Advertisement

ರಕ್ತದಾನ ಶಿಬಿರಕ್ಕೆ ಪರವಾನಗಿ ಪಡೆಯಲು ಪಾಟೀಲ ಸೂಚನೆ

02:26 PM Jul 14, 2019 | Naveen |

ವಿಜಯಪುರ: ಜಿಲ್ಲೆಯಲ್ಲಿ ರಕ್ತ ನಿಧಿ ಕೇಂದ್ರದವರು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಬೇಕಾದಲ್ಲಿ ಕಡ್ಡಾಯವಾಗಿ ಜಿಲ್ಲಾ ಏಡ್ಸ್‌ ನಿಯಂತ್ರಣ ಕಚೇರಿ ಮತ್ತು ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರದ ಪರವಾನಗಿ ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿವೈ.ಎಸ್‌. ಪಾಟೀಲ ಸೂಚಿಸಿದರು.

Advertisement

ಜಿಲ್ಲಾ ಏಡ್ಸ್‌ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಸಭೆ ನಡೆಸಿದ ಅವರು, ಖಾಸಗಿ ರಕ್ತ ನಿಧಿ ಕೇಂದ್ರಗಳು ಶಿಬಿರಗಳಲ್ಲಿ ಸಂಗ್ರಹಿಸುವ ಒಟ್ಟು ರಕ್ತದ ಯೂನಿಟ್‌ಗಳಲ್ಲಿ ಶೇ. 25 ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರಕ್ಕೆ ನೀಡಬೇಕಾಗುತ್ತದೆ. ಅದರಂತೆ ಸ್ವಯಂ ಪ್ರೇರಿತ ರಕ್ತದಾನ ಹಮ್ಮಿಕೊಳ್ಳುವ ಮುನ್ನ ಕಡ್ಡಾಯವಾಗಿ ಪರವಾನಗಿ ಪಡೆಯುವಂತೆ ತಿಳಿಸಿದರು.

ಜಿಲ್ಲೆಯ ವಿವಿಧ ಸರ್ಕಾರಿ ಅಕಾರಿ-ಸಿಬ್ಬಂದಿಗಳಿಗಾಗಿ ವಿಶೇಷವಾಗಿ ಆರೋಗ್ಯವಂತರಿರುವ ಅಕಾರಿಗಳ ರಕ್ತದಾನ ಶಿಬಿರವನ್ನು ಆಯೋಜಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಪಪೂ ವಿದ್ಯಾರ್ಥಿಗಳಿಗೂ ಕೂಡ ಪ್ರತ್ಯೇಕ ರಕ್ತದಾನ ಶಿಬಿರ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯ ವಿವಿಧ ಜಾತ್ರೆಗಳು ಹಾಗೂ ಉತ್ಸವಗಳು ನಡೆಯುವ ಸಂದರ್ಭದಲ್ಲಿ ಹಚ್ಚೆ ಹಾಕುವುದನ್ನು ಗಮನಿಸುವಂತೆ ಸೂಚಿಸಿರುವ ಜಿಲ್ಲಾಧಿಕಾರಿಗಳು, ಹಚ್ಚೆ ಹಾಕುವ ಸಂದರ್ಭದಲ್ಲಿ ಸೂಜಿ ಬದಲಾಯಿಸದೇ ಹಚ್ಚೆ ಹಾಕುತ್ತಾರೆ. ಇದದರಿಂದ ಒಬ್ಬರಿಂದ ಒಬ್ಬರಿಗೆ ಹಚ್ಚೆ ಹಾಕುವಾಗ ಎಚ್ಐವಿ ಸೋಂಕು ಸುಲಭವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಹಚ್ಚೆ ಹಾಕುವುದಕ್ಕೆ ಅವಕಾಶ ನೀಡದಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಎಚ್ಐವಿ ಏಡ್ಸ್‌ ಕುರಿತಾದ ಮನೆ-ಮನೆ ಜನಜಾಗೃತಿ ಆಂದೋಲನ ಹಮ್ಮಿಕೊಳ್ಳಬೇಕು. ಈ ಕುರಿತಂತೆ ಸೂಕ್ತ ದಿನಾಂಕ ನಿಗದಿಪಡಿಸಿ ಆಶಾ-ಕಾರ್ಯಕರ್ತೆಯರ ಮೂಲಕ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸಲಹೆ ನೀಡಿದರು.

Advertisement

ಸಭೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ಐಸಿಟಿಸಿ ಕೇಂದ್ರಗಳಲ್ಲಿ 2004ರಿಂದ 2019ರವರೆಗೆ ಪ್ರತಿ ವರ್ಷ ನಡೆಸಿದ ಎಚ್ಐವಿ ಪರೀಕ್ಷೆ ಸಂದರ್ಭದ‌ಲ್ಲಿ ಒಟ್ಟು 5,86,686 ಸಾಮಾನ್ಯ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 26,067 ಜನರಲ್ಲಿ ಎಚ್ಐವಿ ಸೋಂಕು ಕಂಡು ಬಂದಿದೆ. 2004ರಲ್ಲಿ ಶೇ. 24.15ರಷ್ಟಿದ್ದ ಎಚ್ಐವಿ ಸೋಂಕಿತರ ಪ್ರಮಾಣ 2019ರ ಜೂನ್‌ 19ರವರೆಗೆ ಶೇ. 1ಕ್ಕೆ ಇಳಿದಿದೆ.

ಅದರಂತೆ ಜಿಲ್ಲೆಯ ಒಟ್ಟು 5,74,916 ಗರ್ಭೀಣಿಯರನ್ನು ಪರೀಕ್ಷೆಗೆ ಒಳಪಡಿಸಿದ್ದು, 1420 ಗರ್ಭೀಣಿಯರಲ್ಲಿ ಸೋಂಕು ಕಂಡು ಬಂದಿದೆ. 2004ರಲ್ಲಿ ಶೇ. 1.96ರಷ್ಟಿದ್ದ ಪ್ರಮಾಣ 2019ರ ಜೂನ್‌ದಲ್ಲಿ ಶೇ. 0.04ಕ್ಕೆ ಇಳಿದಿದೆ ಎಂದು ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅದರಂತೆ ಜಿಲ್ಲೆಯಲ್ಲಿ ಎಚ್ಐವಿ ಏಡ್ಸ್‌ ನಿಯಂತ್ರಣ ಕಾರ್ಯಕ್ರಮದಡಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಗಮನಕ್ಕೆ ತರಲಾಯಿತು.

ಇದೇ ಸಂದರ್ಭದಲ್ಲಿ ಕುಟುಂಬ ಕಲ್ಯಾಣ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ವಿಶೇಷವಾಗಿ ಉದರ ದರ್ಶಕ ಸಂತಾನ ಹರಣ, ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವ ಜೊತೆಗೆ ಶಿಬಿರ ಏರ್ಪಡಿಸುವ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಕ್ರಿಯಾಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕಾಯಕಲ್ಪ ಯೋಜನೆ, ಸ್ವಚ್ಛ-ಸ್ವಸ್ಥ, ಸರ್ವತ್ರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಚರ್ಚಿಸಲಾಯಿತು. ಅಪರ್‌ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಮಹೇಂದ್ರ ಕಾಪ್ಸೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪ ನಿರ್ದೇಶಕ ಸಿ.ಬಿ. ಕುಂಬಾರ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಡಾ| ಈರಣ್ಣ ಧಾರವಾಡಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಅಶೋಕ ಜಾಧವ,ಡಾ| ಧರ್ಮರಾಯ ಇಂಗಳೆ, ಡಾ| ಜ್ಯೋತಿ ಪಾಟೀಲ, ಡಾ| ರಾಜೇಶ್ವರಿ ಗೊಲಗೇರಿ, ಚನ್ನಮ್ಮ ಕಟ್ಟಿ, ಡಾ| ಅಪರ್ಣಾ, ಒಕ್ಕೂಟಗಳ ಅಧ್ಯಕ್ಷ ಪೀಟರ್‌ ಅಲೆಕ್ಸಾಂಡರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next