Advertisement

73 ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

10:37 AM Aug 16, 2019 | Naveen |

ವಿಜಯಪುರ: ಭವ್ಯ ಭಾರತದ ಭವಿಷ್ಯದ ನಾಗರಿಕರಾದ ಪ್ರಸಕ್ತ ವಿದ್ಯಾರ್ಥಿ-ಯುವ ಸಮೂಹದಲ್ಲಿ ಭಾರತೀಯ ಸ್ವಾತಂತ್ರ್ಯದ ಉನ್ನತ ಮೌಲ್ಯಗಳ ಕುರಿತು ಜಾಗ್ರತೆ ಮೂಡಿಸುವ ಅಗತ್ಯವಿದೆ. ದೇಶದ ಜನರು ಸ್ವಾತಂತ್ರ್ಯವನ್ನು ಗೌರವಿಸುವ ಅಗತ್ಯವನ್ನು ಮನಗಾಣದಿದ್ದರೆ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ ಎಂದೇ ಭಾವಿಸಬೇಕಾಗುತ್ತದೆ. ಹೀಗಾಗಿ ರಾಷ್ಟ್ರೀಯ ಗೌರವ ಹೆಚ್ಚಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಭಿಪ್ರಾಯಪಟ್ಟರು.

Advertisement

ನಗರದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಡಾ|ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಲಕ್ಷಾಂತರ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ದೊರೆತ ಸ್ವಾತಂತ್ರ್ಯ ಹಾಗೂ ಅದರ ಸ್ಮರಣೆಗಾಗಿ ಪ್ರತಿ ಆ.15ರಂದು ಆಚರಿಸುವ ಭಾರತ ಸ್ವಾತಂತ್ರ್ಯ ದಿನಾಚರಣೆಯ ಉದ್ದೇಶವೇನು, ಸ್ವಾತಂತ್ರ್ಯದ ಪರಿಕಲ್ಪ ಏನೆ ಎಂಬುದನ್ನು ಮನವರಿಕೆ ಮಾಡಿಕೊಡುವ ಹಾಗೂ ಗೌರವಿಸುವುದನ್ನು ಕಲಿಸುವ ಕೆಲಸವಾಗಬೇಕಿದೆ ಎಂದರು.

ಪ್ರಸಕ್ತ ಸಂದರ್ಭದಲ್ಲಿ ವಿಜಯಪುರ ಜಿಲ್ಲೆ ಸೇರಿದಂತೆ ಹಿಂದೆಂದೂ ಕಂಡು ಕೇಳರಿಯದ ರೀತಿಯ ಮಳೆ ಹಾಗೂ ಪ್ರವಾಹ ಇಡೀ ರಾಜ್ಯದ ಜನರ ನಿದ್ದೆಯನ್ನೇ ಕಂಗೆಡಿಸಿದೆ. ಮಳೆ ಹಾಗೂ ಪ್ರವಾಹದಿಂದಾಗಿ ಜನರು ಜೀವ ಕಳೆದುಕೊಂಡಿದ್ದಾರೆ. ಸಾವಿರಾರು ದನಕರುಗಳು ನೀರು ಪಾಲಾಗಿವೆ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆ ಪ್ರವಾಹಕ್ಕೆ ಆಹುತಿಯಾಗಿದೆ. ಜಿಲ್ಲೆಯಲ್ಲಿ ಕೃಷ್ಣೆ ಮತ್ತು ಭೀಮಾ ನದಿಗಳ ಪ್ರವಾಹಕ್ಕೆ ಸಂಕಷ್ಟಕ್ಕೀಡಾದ ಜಿಲ್ಲೆಯ ನದಿ ಪಾತ್ರದ ಹಳ್ಳಿಗಳ ಸಂತ್ರಸ್ತರ ರಕ್ಷಣೆಗೆ ಜಿಲ್ಲಾಡಳಿತ ಟೊಂಕ ಕಟ್ಟಿ ನಿಂತಿದೆ. ಈ ಕಾರ್ಯಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೂಡ ಮುಕ್ತವಾಗಿ ಸಹಕಾರ ನೀಡುತ್ತಿರುವುದು ನೆಮ್ಮದಿಯ ಸಂಗತಿ ಎಂದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಶಕೆ ಆರಂಭಗೊಂಡಿದ್ದು, ಕೆರೆ ತುಂಬುವ ಯೋಜನೆಯಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಂತರ್ಜಲ ಹೆಚ್ಚಿದೆ. ಈಗಾಗಲೇ ಆರಂಭಗೊಂಡಿರುವ ಕೋಟಿ ವೃಕ್ಷ ಅಭಿಯಾನದ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಇದರಿಂದ ಜಿಲ್ಲೆಗೆ ಅಂಟಿರುವ ಬರದ ನಾಡು ಎಂಬ ಹಣೆಪಟ್ಟಿ ಕಳಚಲು ಸಾಧ್ಯವಿದೆ. ಮತ್ತೂಂದೆಡೆ ಜಿಲ್ಲೆ ಹೊಂದಿರುವ ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕಿರುವುದು ಇಂದಿನ ಅಗತ್ಯ ಎಂದರು.

ಸ್ವಾತಂತ್ರ್ಯ ಯೋಧರ ಕುಟುಂಬ ಸದಸ್ಯರಾದ ಜೈರಾಬಿ ರಜಾಕಸಾಬ ಖಾದಿಮ, ಗೋದಾಬಾಯಿ ದತ್ತು ಶಿಂಧೆ, ಶಾವಂತ್ರವ್ವಾ ಹಣಮಂತಪ್ಪ ವಾಡೆ, ರೇವುಬಾಯಿ ಬೋಸಲಗೆ, ಗಂಗವ್ವ ನಿಂಗಯ್ಯ ಹಿರೇಮಠ, ಮಲ್ಲವ್ವ ಬಸಪ್ಪ ಮುರನಾಳ ಅವರನ್ನು ಸನ್ಮಾನಿಸಲಾಯಿತು. ಪೊಲೀಸ್‌, ಗೃಹ ರಕ್ಷಕ ದಳ, ಎನ್‌ಸಿಸಿ ಸೇರಿದಂತೆ ವಿವಿಧ ಶಾಲೆ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

Advertisement

ಶಾಸಕ ಬಸನಗೌಡ ಪಾಟೀಲ ಯತ್ನಾಳ, ಡಾ|ಎಂ.ಬಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಜಿ.ಪಂ. ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಿಇಒ ವಿಕಾಸ ಸುರಳಕರ, ಎಸ್ಪಿ ಪ್ರಕಾಶ ನಿಕ್ಕಂ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next