ವಿಜಯಪುರ : ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಗರ್ಭೀಣಿಯರ ಶಸ್ತ್ರ ಚಿಕಿತ್ಸಾ ಲೋಪ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭಾನುವಾರ ಮತ್ತೆ ಕೆಲವು ಬಾಣಂತಿಯರಲ್ಲಿ ಶಸ್ತ್ರ ಚಿಕಿತ್ಸೆಯ ಹೊಲಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭಿರತೆ ಅರಿತ ಜಿಲ್ಲಾಡಳಿತ, ಪ್ರಕರಣದ ಅವಲೋಕನಕ್ಕಾಗಿ ಪ್ರವೇಶ ಮಾಡಿದೆ.
ಏಪ್ರೀಲ್ 30 ರಿಂದ ಮೇ 13 ರವರೆಗೆ 18 ಬಾಣಂತಿಯರಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದ ಹೊಲಿಗೆ ಸಮಸ್ಯೆ ಕಂಡು ಬಂದಿದ್ದ ಬೆನ್ನಲ್ಲೇ, ಭಾನುವಾರ ಮತ್ತೆ ಐವರು ಗರ್ಭಿಣಿಯರು ಹೊಲಿಗೆ ಬಿಚ್ಚಿದ ಸಮಸ್ಯೆಯಿಂದ ಆತಂಕದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದರಿಂದಾಗಿ ಪರಿಸ್ಥಿತಿಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಭಾನುವಾರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿರುವ ಡಾ.ವಿ.ಬಿ.ದಾನಮ್ಮವರ, ಹೆರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಸಮಸ್ಯೆ ಎದುರಿಸುತ್ತಿರುವ ಬಾಣಂತಿಯರ ಅಹವಾಲು ಆಲಿಸಿದರು. ರೋಗಿಗಳ ಅಹವಾಲು ಆಲಿಸಿದ ಬಳಿಕ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯ ಕುರಿತು ಸಮಗ್ರ ಮಾಹಿತಿ ಪಡೆದಿದ್ದಾರೆ.
ನಿಮ್ಮ ಆರೋಗ್ಯದಲ್ಲಿ ಕೊಂಚ ಸಮಸ್ಯೆ ಕಂಡು ಬಂದಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ನಿಮಗೆ ನೀಡುತ್ತಿರುವ ಚಿಕಿತ್ಸೆಯನ್ನು ಅತ್ಯಂತ ಹೆಚ್ಚು ಪರಿಣಾಮಕಾರಿ ಹಾಗೂ ಗುಣಮಟ್ಟದಿಂದ ಸೇವೆ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಾನಮ್ಮನವರ ಅಭಯ ನೀಡಿದ್ದಾರೆ.
ಇದನ್ನೂ ಓದಿ : ಪಾರ್ವತಾಂಬ ಜಾತ್ರೆಯಲ್ಲಿ ರಥದ ಚಕ್ರ ಹರಿದ ಘಟನೆ : ಚಿಕಿತ್ಸೆ ಫಲಕಾರಿಯಾಗದೆ ಮತ್ತೋರ್ವ ಸಾವು
ಹೀಗಾಗಿ ಬಾಣಂತಿ ತಾಯಂದಿರುವ ಆತಂಕ ಪಡುವ ಅಗತ್ಯವಿಲ್ಲ. ನೀವೆಲ್ಲ ಆತ್ಮವಿಶ್ವಾಸದಿಂದ ಇರಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಸ್ಫೂರ್ತಿಯ ಮಾತನಾಡಿದ್ದಾರೆ.
ಬಳಿಕ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಎಸ್.ಎಲ್.ಲಕ್ಕಣ್ಣವರು, ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ಕೊಠಡಿಯಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರ ಹೊಲಿಗೆಯಲ್ಲಿ ಸಮಸ್ಯೆ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ದಾನಮ್ಮನವರ ಅವರಿಗೆ ವಿವರಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ರೋಗಿಗಳ ವಾರ್ಡ್‍ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಾನಮ್ಮನವರ, ಸರ್ಕಾರಿ ಆಸ್ಪತ್ರೆಯ ಸ್ವಚ್ಛತೆ, ಸೋಂಕು ನಿರೋಧಕ ಕ್ರಮಗಳನ್ನು ಪರಿಣಾಮಕಾರಿಯಾಗಿ ಮಾಡಬೇಕು. ಸರ್ಕಾರಿ ಆಸ್ಪತ್ರತೆಗಳಿಗೆ ಬಡತನದ ಹಿನ್ನೆಲೆಯ ಜನರೇ ಬರುವ ಕಾರಣ ಆರೋಗ್ಯ ಸೇವೆ ನೀಡುವಲ್ಲಿ ಸರ್ಕಾರಿ ಆಸ್ಪತ್ರತೆಗಳು ಬದ್ಧತೆ ತೋರಬೇಕು ಎಂದು ಸೂಚಿಸಿದರು.