ವಿಜಯಪುರ: ರೈತರು ಪ್ರಸಕ್ತ ಕೃಷಿ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ಭಾರತ ಕೂಡ ವಿದೇಶಕ್ಕೆ ಆಹಾರ ಧಾನ್ಯ ಪೂರೈಸುವ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುತ್ತದೆ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಹೇಳಿದರು.
ನಗರದ ತೋಟಗಾರಿಕೆ ಇಲಾಖೆಯ ಬಸವವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಸ್ಯಸಂತೆ ಹಾಗೂ ತೋಟಗಾರಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಣ್ಣು ಪರೀಕ್ಷೆ ಮಾಡಿಸಿ, ತಜ್ಞರ ಸಲಹೆಯಂತೆ ಫಲವತ್ತತೆ ಅನುಗುಣವಾಗಿ ಬೆಳೆ ಬೆಳೆಯಬೇಕು ಎಂದರು.
ರೈತರು ಒಂದೇ ಬೆಳೆಗೆ ಸೀಮಿತವಾಗದೇ ಮಿಶ್ರ ಬೆಳೆಗೆ ಹೆಚ್ಚು ಒತ್ತು ನೀಡಬೇಕು. ಅಕ್ಕ ಪಕ್ಕದ ರೈತರು ಒಂದೇ ಬೆಳೆ ಬೆಳೆದಿದ್ದಾರೆ. ನಾವು ಒಂದೇ ಬೆಳೆಯೋಣ ಎಂಬ ಧೋರಣೆ ಇರಬಾರದು. ಮಣ್ಣು ಪರೀಕ್ಷಾ ಕೇಂದ್ರದಲ್ಲಿ ತಮ್ಮ ಜಮೀನಿನ ಮಣ್ಣನ್ನು ಪರೀಕ್ಷಿಸಿಕೊಂಡು ಅದರ ಫಲವತ್ತತೆ ಆಧಾರದ ಮೇಲೆ ಬಹು ಬೆಳೆಗಳನ್ನು ಬೆಳೆದು ಪ್ರಗತಿಪರ ರೈತರಾಗಬೇಕು ಎಂದು ಹೇಳಿದರು.
ದೇಶದಲ್ಲಿ ಶೇ. 75 ಕೃಷಿ ಚಟುವಟಿಕೆ ಇದ್ದರೂ ಭಾರತ ಆಹಾರ ಸಮಸ್ಯೆ ಎದುರಿಸುತ್ತಿದೆ. ಕೇವಲ ಶೇ. 25 ಕೃಷಿ ಚಟುವಟಿಕೆನಡೆಸುತ್ತಿರುವ ಅನ್ಯ ರಾಷ್ಟ್ರಗಳು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಆಹಾರ ರಫ್ತು ಮಾಡುತ್ತಿವೆ. ಇದಕ್ಕೆ ಕಾರಣ ಅಲ್ಲಿರುವಂತಹ ಆಧುನಿಕ ಕೃಷಿ ಯಂತ್ರೋಪಕರಣ ಬಳಕೆ, ಬಿತ್ತನೆ ಮಾಡುವ ಪದ್ಧತಿ ಪ್ರಮುಖ ಕಾರಣವಾಗಿದೆ. ಕೃಷಿಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರದ ಕೃಷಿ ಪದ್ಧತಿ ನಮ್ಮ ರೈತರು ಅಳವಡಿಸಿಕೊಂಡರೆ ಭವಿಷ್ಯದಲ್ಲಿ ವಿಶ್ವಕ್ಕೆ ಆಹಾರ ರಫ್ತು ಮಾಡುವ ರಾಷ್ಟ್ರಗಳಲ್ಲಿ ಭಾರತ ದೇಶವೂ ಸ್ಥಾನ ಪಡೆಯಲಿದೆ ಎಂದರು.
ದೇಶದಲ್ಲಿ ರೈತರು ಆಹಾರ ಒದಗಿಸುವುದರಲ್ಲಿ ಮೇಲಸ್ತರದಲ್ಲಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಎಲ್ಲ ರಂಗದಲ್ಲೂ ರೈತರು ಅಭಿವೃದ್ಧಿ ಹೊಂದಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಸರ್ಕಾರ ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ರೈತ ಮಿತ್ರ, ಕೃಷಿ ವಿಕಾಸ, ಕೃಷಿ ಭಾಗ್ಯ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಗ್ರಾಮಾಂತರ ಮಟ್ಟದಲ್ಲಿ ಇಲಾಖೆಯ ಕಾರ್ಯಕ್ರಮಗಳ ಮೂಲಕ ಮನೆ-ಮನೆಗೂ ಸರ್ಕಾರದ ರೈತ ಅಭಿವೃದ್ಧಿ ಯೋಜನೆಗಳು ತಲುಪಿಸಬೇಕು. ರೈತರು ಕೂಡ ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ 2019-20ನೇ ಸಾಲಿನ ತೋಟಗಾರಿಕೆ ಇಲಾಖೆ ಅಭಿವೃದ್ಧಿ ಯೋಜನೆಗಳ ಸಮಗ್ರ ಮಾಹಿತಿಯುಳ್ಳ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಂದಾರ, ಸೇರಿದಂತೆ ಇತರ ಅಧಿಕಾರಿಗಳು ಇದ್ದರು.