ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಹತ್ಯೆಗೆ ಯತ್ನಿಸಿದ ಪತಿಗೆ ಮೂರುವರೆ ವರ್ಷ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಸೋಮವಾರ ಆದೇಶಿಸಿದೆ. ದಂಡದ ಹಣದಲ್ಲಿ ಪತ್ನಿಗೆ 22,500 ರೂ. ಪರಿಹಾರ ನೀಡುವಂತೆಯೂ ಅದೇಶಿಸಿದೆ.
ಇಂಡಿ ತಾಲೂಕು ಬಬಲಾದಿ ಗ್ರಾಮದ ಚನ್ನಪ್ಪ ಸಿದರಾಯ ಧೂಳಖೇಡ ಎಂಬಾತನೇ ಪತ್ನಿಯ ಹತ್ಯೆ ಯತ್ನದ ಆರೋಪದಲ್ಲಿ ಶಿಕ್ಷೆಗೆ ಗುರಿಯಾದವ. ಚನ್ನಪ್ಪ ಹಾಗೂ ಆತನ ಪತ್ನಿ ಸರುಬಾಯಿ ಮಧ್ಯೆ ಕೌಟುಂಬಿಕ ಕಲಹವಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ಸರುಬಾಯಿ ತನ್ನ ಮಕ್ಕಳೊಂದಿಗೆ ತನ್ನ ಪಾಲಿಗೆ ಬಂದಿರುವ ಜಮೀನಿನಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದು, ಆರೋಪಿ ಚನ್ನಪ್ಪನ ಜಮೀನಿಗೆ ಸೇರಿದ ಜಮೀನಿಗೆ ಸರುಬಾಯಿ ಎಮ್ಮೆ ಮೇಯಲು ಹೋಗಿತ್ತು. ಇದನ್ನೇ ನೆಪ ಮಾಡಿಕೊಂಡ ಆರೋಪಿ ಚನ್ನಪ್ಪ 2019 ಅಕ್ಟೋಬರ್ 26 ರಂದು ತನ್ನ ಜಮೀನಿನಲ್ಲಿ ನಿಮ್ಮ ಎಮ್ಮೆ ಮೇಯ್ದು ಹಾಳು ಮಾಡಿದೆ ಎಂದು ಕಲ್ಲಿನಿಂದ ತಲೆ ಹಾಗೂ ಕೈಗೆ ಭಾರಿ ಗಾಯ ಮಾಡಿದ್ದ.
ಈ ಕುರಿತು ಗಾಯಾಳು ತಾಯಿ ಸರುಬಾಯಿ ಪರವಾಗಿ ಆಕೆಯ ಮಗ ಸುಭಾಶ ಧೂಳಖೇಡ ಹೋರ್ತಿ ಪೊಲೀಸರಿಗೆ ಕೊಲೆ ಯತ್ನದ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪಿ.ಎಸ್.ಐ. ಎಸ್.ಎನ್.ಅಂಬಿಗೇರ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಾಜಿ ನಾಲವಾಡೆ ಸರ್ಕಾರಿ ಅಭಿಯೋಜಕರು ಆರೋಪ ರುಜುವಾತು ಪಡಿಸಲು ಅಗತ್ಯವಾದ ಸಾಕ್ಷಿ, ಪುರಾವೆಗಳನ್ನು ಸಲ್ಲಿಸಿದ್ದನ್ನು ಪರಿಗಣಿಸಿ ಶಿಕ್ಷೆ ವಿಧಿಸಿದ್ದಾರೆ.
ಪತ್ನಿ ಸರುಬಾಯಿ ಕೊಲೆ ಯತ್ನದ ಆರೋಪದಲ್ಲಿ ಚನ್ನಪ್ಪ ಧೂಳಖೇಡ ಇವನಿಗೆ ಕೊಲೆ ಯತ್ನ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ಇದೇ ಪ್ರಕರಣದಲ್ಲಿ ದಾಖಲಾಗಿರುವ ಐಪಿಸಿ 506 ಕಲಂಗೆ ಆರು ತಿಂಗಳು ಜೈಲು ಶಿಕ್ಷೆ, 2500 ರೂ. ದಂಡ, ಕಲಂ 504ಕ್ಕೆ ಸಂಬಂಧಿಸಿದಂತೆ 2500 ರೂ. ದಂಡ ಸೇರಿದಂತೆ 30 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಅಲ್ಲದೇ ದಂಡದ ಹಣದಲ್ಲಿ ಬಾಧಿತ ಸರುಬಾಯಿಗೆ 22,500 ರೂ. ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಮ ವಾದ ಮಂಡಿಸಿದ್ದರು