Advertisement

ಗುಮ್ಮಟಕ್ಕಿಲ್ಲ ನಿತ್ಯ ದೀಪಾಲಂಕಾರ ಭಾಗ್ಯ

11:06 AM Aug 26, 2019 | Naveen |

ಜಿ.ಎಸ್‌. ಕಮತರ
ವಿಜಯಪುರ
: ವಿಶ್ವವಿಖ್ಯಾತ ಗೋಲಗುಮ್ಮಟ ಸ್ಮಾರಕಕ್ಕೆ ರಾತ್ರಿ ವೇಳೆ ಸೌಂದರ್ಯ ಹೆಚ್ಚಿಸಲು ವಿದ್ಯುತ್‌ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಲು ವಿದ್ಯುತ್‌ ಬಿಲ್ ಕಟ್ಟಲು ಇಲಾಖೆಗಳು ಹಗ್ಗ ಜಗ್ಗಾಟ ಮಾಡುತ್ತಿವೆ. ಐತಿಹಾಸಿಕ ಅಪರೂಪದ ಈ ಸ್ಮಾರಕ ವೀಕ್ಷಣೆಗೆ ಲಕ್ಷಾಂತರ ಜನರು ಬರುವ ಕಾರಣಕ್ಕೆ ರಾತ್ರಿ ವೇಳೆ ಸ್ಮಾರಕಕ್ಕೆ ದೀಪಗಳ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಐದು ವರ್ಷದ ಹಿಂದೆ ಗೋಲಗುಮ್ಮಟಕ್ಕೆ ಕಲ್ಪಿಸಲಾಗಿದ್ದ ದೀಪಾಲಂಕಾರ ವಿದ್ಯುತ್‌ ಬಿಲ್ ಕಟ್ಟಲಾಗದೇ ಬಾಕಿ ಉಳಿಡಿಕೊಂಡಿದ್ದನ್ನು ಈಚೆಗೆ ಪಾಲಿಕೆ ಕಟ್ಟಿದೆ.

Advertisement

ಐತಿಹಾಸಿಕ ಗೋಲಗುಮ್ಮಟಕ್ಕೆ ರಾತ್ರಿ ದೀಪಾಲಂಕಾರ ವ್ಯವಸ್ಥೆಗಾಗಿ ಶಾಶ್ವತವಾಗಿ ಬಲ್ಪಿಂಗ್‌ ವ್ಯವಸ್ಥೆ ಇದ್ದರೂ ಈ ದೀಪದ ಬೆಳಕಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಹಾಗೂ ಬಿಲ್ ಪಾವತಿ ಮಾಡುವ ಹಾಗೂ ನಿರ್ವಹಣೆ ಮಾಡುವವರು ಯಾರು ಎಂಬ ಸ್ಪಷ್ಟತೆಯೇ ಇಲ್ಲ. ಹೀಗಾಗಿ ಗೋಲಗುಮ್ಮಟಕ್ಕೆ ನಿತ್ಯ ದೀಪಾಲಂಕಾರದ ಭಾಗ್ಯ ಇಲ್ಲವಾಗಿದೆ.

ಸಂಗೀತ, ಸಾಹಿತ್ಯ ಸೇರಿದಂತೆ ವಿಜಯಪುರ ಆದಿಲ್ ಶಾಹಿ ಅರಸರ ಪಾರಂಪರಿಕ ಸ್ಮರಣೆಗಾಗಿ ಜಿಲ್ಲೆಯಲ್ಲಿ ನವರಸಪುರ ಉತ್ಸವ ಆಚರಿಸಲಾಗುತ್ತದೆ. ಎಂ.ಬಿ. ಪಾಟೀಲ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಜಲ ಸಂಪನ್ಮೂಲ ಖಾತೆ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ಹಂತದಲ್ಲಿ ಸಚಿವರಾದ ಹೊಸತರಲ್ಲಿ 2015ರಲ್ಲಿ ವಿಜಯಪುರ ನಗರದಲ್ಲಿ ನವರಸಪುರ ಉತ್ಸವ ಆಚರಿಸಿದ್ದರು. ಪ್ರವಾಸೋದ್ಯಮ ಇಲಾಖೆ ಉಸ್ತುವಾರಿ ಇರುವ ಜಿಲ್ಲಾಧಿಕಾರಿ ರಂದೀಪ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ನವರಸಪುರ ಉತ್ಸವ ಸಂದರ್ಭದಲ್ಲಿ ಗೋಲಗುಮ್ಮಟ ಸ್ಮಾರಕಕ್ಕೆ ವಿದ್ಯುತ್‌ ದೀಪಾಲಂಕಾರ ಕಲ್ಪಿಸಲು ನಿರ್ಧರಿಸಲಾಗಿತ್ತು.

ಮೂರು ದಿನಗಳ ಉತ್ಸವದ ಸಂದರ್ಭದಲ್ಲಿ ಐತಿಹಾಸಿಕ ಗೋಲಗುಮ್ಮಟ ಸ್ಮಾರಕ ರಾತ್ರಿ ವೇಳೆ ಜಗಮಗಿಸಿ, ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲಿ ಎಂಬ ಕಾರಣಕ್ಕೆ ವೈರಿಂಗ್‌ ಹಾಗೂ ಬಲ್ಪಿಂಗ್‌ ದುರಸ್ತಿ ಮಾಡಿಸಲಾಗಿತ್ತು. ಬಾಕಿ ಇದ್ದ ಸುಮಾರು 70 ಸಾವಿರ ರೂ. ವಿದ್ಯುತ್‌ ಬಾಕಿ ಕಟ್ಟಿ, ರಾತ್ರಿ ವೇಳೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಅಂದಿನ ಎಲ್ಲ ವಿದ್ಯತ್‌ ಬಿಲ್ ಬಾಕಿಯನ್ನು ಪ್ರವಾಸೋದ್ಯಮ ಇಲಾಖೆಯಿಂದಲೇ ಪಾವತಿಸಿ ಗೋಲಗುಮ್ಮಟ ಸ್ಮಾರಕಕ್ಕೆ ರಾತ್ರಿ ವೇಳೆ ವ್ಯೆವಿಧ್ಯಮಯ ರಂಗು ರಂಗಿನ ಬೆಳಕು ನೀಡುವ ದೀಪಗಳ ವ್ಯವಸ್ಥೆ ಮಾಡಲಾಗಿತ್ತು. ಇದಾದ ಬಳಿಕ ವಾರಕ್ಕೆ ಒಂದು ದಿನ ಅಥವಾ ನಿತ್ಯವೂ ರಾತ್ರಿ ವೇಳೆ ಈ ದೀಪಾಲಂಕಾರದ ವ್ಯವಸ್ಥೆಯನ್ನು ಮುಂದುವರಿಸಲು ಚಿಂತನೆ ನಡೆದಿದ್ದರೂ ಅದು ಜಾರಿಗೆ ಬರಲಿಲ್ಲ.

ಆದರೆ ನವರಸಪುರ ಉತ್ಸವ ಸಂದರ್ಭದಲ್ಲಿ ಬಳಕೆ ಮಾಡಿದ ವಿದ್ಯುತ್‌ ಬಾಕಿ ಮಾತ್ರ ಹಾಗೇ ಉಳಿದಿದೆ. ಉತ್ಸವ ಮುಗಿದು 5 ವರ್ಷ ಕಳೆದರೂ ಗೋಲಗುಮ್ಮಟ ಸ್ಮಾರಕಕ್ಕೆ ರಾತ್ರಿ ಸೌಂದರ್ಯಕ್ಕಾಗಿ ಕಲ್ಪಿಸಿದ್ದ ದೀಪಾಲಂಕಾರದ ವಿದ್ಯುತ್‌ ಬಿಲ್ ಮತ್ತೆ ಬಾಕಿ ಉಳಿದು ಕೊಂಡಿತ್ತು. ನವರಸಪುರ ಉತ್ಸವದ ದೀಪಾಲಂಕಾರ ವಿದ್ಯುತ್‌ ಪಾವತಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ವ್ಯವಸ್ಥೆ ಕಲ್ಪಿಸಿರುವುದು ನಮ್ಮ ಇಲಾಖೆಯಲ್ಲ, ಜಿಲ್ಲಾಡಳಿತದ ಮೂಲಕ ನವರಸಪುರ ಉತ್ಸವ ಸಮಿತಿ ಕೋರಿಕೆ ಮೇರೆಗೆ ನಮ್ಮ ಸ್ಮಾರಕಕ್ಕೆ ದೀಪಾಲಂಕಾರ ಕಲ್ಪಿಸಲು ಅವಕಾಶ ನೀಡಿದ್ದೇವೆ. ಹೀಗಾಗಿ ವಿದ್ಯತ್‌ ಬಿಲ್ ಪಾವತಿ ನಮ್ಮ ಇಲಾಖೆ ಹೊಣೆಯಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಬಿಲ್ ಬಾಕಿ ಪಾವತಿಸಲು ನಿರಾಕರಿಸಿತು.

Advertisement

ಇತ್ತ ನವರಸಪುರ ಉತ್ಸವ ಮೂಲಕ ಪ್ರವಾಸೋದ್ಯಮ ಬಲಪಡಿಸುವ ಉದ್ದೇಶದಿಂದ ಗೋಲಗುಮ್ಮಟಕ್ಕೆ ದೀಪಾಲಂಕಾರ ಕಲ್ಪಿಸಿದ್ದ, ಪ್ರವಾಸೋದ್ಯಮ ಇಲಾಖೆ ಇದು ನನಗೆ ಸಂಬಂಧಿಸಿದಲ್ಲ ಎಂದು ವಿದ್ಯತ್‌ ಬಿಲ್ ಪಾವತಿಸದೇ ಮುಖ ತಿರುಗಿಸಿತು. ಪರಿಣಾಮ ಕಳೆದ 5 ವರ್ಷಗಳಲ್ಲಿ ವಿದ್ಯುತ್‌ ಬಳಕೆ ಹಾಗೂ ಬಾಕಿ ಮೊತ್ತದ ಬಡ್ಡಿ ಎಲ್ಲ ಸೇರಿ ಸುಮಾರು 56 ಸಾವಿರ ರೂ. ಮೊತ್ತದ ಬಿಲ್ ಬಾಕಿ ಉಳಿದಿತ್ತು.

ಈಚೆಗೆ ಪ್ರವಾಸೋದ್ಯಮ ಇಲಾಖೆಯ ಉನ್ನತ ಆಧಿಕಾರಿ ಟಿ.ಕೆ. ಅನಿಲಕುಮಾರ ಅವರು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಐತಿಹಾಸಿಕ ಗೋಲಗುಮ್ಮಟ ಸ್ಮಾರಕಕ್ಕೆ ನವರಸಪುರ ಉತ್ಸವ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಗೋಲಗುಮ್ಮಟ ದೀಪಾಲಂಕಾರಕ್ಕಾಗಿ ಬಳಕೆ ಮಾಡಿದ ವಿದ್ಯುತ್‌ ಬಿಲ್ ಪಾವತಿಸದ ಸಂಗತಿ ಚರ್ಚೆಗೆ ಬಂದಿದೆ. ಪ್ರವಾಸೋದ್ಯಮ ಇಲಾಖೆ ಪ್ರಭಾರಿ ಅಧಿಕಾರಿ ಈ ವಿಷಯದಲ್ಲಿ ಕೈ ಚೆಲ್ಲಿದ್ದಾರೆ. ಅಂತಿಮವಾಗಿ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಸಭೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ್‌ ಮೊಹಸೀನ್‌ ಅವರು, ಮಹಾನಗರ ಪಾಲಿಕೆ ಪೌರಾಯುಕ್ತರಿಗೆ ಸೂಚನೆ ನೀಡಿ ಮಹಾನಗರ ಪಾಲಿಕೆ ಈ ಬಿಲ್ ಬಾಕಿ ಪಾವತಿಸಬೇಕು. ನಗರದ ಬೀದಿ ದೀಪಗಳ ವಿದ್ಯುತ್‌ ದೀಪಗಳ ಬಿಲ್ ಪಾವತಿ ಮಾದರಿಯಲ್ಲೇ ಗೋಲಗುಮ್ಮಟ ಸ್ಮಾರಕ ದೀಪಾಲಂಕಾರದ ವಿದ್ಯುತ್‌ ಬಿಲ್ ಬಾಕಿ ಪಾವತಿಸಲು ಸೂಚಿಸಿದ್ದಾರೆ. ಮೇಲಧಿಕಾರಿಗಳ ಸೂಚನೆಯಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಕಳೆದ ಎರಡು ತಿಂಗಳ ಹಿಂದೆ ಗೋಲಗುಮ್ಮಟ ಸ್ಮಾರಕ್ಕೆ ಐದು ವರ್ಷಗಳ ಹಿಂದೆ ರಾತ್ರಿ ದೀಪಾಲಂಕಾರಕ್ಕಾಗಿ ಮಾಡಿದ ವಿದ್ಯುತ್‌ ಬಾಕಿ ಬಿಲ್ ಪಾವತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next