ವಿಜಯಪುರ/ತಾಳಿಕೋಟೆ: ಸತತವಾಗಿ ಸುರಿಯುತ್ತಿರುವ ಮಳೆ ಜಿಲ್ಲೆಯ ಮಧ್ಯದಲ್ಲಿ ಹರಿಯುವ ಡೋಣಿ ನದಿಯನ್ನು ಅಬ್ಬರಿಸುವಂತೆ ಮಾಡಿದೆ. ಪರಿಣಾಮ ನದಿ ತೀರದ ಜಮೀನುಗಳಿಗೆ ನುಗ್ಗಿರುವ ನೀರು ಅನ್ನದಾತರನ್ನು ಎದೆ ಒಡೆದು ನಡುಗುವಂತೆ ಮಾಡಿದೆ. ಇದರ ಮಧ್ಯೆ ಡೋಣಿ ನದಿಯ ಕೆಳ ಹಂತದ ಸೇತುವೆ ಮೇಲೆ ಬೈಕ್‌ನಲ್ಲಿ ಹೊರಟಿದ್ದ ಇಬ್ಬರು ಯುವಕರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರೂ ಅದೃಷ್ಟವಶಾತ್ ಇಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಈ ಮಧ್ಯೆ ಡೋಣಿ ನದಿ ತುಂಬಿ ಹರಿಯುತ್ತಿದ್ದು ತಾಳಿಕೋಟೆ ತಾಲೂಕಿನ ಕಲ್ಲದೇವನಹಳ್ಳಿ ಬಳಿ ನೆಲಮಟ್ಟದ ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿದ್ದ ವೇಳೆ ಬೈಕ್‌ನಲ್ಲಿ ಹೊರಟಿದ್ದ ಇಬ್ಬರು ಇಬ್ಬರು ಯುವಕರು ಕೊಚ್ಚಿಕೊಂಡು ಹೋಗಿದ್ದರು.
ಅದರಲ್ಲಿ ಓರ್ವ ಯುವಕ ಈಜಿ ದಡ ಸೇರಿದ್ದರೆ, ಇನ್ನೋರ್ವ ಯುವಕ ಬೇಲಿ ಸರೆಯಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದಾಗ ಅಗ್ನಿ ಶಾಮಕ ಸಿಬ್ಬಂದಿ ರಕ್ಷಿಸಿದೆ. ಆದರೆ ಈ ಇಬ್ಬರು ಯುವಕರು ಚಲಾಯಿಸುತ್ತಿದ್ದ ಬೈಕ್‌ಗಳು ಮಾತ್ರ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಕಳೆದ ಎರಡು ದಿನಗಳಿಂದ ತುಂಬಿ ಹರಿಯುತ್ತಿದ್ದ ಡೋಣಿ ನದಿ ಇದೀಗ ಪ್ರವಾಹ ಸೃಷ್ಟಿಸಿದೆ. ಸತತ ಮಳೆಯಿಂದ ಅದರಲ್ಲೂ ಶನಿವಾರ-ರವಿವಾರ ಸುರಿದ ಸತತ ಮಳೆಗೆ ಡೋಣಿ ನದಿಯಲ್ಲಿ ಇನ್ನೂ ಹೆಚ್ಚಿನ ಹರಿವು ಉಂಟು ಮಾಡಿದ್ದು, ನದಿ ಪಾತ್ರದ ಗ್ರಾಮಗಳ ಜಮೀನುಗಳಿಗೆ ನುಗ್ಗಿ, ಬೆಳೆ ಹಾಳು ಮಾಡಿದೆ.
ಡೋಣಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ತೀರ ಪ್ರದೇಶದ ಹಳ್ಳಿಗಳ ಜನರು ನದಿ ಪಾತ್ರಕ್ಕೆ ಹೋಗದಂತೆ ಪೊಲೀಸರು ಹಗ್ಗಗಳನ್ನು ಕಟ್ಟಿ ನಿರ್ಬಂಧ ಹೇರಿದ್ದಾರೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಹ ಪರಿಸ್ಥಿತಿ ಇರುವ ಹಳ್ಳಿಗಳಲ್ಲಿ ನದಿ ತೀರದಲ್ಲಿ ಪೊಲೀಸ್ ಕಾವಲು ಹಾಕಿದೆ.
ಮತ್ತೊಂದೆಡೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಡೋಣಿ ನದಿ ಪಾತ್ರದ ವಿವಿಧ ಗ್ರಾಮಗಳಲ್ಲಿ ಪೊಲೀಸರು ಎಚ್ಚರಿಕೆ ನೀಡಲು ಆರಂಭಿಸಿದ್ದಾರೆ. ಪ್ರವಾಹದ ನೀರು ವಿವಿಧ ಸಾತಿಹಾಳ ಸೇರಿದಂತೆ ಕೆಳ ಹಂತದ ಸೇತುವೆಗಳನ್ನು ಮುಳುಗಿಸಿದ್ದು, ವಿವಿಧ ಹಳ್ಳಿಗಳನ್ನು ಸಂಪರ್ಕ ವ್ಯವಸ್ಥೆಗೆ ಧಕ್ಕೆ ತಂದಿದೆ.
ಡೋಣಿ ನದಿ ತೀರದಲ್ಲಿರುವ ಬಬಲೇಶ್ವರ ತಾಲೂಕಿನ ಹಲವು ಹಳ್ಳಿಗಳು, ಬಸವನಬಾಗೇವಾಡಿ ತಾಲೂಕಿನ ನೇಗಿನಾಳ, ಉಕ್ಕಲಿ, ಡೋಣೂರು, ಸಿಂಧಗೇರಿ, ದೇವರಹಿಪ್ಪರಗಿ ತಾಲೂಕಿನ ನಾಗರಾಳ, ಕಡಕೋಳ, ಸಾತಿಹಾಳ, ಯಾಳವಾರ, ಭೈರವಾಡಗಿ, ತಾಳಿಕೋಟೆ ತಾಲೂಕಿನ ಹಡಗಿನಾಳ, ಹರನಾಳ,
ಕಲ್ಲದೇವರಹಳ್ಳಿ, ಹಡಗಿನಾಳ ಸೇರಿದಂತೆ ಜಿಲ್ಲೆಯಲ್ಲಿನ ಡೋಣಿ ನದಿ ತೀರದಲ್ಲಿರುವ ವಿವಿಧ ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ರೈತರು ಬೆಳೆದಿದ್ದ ಕೋಟ್ಯಂತರ ರೂ. ಮೌಲ್ಯದ ಬೆಳೆ ಹಾಳು ಮಾಡಿದೆ.