Advertisement
ರವಿವಾರ ಸೂರ್ಯನೊಂದಿಗೆ ಕೋವಿಡ್-19 ಕೊರೊನಾ ಕೂಡ ಜಿಲ್ಲೆಯನ್ನು ಪ್ರವೇಶಿಸಿ ಸಾಕ್ಷಿ ನೀಡಿತ್ತು. ಗೋಲಗುಮ್ಮಟ ಪ್ರದೇಶದ ಚಪ್ಪರಬಂದ್ ಗಲ್ಲಿಯ ನಿವಾಸಿ 60 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟ ಕೆಲವೇ ಗಂಟೆಗಳಲ್ಲಿ ಇದೇ ವೃದ್ಧೆಯ ಪಕ್ಕದ ಮನೆಯ ಐವರಲ್ಲಿ ಸೋಂಕು ಇರುವುದು ಅಧಿಕೃತವಾಗಿ ದೃಢಪಟ್ಟಿದೆ. ಕಳೆದ ಒಂದೂವರೆ ತಿಂಗಳಿಂದ ಜಿಲ್ಲೆಯ ಗಡಿ ಭಾಗದಲ್ಲಿರುವ ಕಲಬುರ್ಗಿ, ಬಾಗಲಕೋಟೆ ಸೋಲ್ಲಾಪುರ, ಸಾಂಗ್ಲಿ ಜಿಲ್ಲೆಗಳಲ್ಲೂ ಸೋಂಕಿತರು ಪತ್ತೆಯಾಗಿದ್ದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಜಿಲ್ಲಾ ಧಿಕಾರಿ ವೈ.ಎಸ್. ಪಾಟೀಲ ಅವರ ತಂಡ ಯಶಸ್ವಿಯಾಗಿತ್ತು. ಮಾತ್ರವಲ್ಲದೇ ರಾಜ್ಯಕ್ಕೆ ಜಿಲ್ಲಾಡಳಿತ ಹಲವು ನಿರ್ಧಾರಗಳು ದೇಶಕ್ಕೂ ಮಾರಿಯಾಗಿದ್ದವು. ಆದರೆ, ಒಂದೇ ದಿನ 6 ಜನರಲ್ಲಿ ಸೋಂಕು ದೃಢಪಡುವ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲಿ ಅತ್ಯಂತ ಜಾಣ್ಮೆ ನಡೆ ತೋರಿದ್ದ ಜಿಲ್ಲಾಧಿಕಾರಿ, ಎಸ್ಪಿ, ಜಿಪಂ ಸಿಇಒ ಅವರ ತಂಡಕ್ಕೆ ಬೇಸರ ಜತೆಗೆ ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೆಚ್ಚಿದಂತಾಗಿದೆ.
Related Articles
Advertisement
ಇಚಲಕರಂಜಿ ಪ್ರವಾಸ: ಸೋಂಕಿತೆ ವಾರದ ಹಿಂದೆ ಇಚಲಕರಂಜಿಯಲ್ಲಿ ಸಂಬಂ ಧಿಕರೊಬ್ಬರ ಶವ ಸಂಸ್ಕಾರಕ್ಕೆ ಹೋಗಿ ಬಂದಿದ್ದಳು ಎನ್ನಲಾಗಿದೆ. ನಂತರವೇ ಈ ವೃದ್ಧೆಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆ ಅಲೆದಿದ್ದಾಳೆ. ಈ ಅಂಶಗಳನ್ನೇ ಆಧರಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಹಾರಾಷ್ಟ್ರದ ಪ್ರವಾಸದ ಹಿನ್ನೆಲೆ ಇರುವ ಅನುಮಾನವಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಸೀಲ್‌ಡೌನ್: ಈ ಮಧ್ಯೆ ಸೋಂಕಿತೆಯ ಕುರಿತು ಶನಿವಾರ ಅನುಮಾನ ಮೂಡುತ್ತಲೇ ರಾತ್ರೋರಾತ್ರಿ ಆಕೆ ವಾಸವಿದ್ದ ಚಪ್ಪರಬಂದ ಪ್ರದೇಶದ ಗೋಲಗುಮ್ಮಟ-ಬಡಿಕಮಾನ್ ಇಡೀ ಪ್ರದೇಶವನ್ನು ಸೀಲ್‌ಡೌನ್ ಮಾಡಿ, ಗಲ್ಲಿಗಲ್ಲಿಗಳನ್ನೂ ಕಲ್ಲು-ಮುಳ್ಳು ಬೇಲಿ ಹಾಕಿ ನಿರ್ಬಂಧಿ ಸಲಾಗಿದೆ. ರವಿವಾರ ಬೆಳಗ್ಗೆ ಮನೆಯಿಂದ ಯಾರೂ ಹೊರ ಬರದಂತೆ ಧ್ವನಿವರ್ಧಕದ ಮೂಲಕ ಜನರಿಗೆ ಮಾಹಿತಿ ನೀಡಲಾಗಿದೆ.
ಪ್ರತಿ ಮನೆಯ ಸಮೀಕ್ಷೆ: ಈ ಮಧ್ಯೆ ಸೀಲ್ ಡೌನ್ ಮಾಡಿರುವ ಪ್ರದೇಶದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮನೆಗಳಿದ್ದು, ಪೊಲೀಸರ ರಕ್ಷಣೆಯಲ್ಲಿ ಆರೋಗ್ಯ-ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಆರಂಭಿಸಿದ್ದಾರೆ. ರವಿವಾರ ಸುಮಾರು 500 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಡ್ರೋಣ್ ಕಣ್ಗಾವಲು: ಇದಲ್ಲದೇ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಭಾಯಿಸಲು ಸ್ವಯಂ ಎಸ್ಪಿ ಅನುಪಮ್ ಅಗರವಾಲ್ ಹೆಚ್ಚಿನ ಪೊಲೀಸ್ ಬಲದೊಂದಿಗೆ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಅಲ್ಲದೇ ಮನೆಯಿಂದ ಯಾರೂ ಹೊರಬರದಂತೆ ತೀವ್ರ ಕಟ್ಟೆಚ್ಚರದ ಕಣ್ಗಾವಲಿಗೆ ಡ್ರೋಣ್ ಹಾರಾಟ ನಡೆಸಿದೆ.