Advertisement

ಸಮವಸ್ತ್ರದಲ್ಲಿ ಮಿಂಚುತ್ತಿರುವ ವೇಟರ್‌-ಕುಕ್‌-ಸ್ವೀಪ್‌ ಸಿಬ್ಬಂದಿ

10:57 AM Sep 01, 2019 | Team Udayavani |

ವಿಜಯಪುರ: ಪ್ರವಾಸಿಗರ ಅನುಕೂಲಕ್ಕಾಗಿ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಡಿಯಲ್ಲಿ ನಡೆಸುತ್ತಿರುವ ಹೊಟೇಲ್ ಮಯೂರ ಆದಿಲ್ ಶಾಹಿ ಅನೆಕ್ಸ್‌ನಲ್ಲಿ ಪ್ರವಾಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ನಿಗಮದ ಅಧಿಕಾರಿಗಳು ಮುಂದಾಗಿದ್ದಾರೆ. ಇದರ ಭಾಗವಾಗಿ ನಿಗಮದ ಸಿಬ್ಬಂದಿಗೆ ನೊಟೀಸ್‌ ನೀಡಿದ್ದು, ಕಡ್ಡಾಯವಾಗಿ ಸಮವಸ್ತ ಧರಿಸಲು ಸೂಚನೆ ನೀಡಿದ್ದು ಬದಲಾವಣೆ ಗಾಳಿ ಬೀಸತೊಡಗಿದೆ.

Advertisement

ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ವ್ಯವಸ್ಥೆ ದುರವಸ್ಥೆ ಕುರಿತು ಸಾರ್ವಜನಿಕವಾಗಿ ಬೆಳಕು ಚಲ್ಲಿ, ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳ ಗಮನ ಸೆಳೆಯುವುದಕ್ಕಾಗಿ ಉದಯವಾಣಿ ಪತ್ರಿಕೆ ‘ಪ್ರವಾಸೋದ್ಯಮ ಕಥೆ-ವ್ಯಥೆ’ ಹೆಸರಿನಲ್ಲಿ ಸರಣಿ ಲೇಖನ ಅಭಿಯಾನ ಆರಂಭಿಸಿದೆ. ಇದರ ಭಾಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಡಿಯಲ್ಲಿ ವಿಜಯಪುರ ನಗರದಲ್ಲಿ ನಡೆಯುತ್ತಿರುವ ಹೊಟೇಲ್ ಮಯೂರ ಆದಿಲ್ ಶಾಹಿ ಅನೆಕ್ಸ್‌ನ ದುಸ್ಥಿತಿ ಕುರಿತು ‘ಮಯೂರ ಮದ್ಯ ವ್ಯಸನಿಗಳ ಕೇಂದ್ರ’ ಶೀರ್ಷಿಕೆಯಲ್ಲಿ ಉದಯವಾಣಿ ಪತ್ರಿಕೆ ಆಗಸ್ಟ್‌ 9ರಂದು ವಿಶೇಷ ವರದಿ ಪ್ರಕಟಿಸಿತ್ತು.

ಈ ವರದಿ ಪ್ರಕಟವಾಗುತ್ತಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸಮವಸ್ತ್ರ ಧರಿಸದ ಹಾಗೂ ಅಶಿಸ್ತಿನ ವರ್ತನೆಗೆ ಕಡಿವಾಣ ಹಾಕಲು ಮುಂದಾಗಿದ್ದು, ಸಿಬ್ಬಂದಿಗೆ ನೊಟೀಸ್‌ ನೀಡಿ ವ್ಯವಸ್ಥೆಯನ್ನು ಸುಧಾರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಮಯೂರ ಹೊಟೇಲ್ನ ಸಿಬ್ಬಂದಿ ಸಮವಸ್ತ್ರಗಳು ನಿಗಮದ ಹಾಗೂ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಹೊಟೇಲ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತ್ರ ಹೊರ ಬರುತ್ತಿದ್ದವು. ಉದಯವಾಣಿ ವರದಿಯಿಂದಾಗಿ ಧೂಳು ಹಿಡಿದು ಮಾಸಿರುವ ಸಮವಸ್ತ್ರಗಳೆಲ್ಲ ಕಲೆಗಳಿದ್ದರೂ ಕೊಳೆಯಿಂದ ಮುಕ್ತವಾಗಿ ಹೊಟೇಲ್ ಸಿಬ್ಬಂದಿ ಮೈಮೇಲೆ ಮಿಂಚತೊಡಗಿವೆ.

ವೇಟರ್‌ ಬಿಳಿ ಶರ್ಟ್‌, ಮೇಲೊಂದು ಕರಿ ವರ್ಣದ ಕಿರುಕೋಟು, ಕರಿ ಪ್ಯಾಂಟ್ ಹಾಗೂ ಕರಿ ಬೂಟು ಧರಿಸಿ ಶಿಸ್ತಿನಿಂದ ಗ್ರಾಹಕರ ಸೇವೆಗೆ ನಿಂತಿದ್ದಾರೆ. ಅಡುಗೆ ತಯಾರಿಸುವ ಕೋಣೆಯಲ್ಲಿ ಬಾಣಸಿಗರು ಕೂಡ ಬಿಳಿ ವರ್ಣದ ಪ್ಯಾಂಟ್, ಶರ್ಟ್‌ ಧರಿಸಿದ್ದು ತಲೆಗೆ ಬಾಣಸಿಗರ ಟೋಪಿ ಬಂದಿದೆ. ಇನ್ನು ಸ್ವಚ್ಛತೆ ಕರ್ತವ್ಯಕ್ಕೆ ಇರುವ ಮಹಿಳಾ ಸಿಬ್ಬಂದಿ ನೀಲಿ ವರ್ಣದ ಸೀರೆ-ರವಿಕೆ ಸಮವಸ್ತ್ರ ಧರಿಸಿದ್ದಾರೆ. ಈ ಮೂಲಕ ಸಮವಸ್ತ್ರ ಧರಿಸಿದ ಸಿಬ್ಬಂದಿ ತಾವು ಕರ್ನಾಟಕ ಪ್ರವಾಸೋದ್ಯಮ ನಿಗಮದ ಮಯೂರ ಆದಿಲ್ ಶಾಹಿ ಹೊಟೇಲ್ನಲ್ಲಿ ಗ್ರಾಹಕರ ಸೇವೆಗೆ ಇರುವ ಸಿಬ್ಬಂದಿ ಎಂದು ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.

Advertisement

ಇದಲ್ಲದೇ ಹೊಟೇಲ್ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಹೊಟೇಲ್ನ ಒಳಾವರಣದಲ್ಲಿ ಮದ್ಯ ಸೇವನೆ ನಿಷೇಧ ಫ‌ಲಕ ಬಣ್ಣ ಬಳಿದುಕೊಂಡು ಹೊಟೇಲ್ ಪ್ರವೇಶಿಸುವ ಹಂತದಲ್ಲೇ ರಾರಾಜಿಸತೊಡಗಿವೆ. ಗಾರ್ಡನ್‌ಗಳು ಕಸಮುಕ್ತ ಮಾಡುವ ಪ್ರಯತ್ನ ನಡೆದಿವೆ. ಹೊಟೇಲ್ ಒಳ ಆವಣರದ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆಗೆ ಅದ್ಯತೆ ನೀಡಲಾಗಿದೆ.ಬೀಡಿ-ಸಿಗರೇಟ್ ಸೇವನೆಯನ್ನು ಒಂದಿಬ್ಬರು ಸಿಬ್ಬಂದಿ ಮುಂದು ವರಿಸಿದ್ದರೂ ಅಡುಗೆ ಕೋಣೆಯಲ್ಲಿ ಹಾಗೂ ಗ್ರಾಹಕರ ಉಪಾಹಾರ ಆವರಣದಲ್ಲಿ ನಿಲ್ಲಿಸಿ, ಮರೆಗೆ ಹೋಗಿ ಧೂಮಪಾನ ಮಾಡುವ ಮಟ್ಟಿಗೆ ಬಂದಿದ್ದಾರೆ. ಅಷ್ಟರ ಮಟ್ಟಿಗೆ ಧೂಮಪಾನ ಹೊಟೇಲ್ ಒಳಾವರಣದಿಂದ ದೂರವಾಗಿದೆ. ಅಷ್ಟರ ಮಟ್ಟಿಗೆ ಮಯೂರ ಅದಿಲ್ ಶಾಹಿ ಅನೆಕ್ಸ್‌ನಲ್ಲಿ ಬದಲಾವಣೆ ಗಾಳಿ ಬೀಸತೊಡಗಿದೆ.

ಉದಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಲೇ ನಿಗಮದ ನಮ್ಮ ಹೊಟೇಲ್ನ ಎಲ್ಲ ಸಿಬ್ಬಂದಿಗೆ ಸಮವಸ್ತ್ರ ಧರಿಸದ ಕುರಿತು ನೊಟೀಸ್‌ ನೀಡಿ, ಶಿಸ್ತು ಕ್ರಮಕ್ಯೆಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ. ಹೊಟೇಲ್ಗೆ ಬರುವ ಪ್ರವಾಸಿಗರು ಹಾಗೂ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಊಟ-ಉಪಾಹಾರದ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಿದ್ದೇವೆ.
ರಮೇಶಕುಮಾರ
ಸಹಾಯಕ ವ್ಯವಸ್ಥಾಪಕರು
ಹೊಟೇಲ್ ಮಯೂರ ಆದಿಲ್ ಶಾಹಿ ಅನೇಕ್ಸ್‌, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next