ವಿಜಯಪುರ: ಮಾಜಿ ಶಾಸಕರಿಗೆ ಶುಕ್ರವಾರ ಕೋವಿಡ್-19 ದೃಢಪಟ್ಟಿದೆ. ಸೋಂಕಿತ ಸಂಖ್ಯೆ 10654 ಎಂದು ಗುರುತಿಸಿದ್ದರೂ, ಮಾಜಿ ಶಾಸಕರ ಮನೆಯ ಸುತ್ತಮುತ್ತ ಸೀಲ್ ಡೌನ್ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಸೋಂಕಿತ ಮಾಜಿ ಶಾಸಕರ ಮನೆ ಇರುವ ಜಲನಗರ ಪ್ರದೇಶ ಬಳಿ ಸೀಲ್ ಡೌನ್ ಮಾಡದ ಕಾರಣ ಜನರು ಓಡಾಟ ಮುಂದುವರಿದಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಹೊಸ ನಿಯಮದ ಪ್ರಕಾರ ಮಾಜಿ ಶಾಸಕರ ಮನೆಯನ್ನು ಮಾತ್ರ ಸೀಲ್ ಡೌನ್ ಮಾಡಿದ್ದಾಗಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ಸೀಲ್ ಡೌನ್ ಮಾಡಲಾದ ಮನೆಗೆ ಯಾರೂ ಬರುವಂತಿಲ್ಲ. ಸೋಂಕಿತ ಮಾಜಿ ಶಾಸಕರನ ಮನೆಯ ಸದಸ್ಯರು ಕೂಡ ಮನೆಯಿಂದ ಹೊರ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾಹಿತಿ ನೀಡಿದ್ದಾರೆ.
ಸೋಂಕಿತ ಮಾಜಿ ಶಾಸಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಇವರ ಕುಟುಂಬ ಸದಸ್ಯರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ನಿರೀಕ್ಷಿಸಲಾಗುತ್ತಿದೆ