ವಿಜಯಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು, ಕಾರ್ಯ ನಿವಾರ್ಹಕರು ಕಾಲಕಾಲಕ್ಕೆ ಬದಲಾಗುವ ಸಹಕಾರ ಸಂಘಗಳ ಕಾಯ್ದೆಗಳ ಕುರಿತು ಸೂಕ್ತ ತಿಳಿವಳಿಕೆ ಪಡೆದಿರಬೇಕು ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಸಲಹೆ ನೀಡಿದರು.
ನಗರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಸಹಕಾರ ಸಂಘಗಳ ಕಾಯ್ದೆ, ಸಾಲ ಧೋರಣೆ ಹಾಗೂ ಸಮರ್ಪಕ ಕಾರ್ಯನಿರ್ವಹಣೆ ಕುರಿತಾಗಿ ಏರ್ಪಡಿಸಲಾಗಿದ್ದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಹಕಾರ ಸಂಘಗಳು ರೈತರ ಹಾಗೂ ಗ್ರಾಮೀಣ ಜನತೆಯ ಜೀವನಾಡಿಗಳಾಗಿವೆ. ರೈತನಿಗೆ ಆರ್ಥಿಕ ಚೈತನ್ಯ ತುಂಬಿ ರೈತನ ಬದುಕು ಬಂಗಾರವಾಗಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳ ಪಾತ್ರ ಅನನ್ಯ. ಒಂದು ಸಹಕಾರಿ ಸಂಘ ಪರಿಣಾಮಕಾರಿಯಾಗಿ ಹಾಗೂ ಇನ್ನಷ್ಟೂ ಗುಣಮಟ್ಟದ ಸೇವೆ ದೊರಕಿಸಬೇಕಾದರೆ ಆ ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಸಮಗ್ರ ಮಾಹಿತಿ ಹೊಂದಿರಬೇಕು. ಇದರಿಂದಾಗಿ ರೈತರಿಗೆ ಅನೇಕ ಪ್ರಯೋಜನ ದೊರಕಿಸಲು ಸಾಧ್ಯವಾಗುತ್ತದೆ ಎಂದರು. ವಿಶೇಷವಾಗಿ ಪಿಕೆಪಿಎಸ್ ಅಧ್ಯಕ್ಷರು, ಇಒ, ಸಿಬ್ಬಂದಿಗಳು ಕಾಲಕಾಲಕ್ಕೆ ಬದಲಾವಣೆಯಾಗುತ್ತಿರುವ ಸಹಕಾರ ಸಂಘಗಳ ಕಾಯ್ದೆ ಕಾನೂನುಗಳ ಬಗ್ಗೆ ತಿಳುವಳಿಕೆ ಪಡೆಯುವುದು ಅತ್ಯವಶ್ಯ, ಕಾನೂನು ತಜ್ಞರಿಂದ,
ಸಹಕಾರ ವಲಯದಲ್ಲಿ ಪರಿಣಿತರನ್ನು ಸಂಪರ್ಕಿಸಿ ಈ ಮಾಹಿತಿ ಪಡೆದುಕೊಳ್ಳಬೇಕು, ಕಾಯ್ದೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ.ಜಿ.ಪಾಟೀಲ ಮಾತನಾಡಿ, ಇತ್ತೀಚಿಗೆ ಬದಲಾವಣೆಯಾದ ಸಹಕಾರ ಸಂಘಗಳ ಕಾಯ್ದೆಗಳ ಕುರಿತು, ಕೆ.ಬಿ. ರಾಜಣ್ಣ ಡಿಸಿಸಿ ಬ್ಯಾಂಕ್‌ನಿಂದ ದೊರಕುವ ಸಾಲಸೌಲಭ್ಯಗಳ ಕುರಿತು, ಆರ್.ಎಂ.ಬಣಗಾರ ರೈತರಿಗೆ ದೊರಕುವ ವಿಮಾ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ, ಜಿ.ಬಿ.ನೀಡೋಣಿ, ಜೆ.ಕೊಟ್ರೇಶಿ, ಉಪ ಮಹಾಪ್ರಬಂಧಕ ಸತೀಶ ಪಾಟೀಲ, ಚೆನ್ನಪ್ಪ ಕೊಪ್ಪದ, ಎಪಿಎಂಸಿ ಅಧ್ಯಕ್ಷ ಸುರೇಶಗೌಡ ಬಿರಾದಾರ ಇತರರು ಉಪಸ್ಥಿತರಿದ್ದರು.