ಟು ಹಾಗೂ ಶೇ.30 ರಷ್ಟು ಅನುದಾನ ರಾಜ್ಯ ಸರ್ಕಾರ ಭರಿಸಲಿದೆ. ರಾಜ್ಯದ ವಿಜಯಪುರ ಸೇರಿದಂತೆ 4 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ಒಟ್ಟು 5 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಯೋಜನೆಗೆ ಮೂಲಸೌಕರ್ಯ ಕಲ್ಪಿಸಲು ಪೂರಕ ಅಂಶಗಳ ಕುರಿತಂತೆ ಅಧ್ಯಯನ ನಡೆಸುವ ಜತೆಗೆ ಈಗಾಗಲೇ ಜಾರಿಯಲ್ಲಿರುವ ಇತರೆ ಯೋಜನೆಗಳ ಕುರಿತಂತೆಯೂ ಸೂಕ್ತ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಂಡವು ಭರವಸೆ ನೀಡಿತು.

Advertisement

ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಅವಶ್ಯಕತೆ ಇರುವ ಮೂಲ ಸೌಕರ್ಯಗಳ ಬಗ್ಗೆ ತಂಡವು ಅಧ್ಯಯನ ನಡೆಸುತ್ತಿದ್ದು, ಅವಶ್ಯಕ ನಿವೇಶನಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಂಡಕ್ಕೆ ಮನವರಿಕೆ ಮಾಡಿದರು. ಅದರಂತೆ ಈ ಯೋಜನೆಗೆ ಸಂಬಂಧಪಟ್ಟಂತೆ ಗುತ್ತಿಗೆದಾರರಿಂದ ತಾಂತ್ರಿಕ ಆಧಾರದ ಮೇಲೆ ನೀಲನಕ್ಷೆ ಸಿದ್ಧಪಡಿಸಬೇಕು. ತಾಂತ್ರಿಕವಾಗಿ ಯೋಜನೆ ಅನುಷ್ಠಾನಕ್ಕೆ ಅನುಕೂಲಕರ ಸ್ಥಳ ಗುರುತಿಸುವಂತೆ ತಂಡಕ್ಕೆ ತಿಳಿಸಿದ, ಜಿಲ್ಲಾಧಿಕಾರಿಗಳು ಯೋಜನೆ ಅನುಷ್ಠಾನ ನಂತರ ನಿರ್ವಹಣೆ ಕುರಿತು, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಲ್ಲಿ ಪ್ರಾತ್ಯಕ್ಷಿಕೆ ವಲಯಗಳನ್ನಾಗಿ ಯಶಸ್ವಿಗೊಳಿಸಿದ 24×7 ಕುಡಿಯುವ ನೀರಿನ ಸರಬರಾಜು ಯೋಜನೆಯ ಕುರಿತು ಚರ್ಚೆ ನಡೆಸಿ, ಇದರಿಂದ ಜಲಸಂಪನ್ಮೂಲದ ಸದ್ಬಳಕೆಗೆ ಸಹಕಾರಿಯಾಗಲಿದೆ ಎಂದು ತಂಡದ ಗಮನಕ್ಕೆ ತಂದರು.

ಜಿಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, ಸದರಿ ಯೋಜನೆ ಅನುಷ್ಠಾನದ ಜತೆಗೆ ಈಗಾಗಲೇ ಜಾರಿಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಗಮನ ನೀಡುವುದು, ತಾಂತ್ರಿಕವಾಗಿ ಸಮರ್ಥವಾಗಿ ಯೋಜನೆ ಜಾರಿ ಹಾಗೂ ಮೇಲ್ವಿಚಾರಣೆ ಮುಖ್ಯ ಎಂದರು.

ಜಲಧಾರೆ ಅಧ್ಯಯನ ತಂಡದ ಗ್ರಾಮೀಣ ಕುಡಿಯುವ ನೀರು ಯೋಜನಾ ನಿರ್ವಹಣಾ ಘಟಕದ ಪಿ.ಕುರಿಯನ್‌, ಸಾಮಾಜಿಕ ಸಲಹೆಗಾರ ಬೋಕೆಪಲ್ಲಿ ಕನಕದುರ್ಗ ರಾಜಾ, ಅಪರ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ, ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯನಿರ್ವಾಹಕ ಅಭಿಯಂತರ ಎಸ್‌. ಕುಮಾರ, ಇಂಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಲ್‌.ಟಿ.ರಾಠೊಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next