ವಿಜಯಪುರ : ಆತ್ಮಹತ್ಯೆ ಮಾಡಿಕೊಳ್ಳಲು ವ್ಯಕ್ತಿಯೊಬ್ಬರಿಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲೆಯ ನ್ಯಾಯಾಲಯ ಮೂವರು ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಜಿಲ್ಲೆಯ ನಾಗಠಾಣ ಗ್ರಾಮದ ಶರಣಪ್ಪ ಸಿದ್ರಾಮಪ್ಪ ಅರಕೇರಿ ಎಂಬವರು ಆರೋಪಿಗಳ ಮಾನಸಿಕ ಹಿಂಸೆಯಿಂದ ಮನನೊಂದು 2017 ಅಕ್ಟೋಬರ್ 24 ರಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಸದರಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮೃತನ ಜಮೀನಿನ ಪಕ್ಕದ ಜಮೀನಿನ ಮಾಲೀಕರಾದ ದುಂಡಪ್ಪ ಚಂದ್ರಾಮ ಗಿರಿಸಾಗರ, ಅಪ್ಪಣ್ಣ ಗಿರಿಸಾಗರ, ಯಲ್ಲವ್ವ ಅಪ್ಪಣ್ಣ ಗಿರಿಸಾಗರ ಇವರು ಶರಣಪ್ಪ ಅರಕೇರಿ ಎಂಬವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿ, ಶಿಕ್ಷೆಗೆ ಗುರಿಯಾಗಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ, ಶರಣಪ್ಪ ಅವರಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಕಾರಣವಾದ ಅಂಶಗಳನ್ನು ಪರಿಗಣಿಸಿ, ಮೂವರು ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 75 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪಿಎಚ್‍ಐ ಸುರೇಶ ಗಡ್ಡಿ ಅವರು ಸೂಕ್ತ ಸಾಕ್ಷಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಮ ಸಮರ್ಥವಾಗಿ ವಾದ ಮಂಡಿಸಿದ್ದರು.