Advertisement

ಗೋಲಗುಮ್ಮಟ ರಾತ್ರಿ ನೋಟ!

02:57 PM Aug 02, 2019 | Naveen |

ಜಿ.ಎಸ್‌.ಕಮತರ
ವಿಜಯಪುರ:
ವಿಶ್ವವಿಖ್ಯಾತ ಗೋಲಗುಮ್ಮಟ ಸ್ಮಾರಕವನ್ನು ಪ್ರವಾಸಿಗರು ರಾತ್ರಿ 9ರವರೆ‌ಗೂ ವೀಕ್ಷಿಸಲು ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ ಸರ್ಕಾರದ ಈ ನಿರ್ಧಾರದ ಕುರಿತು ಸಾರ್ವಜನಿಕರಲ್ಲಿ, ಪ್ರವಾಸಿಗರು ಹಾಗೂ ಅಧಿಕಾರಿ ವರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ವಿಶ್ವಪರಂಪರೆ ಪಟ್ಟಿಗೆ ಸೇರಿಸುವ ಪ್ರಸ್ತಾವನೆ ಸಲ್ಲಿಕೆ ಆಗಿರುವ ವಿಜಯಪುರ ಮಹಾನಗರದಲ್ಲಿರುವ ಗೋಲಗುಮ್ಮಟ ತನ್ನಲ್ಲಿರುವ ಸಪ್ತ ಪ್ರತಿಧ್ವನಿ ವಿಶೇಷತೆಯಿಂದಾಗಿ ಪಿಸುಗುಟ್ಟುವ ಸ್ಮಾರಕ ಎಂದೇ ಜಗತ್ತಿನ ಗಮನ ಸೆಳೆದಿದೆ. 16ನೇ ಶತಮಾನದಲ್ಲಿ ವಿಜಯಪುರದ ಶಾಹಿ ಅರಸ ಮಹ್ಮದ್‌ ಆದಿಲ್ ಶಾಹಿ ಕಾಲದಲ್ಲಿ ನಿರ್ಮಿತವಾದ ಈ ಗೋಲಗುಮ್ಮಟ ಮಾನವ ನಿರ್ಮಿತ ವಿಶ್ವದ ಎರಡನೇ ಅತಿದೊಡ್ಡ ಸ್ಮಾರಕ.

ನೆಲ ಮಾಳಿಗೆ ಸೇರಿದಂತೆ 7 ಅಂತಸ್ತಿನ ಗೋಲಗುಮ್ಮಟ ಸ್ಮಾರಕ ಸುಮಾರು 50 ಮೀ. ಉದ್ದ-ಅಗಲ ವಿಸ್ತೀರ್ಣ ಹೊಂದಿದ್ದು, ಒಳಾವರಣದ ಎತ್ತರ ಸುಮಾರು 175 ಹಾಗೂ ಹೊರಾವರಣದ ಎತ್ತರ ಸುಮಾರು 198 ಅಡಿ ಇದೆ. ಈ ಸ್ಮಾರಕ ಮಹ್ಮದ್‌ ಆದಿಲ್ ಶಾಹಿ ಅರಸ ತನ್ನ ನಿಧನಾ ನಂತರ ಗೋರಿ ಕಟ್ಟಿಕೊಳ್ಳಲು ಈ ವಿಶಿಷ್ಟ ವಿನ್ಯಾಸ-ವಾಸ್ತು ಶೈಲಿಯ ಗುಮ್ಮಟವನ್ನು ತನ್ನ ಜೀವಿತಾವಧಿಯಲ್ಲೇ ನಿರ್ಮಿಸಿಕೊಂಡಿದ್ದ ಎಂಬುದು ವಿಶೇಷ.

ಯಾಕೂತ್‌-ದಬೂಲ್ ಎಂಬ ಅಪರೂಪದ ತಾಂತ್ರಿಕ ಜ್ಞಾನ ಹೊಂದಿದ್ದ ವಾಸ್ತುಶಿಲ್ಪಿಗಳ ಕಣ್ಗಾವಲಿನಲ್ಲಿ ನಿರ್ಮಾಣಗೊಂಡಿರುವ ಗೋಲಗುಮ್ಮಟದ ವೀಕ್ಷಣೆಗೆ ನಿತ್ಯವೂ ಸಾವಿರಾರು ಪ್ರವಾಸಿಗರು ಬರುತ್ತಾರೆ. ಸದ್ಯ ಪ್ರತಿದಿನ ಬೆಳಗ್ಗೆ 6ರಿಂದ ಸಂಜೆ 6ವರೆಗೆ ಈ ಸ್ಮಾರಕ ವೀಕ್ಷಣೆಗೆ ಸಮಯ ನಿಗದಿ ಮಾಡಿದ್ದು, ಸಂಜೆ 5:40ಕ್ಕೆ ಪ್ರವೇಶಕ್ಕೆ ಟಿಕೆಟ್ ವಿತರಣೆ ಮುಗಿಸಿ, 6 ಗಂಟೆಯೊಳಗೆ ಸ್ಮಾರಕದಿಂದ ಹೊರ ಬರುವಂತೆ ಸೂಚಿಸಲಾಗುತ್ತದೆ.

ದೂರದ ಊರುಗಳಿಂದ ವೀಕ್ಷಣೆಗೆ ಬರುವ ಪ್ರವಾಸಿಗರು, ಸಂಜೆ 6ರ ನಂತರ ಇಲ್ಲಿಗೆ ಬಂದಾಗ ಪ್ರವೇಶ ಕೊನೆಗೊಂಡಿರುತ್ತದೆ. ಕಾರಣ ದೂರದಿಂದ ಬಂದ ತಮಗೆ ಅಪರೂಪದ ಸ್ಮಾರಕ ನೋಡಲಾಗಲಿಲ್ಲ ಎಂದು ಕೊರಗುತ್ತ ಸಾಗುತ್ತಿದ್ದರು. ಅಲ್ಲದೇ ತಮ್ಮ ಪ್ರವಾಸಿ ಪಟ್ಟಿಯಂತೆ ಇಲ್ಲಿಂದ ಬೇರೆಡೆ ವೀಕ್ಷಣೆಗೆ ಹೋಗಬೇಕಾದ ಸಂದರ್ಭದಲ್ಲಿ ಇಲ್ಲಿನ ಸ್ಮಾರಕ ನೋಡಲಾಗದೇ ಹಳಹಳಿಸುತ್ತ ಮರಳುವ ಸ್ಥಿತಿ ಇತ್ತು. ಸರ್ಕಾರದ ನಿರ್ಧಾರದಿಂದ ಪ್ರವಾಸಿಗರು ಖುಷಿಗೊಂಡಿದ್ದಾರೆ.

Advertisement

ಭದ್ರತೆ ಕೊರತೆ
ಇದಲ್ಲದೇ ಮಹಿಳೆಯರು-ಮಕ್ಕಳ ಸುರಕ್ಷತೆ ಮಾತ್ರವಲ್ಲ ರಾತ್ರಿ ವೇಳೆ ಸ್ಮಾರಕದ ಸುರಕ್ಷತೆಯೂ ಇಲ್ಲಿ ಮುಖ್ಯವಾಗುತ್ತದೆ. ಸದ್ಯ ದೇಶದ ಐತಿಹಾಸಿಕ ಸ್ಮಾರಕಗಳಿಗೆ ಭದ್ರತೆ ಕಲ್ಪಿಸುತ್ತಿರುವ ಎಸ್‌ಐಎಸ್‌ ಸಂಸ್ಥೆಯಿಂದ 3 ಪಾಳೆಯಂತೆ ತಲಾ 6 ಜನರು ಕಾವಲಿಗಿದ್ದು, ವಾರದ ರಜೆ, ಕಾಯಿಲೆ ಇತರೆ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆಗೆ ಒಟ್ಟು 24 ಜನರು ಭದ್ರತಾ ಸಿಬ್ಬಂದಿ ಇದ್ದಾರೆ. ಇದಲ್ಲದೇ ಶಸ್ತ್ರಧಾರಿ 4 ಸಿಬ್ಬಂದಿ ಕೂಡ ಇಲ್ಲಿ ಗುಮ್ಮಟ ಆವರಣದಲ್ಲಿ ಭದ್ರತಾ ಕರ್ತವ್ಯ ನಿರ್ವಹಿಸುತ್ತಾರೆ. ಒಂದೊಮ್ಮೆ ರಾತ್ರಿ ವೇಳೆ ಯಾವುದಾದರೂ ಅಚಾತುರ್ಯ ದಿಂದ ಆನಾಹುತ ಸಂಭವಿಸಿದರೆ ಈಗಿರುವ ಭದ್ರತಾ ಸಿಬ್ಬಂದಿಯಿಂದ ನಿರ್ವಹಣೆ ಅಸಾಧ್ಯ. ಕಾರಣ ಸರ್ಕಾರ ಈ ಕುರಿತು ಸಾಧಕ-ಬಾಧಕ ಹಾಗೂ ವೈಜ್ಞಾನಿಕ ಚರ್ಚೆ ಮಾಡಿಯೇ ಮುಂದಡಿ ಇಡಬೇಕು . ಒಂದೊಮ್ಮೆ ಸರ್ಕಾರ ರಾತ್ರಿ 9 ಗಂಟೆ ನಂತರವೂ ಗೋಲಗುಮ್ಮಟ ವೀಕ್ಷಣೆ ಎಂಬ ತನ್ನ ನಿಲುವಿಗೆ ಅಂಟಿಕೊಂಡರೆ ಅಗತ್ಯ ಮುಂಜಾಗ್ರತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳದ ಹೊರತು ಸಮಯ ವಿಸ್ತರಣೆ ನಿಯಮ ಜಾರಿಗೆ ತರಬಾರದು. ಗುಮ್ಮಟದ ಪಕ್ಕದಲ್ಲೇ ಪೊಲೀಸ್‌ ಠಾಣೆ ಇದ್ದರೂ ಆವರಣದಲ್ಲಿ ಪೊಲೀಸ್‌ ಹೊರ ಠಾಣೆ ತೆರೆಯುವ ಮೂಲಕ ತಕ್ಷಣ ರಕ್ಷಣೆಗೆ ಹೆಚ್ಚಿನ ಭದ್ರತೆಗೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯ.

ಜನ ಏನಂತಾರೆ?
ಇತರೆ ಸ್ಮಾರಕಗಳಿಗಿಂತ ವಿಭಿನ್ನ ಹಾಗೂ ವಿಶಿಷ್ಟತೆ ಹೊಂದಿರುವ ಹಾಗೂ 67 ಎಕರೆ ವಿಸ್ತೀರ್ಣ ಪ್ರವೇಶ ಆವರಣ ವ್ಯಾಪ್ತಿ ಇರುವ ಗೋಲಗುಮ್ಮಟದಲ್ಲಿ ರಾತ್ರಿ 9ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದರೆ ಭದ್ರತೆ ಹಾಗೂ ಹೆಚ್ಚಿನ ಬೆಳಕಿನ ವ್ಯವಸ್ಥೆಗೆ ಮೊದಲ ಆದ್ಯತೆ ನೀಡಬೇಕಿದೆ. ಗುಮ್ಮಟದ ಮೇಲಿಂದ ಬಿದ್ದು ಹಗಲೊತ್ತಿನಲ್ಲೇ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ದಾಖಲೆಗಳಿವೆ. ಇಂತಹ ಸ್ಥಿತಿಯಲ್ಲಿ ರಾತ್ರಿ ವೇಳೆ ವೀಕ್ಷಣೆಗೆ ಅವಕಾಶ ಕಲ್ಪಿಸಿದರೆ ಮಹಿಳೆಯರು-ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ರಾತ್ರಿ ವೇಳೆ ಒಳಾವರಣ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೆ ಹೆಚ್ಚಿನ ಬೆಳಕು ಹಾಗೂ ಭದ್ರತೆ ಕಲ್ಪಿಸಲೇಬೇಕು.

Advertisement

Udayavani is now on Telegram. Click here to join our channel and stay updated with the latest news.

Next