ವಿಜಯಪುರ: ದ್ರಾಕ್ಷಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಒಣ ದ್ರಾಕ್ಷಿ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು, ಜಿಲ್ಲೆಯ ಒಣದ್ರಾಕ್ಷಿ ದಾಸ್ತಾನು ಮಾಡಲು ಅಗತ್ಯ ಪ್ರಮಾಣದ ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕು. ಪ್ರಸ್ತುತ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ದ್ರಾಕ್ಷಿ ಬೆಳೆಗಾರ ಪುನಶ್ಚೇತನಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘಟನೆ ಉಪಾದ್ಯಕ್ಷ ಬಿ.ಭಗವಾನ್‌ರೆಡ್ಡಿ, ವಿಜಯಪುರ ಜಿಲ್ಲೆ ರೈತರು ಬೆಳೆದ ಉತ್ತಮ ಗುಣಮಟ್ಟದ ಒಣದ್ರಾಕ್ಷಿ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. ಆದರೆ ಈ ವರ್ಷ ದ್ರಾಕ್ಷಿ ಕಟಾವು ಆರಂಭದ ದಿನದಲ್ಲಿ ಕೋವಿಡ್ ಮಹಾಮಾರಿ ಆಕ್ರಮಣದಿಂದಾಗಿ ಇಡಿ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಹೀಗಾಗಿ ದ್ರಾಕ್ಷಿ ವಹಿವಾಟು ಮಾಡಲಾಗದೇ ಮತ್ತು ಮಾರುಕಟ್ಟೆ ಇಲ್ಲದ್ದರಿಂದ ಶೇ. 75 ದ್ರಾಕ್ಷಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಲಾಕ್‌ಡೌನ್ ಪ್ಯಾಕೆಜ್ ಘೋಷಣೆ ಮಾಡಿದರೂ ದ್ರಾಕ್ಷಿ ಬೆಳೆಗಾರರಿಗೆ ಯಾವುದೇ ರೀತಿ ಪರಿಹಾರ ಘೋಷಣೆ ಮಾಡದಿರುವುದು ಖಂಡನೀಯ ಎಂದರು.
ಲಾಕ್‌ಡೌನ್ ಘೋಷಣೆ ಬಳಿಕ ಕಟಾವು ಮಾಡಿದ ಹಣ್ಣು ದ್ರಾಕ್ಷಿ ಸಂಗ್ರಹಿಸಿಡಲು ಸಾಧ್ಯವಿಲ್ಲದ ಕಾರಣ ಬಹುತೇಕ ರೈತರು ಬಾಡಿಗೆ ರೂಪದಲ್ಲಿ ಖಾಸಗಿ ಶೆಡ್ ಪಡೆದು ಒಣ ದ್ರಾಕ್ಷಿ ಮಾಡಿಕೊಂಡಿದ್ದಾರೆ. ಆದರೆ ಈ ಒಣ ದ್ರಾಕ್ಷಿ ಕೂಡ ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್ ಸಿಗದೇ ಹರಸಾಹಸ ಪಟ್ಟಿದ್ದಾರೆ. ಖಾಸಗಿ ಸ್ಟೋರೇಜ್‌ನಲ್ಲಿ ತಿಂಗಳಿಗೆ ಸಾವಿರಾರು ರೂ. ಬಾಡಿಗೆ ಕೊಟ್ಟು ಒಣದ್ರಾಕ್ಷಿ ದಾಸ್ತಾನು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದ್ರಾಕ್ಷಿ ಬೆಳೆಗಾರರ ಸಮಸ್ಯೆ ನಿವೇದಿಸಿದರು.
ಸಂಘಟನೆ ಜಿಲ್ಲಾ ಸಂಚಾಲಕ ಬಾಳು ಜೇವೂರ ಮಾತನಾಡಿ, ವರ್ಷ ಪೂರ್ತಿ ಕಷ್ಟಪಟ್ಟು ದ್ರಾಕ್ಷಿ ಬೆಳೆದ ರೈತರು, ಎಕರೆಗೆ ಲಕ್ಷಾಂತರ ರೂ. ಸಾಲ ಮಾಡಿದ್ದಾರೆ. ಬೆಳೆ ಕಟಾವು ಹಂತದಲ್ಲಿ ಕೊರೊನಾ ಲಾಕ್‌ಡೌನ್ ಸೃಷ್ಟಿಯಾಗಿ ರೈತರು ಮಾರುಕಟ್ಟೆ ಇಲ್ಲವಾಗಿ ಸಂಕಷ್ಟಕ್ಕೆ ಸಿಲುಕಿದರು. ಹೀಗಾಗಿ ರಾಜ್ಯ, ಕೇಂದ್ರ ಸರಕಾರಗಳು ದ್ರಾಕ್ಷಿ ಬೆಳೆಗಾರರ ಪುನಶ್ಚೇತನಕ್ಕೆ ವಿಶೇಷ ಪ್ಯಾಕೆಜ್ ಘೊಷಣೆ ಮಾಡಬೇಕು. ಸರಕಾರ ಪ್ರತಿ ಕೆ.ಜಿ. ಒಣದ್ರಾಕ್ಷಿಗೆ 250 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು. ಜಿಲ್ಲೆಯಲ್ಲಿ ಸಹಕಾರಿ ಕೊಲ್ಡ್ ಸ್ಟೋರೆಜ್ ಇದ್ದರೂ ಸಣ್ಣ ರೈತರು ತಮ್ಮ ಒಣದ್ರಾಕ್ಷಿ ದಾಸ್ತಾನು ಮಾಡಲು ಅವಕಾಶ ಇಲ್ಲವಾಗಿದೆ. ಹೀಗಾಗಿ ಖಾಸಗಿ ಕೋಲ್ಡ್ ಸ್ಟೋರೆಜ್ ಲ್ಲಿ ಹಣಕೊಟ್ಟು ದಾಸ್ತಾನು ಮಾಡುವ ದುಸ್ಥಿತಿ ಇದ್ದು, ಕೂಡಲೇ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ದಾಸ್ಥಾನಿಗೆ ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಮಹಾದೇವ ಲಿಗಾಡೆ, ಆಕಾಶ ರಾಮತೀರ್ಥ, ಪ್ರಕಾಶ ಕಿಲಾರೆ, ಗಣಪತಿ ಯಡವೆ, ರಾಮು ರಾಣಗಟ್ಟಿ, ಮಾಳಪ್ಪ ಯಡವೆ, ಅಶೋಕ ಕರ್ಚೆ, ರಂಗಪ್ಪ ಯಡವೆ ಇದ್ದರು.