Advertisement

ಕ್ವಾರಂಟೈನ್‌ ಕಟ್ಟುನಿಟ್ಟಾಗಿ ಪಾಲನೆಯಾಗಲಿ

11:40 AM Jun 04, 2020 | Naveen |

ವಿಜಯಪುರ: ಹೊರ ರಾಜ್ಯಗಳಿಂದ ಆಗಮಿಸಿದವರನ್ನು ಕೋವಿಡ್‌-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್‌ ನಿಗಾದಲ್ಲಿ ಇರುವವರು ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು. ಈ ಕುರಿತು ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ನೆರೆ ರಾಜ್ಯದ ಜಿಲ್ಲೆಯ ಗಡಿಭಾಗದಲ್ಲಿ ಜನರು ನಿಯಮ ಬಾಹಿರವಾಗಿ ಜಿಲ್ಲೆಗೆ ನುಸುಳಿ ಬಾರದಂತೆ ಚೆಕ್‌ ಪೋಸ್ಟ್‌ ಮತ್ತಷ್ಟು ಬಿಗಿಗೊಳಿಸಬೇಕು. ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್‌ ಹಾಗೂ ಕಂಟೇನ್ಮೆಂಟ್‌ ವಲಯಗಳಲ್ಲಿ ಯಾವುದೇ ಲೋಪ ಆಗದಂತೆ ಕಟ್ಟುಟ್ಟಿನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಮುಂಗಾರು ಸಂದರ್ಭದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಬೇಕು. ತೋಟಗಾರಿಕೆಯ ಹೂವು ಬೆಳೆಗಾರರು, ಹಣ್ಣು ತರಕಾರಿ ಬೆಳೆಗಾರರಿಗೆ ಸರ್ಕಾರಿ ಮಾರ್ಗಸೂಚಿಯಂತೆ ಬೆಳೆಹಾನಿ ಪರಿಹಾರ ಧನ ಕಲ್ಪಿಸಬೇಕು. ಮದುವೆಗಳಿಗೆ ಮಂಗಲ ಕಾರ್ಯಾಲಯ ಕಾಯ್ದಿರಿಸಿ, ಲಾಕ್‌ಡೌನ್‌ದಿಂದ ಮದುವೆ ಮಾಡಿಕೊಳ್ಳಲಾಗದ ಪ್ರಕರಣದಲ್ಲಿ ಮುಂಗಡ ಹಣ ಪಾವತಿಸಿದ ಎಲ್ಲರಿಗೂ ಹಣ ಮರು ಪಾವತಿಸಬೇಕು. ಈ ಕುರಿತು ದೂರುಗಳು ಬಂದಿದ್ದು, ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಕುರಿತು ಸಭೆಗೆ ವಿವರ ನೀಡಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಲ್ಲೆಯಲ್ಲಿ 22 ಕಂಟೇನ್ಮೆಂಟ್‌ ವಲಯಗಳನ್ನು ಗುರುತಿಸಿದ್ದು, 5 ಕಂಟೇನ್ಮೆಂಟ್‌ ವಲಯಗಳಲ್ಲಿ ನಿರ್ಬಂಧ ಮುಕ್ತವಾಗಿದೆ. ಚಾಲ್ತಿಯಲ್ಲಿರುವ 17 ಕಂಟೇನ್ಮೆಂಟ್‌ ವಲಯಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಹೊರ ರಾಜ್ಯಗಳಿಂದ ಜಿಲ್ಲೆಗೆ ಮರಳಿದ ಕಾರ್ಮಿಕರನ್ನು ಜಿಲ್ಲೆಯ 576 ಸಾಂಸ್ಥಿಕ ಕ್ವಾರಂಟೈನ್‌ ಇರಿಸಲಾಗಿದೆ. 26,324 ಜನರನ್ನು ಕ್ವಾರಂಟೈನ್‌ ಮಾಡಿದ್ದು ಸಾಂಸ್ಥಿಕ ಕ್ವಾರಂಟೈನ್‌ ಅವಧಿ  ಮುಗಿಸಿದ 23,834 ಜನರನ್ನು ಹೋಂ ಕ್ವಾರಂಟೈನ್‌ ಮಾಡಿ ನಿಗಾ ಇಡಲಾಗಿದೆ. ಸದ್ಯಕ್ಕೆ 133 ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳು ಚಾಲ್ತಿಯಲ್ಲಿದ್ದು, 2503 ಜನರು ಈ ಕೇಂದ್ರಗಳಲ್ಲಿ ನಿಗಾದಲ್ಲಿದ್ದಾರೆ ಎಂದರು.

ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕ ಸೋಮನಗೌಡ ಸಾಸನೂರ, ಎಸ್ಪಿ ಅನುಪಮ್‌ ಅಗರವಾಲ್‌, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಡಿಎಚ್‌ಒ ಡಾ| ಮಹೇಂದ್ರ ಕಾಪ್ಸೆ, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ತಹಶೀಲ್ದಾರ್‌ ಮೋಹನಕುಮಾರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next