Advertisement

ಧೋ ಎಂದು ಸುರಿದ ಮಳೆರಾಯ

11:51 AM Oct 05, 2019 | |

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಗುರುವಾರ 23.13 ಮಿ.ಮೀ. ಮಳೆಯಾಗಿದೆ. ಮಳೆ ನೀರು ಮನೆಗಳಿಗೆ ನುಗ್ಗಿ ಹಾನಿ ಮಾಡಿದ್ದರಿಂದ ಬಬಲೇಶ್ವರ ನಾಕಾ ಪ್ರದೇಶದ ನಿವಾಸಿಗಳು ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದ ಘಟನೆಯೂ ನಡೆಯಿತು.

Advertisement

ಜಿಲ್ಲೆಯ ಆಲಮಟ್ಟಿ, ಮಟ್ಟಿಹಾಳ, ಸಾಸಬಾಳ, ಬಬಲೇಶ್ವರ, ಮಮದಾಪುರ ಹೊರತು ಪಡಿಸಿದರೆ ಜಿಲ್ಲೆಯ ಬಹುತೇಕ ಎಲ್ಲ ಕಡೆ ಉತ್ತಮ ಮಳೆಯಾಗಿದೆ. ಗುರುವಾರ ಇಡಿ ದಿನ ಭಾರಿ ಬಿಸಿಲಿನ ಝಳ ಇದ್ದು, ಸಂಜೆ ವೇಳೆ ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ, ಧೋ ಎಂದು ಮಳೆ ಸುರಿಯಲಾರಂಭಿಸಿತು. ಹೀಗೆ ಸುರಿಯತೊಡಗಿದ ಮಳೆ ಶುಕ್ರವಾರ ಬೆಳಗಿನವರೆಗೂ ಸುರಿಯುತ್ತಲೇ ಇತ್ತು.

ಭೀಕರ ಮಳೆಗೆ ನಗರದ ಚಾಲುಕ್ಯ ನಗರ, ಶಾಪೇಟೆ, ಮನಗೂಳಿ ಅಗಸಿ, ಕೀರ್ತಿ ನಗರ, ಹುತಾತ್ಮರ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಮನೆಗಳು, ವ್ಯಾಪಾರಿ ಮಳಿಗೆಗಳಲ್ಲಿನ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಗೀಡಾಗಿವೆ. ಭೀಕರ ಮಳೆಗೆ ನಗರ ಎಲ್ಲ ರಸ್ತೆಗಳು ಕೂಡ ತುಂಬಿ ಹರಿಯತೊಡಗಿದ ಕಾರಣ ವಾಹನ ಸಂಚಾರರು, ಅದರಲ್ಲೂ ದ್ವಿಚಕ್ರ ವಾಹನ ಸವಾರರು ರಸ್ತೆಗಳ ಗುಂಡಿಗಳಲ್ಲಿನ ನೀರಿನ ಆಳ ತಿಳಿಯದೇ ಬೀಳುತ್ತಿದ್ದುದು ಸಾಮಾನ್ಯವಾಗಿತ್ತು.

ಶುಕ್ರವಾರ ಬೆಳಗಿನವರೆಗೂ ನಗರದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಮನೆಗಳಲ್ಲಿ ತುಂಬಿದ್ದ ನೀರು ಹೊರ ಹಾಕಲು ಕೂಡ ಆಗದ ಸ್ಥಿತಿ ನಿರ್ಮಾಣವಾಗಿತ್ತು. ಇದಲ್ಲದೇ ಶುಕ್ರವಾರ ಮಧ್ಯಾಹ್ನವಾದರೂ ಹಲವು ಬಡಾವಣೆಗಳಲ್ಲಿ ತುಂಬಿಕೊಂಡಿದ್ದ ಮಳೆ ಹಾಗೂ ಕೊಳಚೆ ನೀರು ಹೊರ ಹೋಗಲು ಅನುವಾಗದೇ ನಿಂತಿದ್ದರಿಂದ ಜನರು ಪರಿತಪಿಸುವಂತಾಯಿತು.

ನಗರದ ಲಕ್ಷ್ಮೀ ಚಿತ್ರ ಮಂದಿರದಲ್ಲಿ ಮಳೆ ನೀರಿನಿಂದ ಜಲಾವೃತವಾಗಿದ್ದು, ಶುಕ್ರವಾರ ಬೆಳಗಿನ ಪ್ರಸಾರಕ್ಕೆ ಸಮಸ್ಯೆ ಉಂಟು ಮಾಡಿತ್ತು. ಈ ಮಧ್ಯೆ ಮಳೆ ನೀರಿನಿಂದ ತಮ್ಮ ಮನೆಗಳಿಗೆ ನೀರು ನುಗ್ಗಿ ಹಾನಿ ಮಾಡಿದ್ದರಿಂದ ರೊಚ್ಚಿಗೆದ್ದ ಬಬಲೇಶ್ವರ ನಾಕಾ ಪ್ರದೇಶದ ವಿವಿಧ ಬಡಾವಣೆಗಳ ಜನರು ಶುಕ್ರವಾರ ದಿಢೀರ್‌ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Advertisement

ಇಂತಹ ಸಮಸ್ಯೆಗಳ ಹೊರತುಪಡಿಸಿ ಜಿಲ್ಲೆಯಲ್ಲಿ ಸುರಿದ ಮಳೆ ಹಿಂಗಾರು ಹಂಗಾಮಿನ ಬಿತ್ತನೆಗೆ ಉತ್ತಮವಾಗಿದೆ. ಹಿಂಗಾರು ಹಂಗಾಮಿನ ಜೋಳ, ಗೋಧಿ, ಕಡಲೆ, ಹತ್ತಿಯಂಥ ಬಿತ್ತನೆಗೆ ಸೂಕ್ತವಾಗಿದ್ದು, ಮಳೆ ಇಲ್ಲದೇ ಕಂಗಾಗಲಾಗಿದ್ದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next