Advertisement

ಯುವಕರು ಕೃಷಿಯಲ್ಲಿ ತೊಡಗಲಿ

05:26 PM Dec 30, 2019 | Naveen |

ವಿಜಯಪುರ: ಯುವಕರು ಮತ್ತು ಕೃಷಿ ವಿದ್ಯಾರ್ಥಿಗಳು ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಉದ್ಯೋಗ ಅರಸಿ ದೂರದ ನಗರಗಳಿಗೆ ವಲಸೆ ಹೋಗದೆ ಹಳ್ಳಿಗಳಿಗೆ ತೆರಳಿ ಕೃಷಿಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ ವಿಜೇತ ನಂದಬಸಪ್ಪ ಚೌಧರಿ ಸಲಹೆ ನೀಡಿದರು.

Advertisement

ವಿಜಯಪುರ ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರ, ವಿದ್ಯಾರ್ಥಿ ಸಂಘ ಹಾಗೂ ಕೃಷಿ ಕಾಲೇಜು ಸಹಯೋಗದಲ್ಲಿ ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯುವ ಮೂಲಕ ಸಾಂಪ್ರದಾಯಿಕ ಪದ್ಧತಿಯ ರೈತರಿಗೆ ನೆರವಾಗಬೇಕು. ಜೊತೆಗೆ ದೇಶವನ್ನು ಅಭಿವೃದ್ಧಿಯತ್ತ ಸಾಗಿಸುವ ಹೊಣೆ ನಿಭಾಯಿಸಬೇಕು ಎಂದು ಹೇಳಿದರು.

ಕೃಷಿ ವಿದ್ಯಾರ್ಥಿಗಳು ತಮ್ಮ ಪಠ್ಯ ಪುಸ್ತಕಗಳಲ್ಲಿಯ ಕೃಷಿ ಮಾಹಿತಿ ಪಡೆಯುವ ಜೊತೆಗೆ ಹೆಚ್ಚು ಹೆಚ್ಚು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ತಾವು ಕಲಿತ ಕೃಷಿ ಜ್ಞಾನವನ್ನು ವಾಸ್ತವಿಕ ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ವಿಭಿನ್ನ ಪ್ರಯೋಗ ಮಾಡಿ, ಕೃಷಿ ಕ್ಷೇತ್ರವನ್ನು ಸಬಲೀಕರಣ ಮಾಡುವಲ್ಲಿ ಜವಾಬ್ದಾರಿ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಎಸ್‌.ಎ. ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಯುವ ಕೃಷಿಕ ಮಹಾಂತೇಶ ಚೌಧರಿ ಮಾತನಾಡಿ, ಕೃಷಿ ವಿದ್ಯಾರ್ಥಿಗಳು ಅಧೀರರಾಗಿರುವ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಬೆಳೆಸಿ, ಅಭಿವೃದ್ಧಿ ಪಡಿಸಲು ಕೃಷಿಯತ್ತ ಮುಖ ಮಾಡಬೇಕು. ಈ ವಿಷಯದಲ್ಲಿ ನಮ್ಮ ಬದ್ಧತೆ ಇದೆ ಎಂದು ಸಮ್ಮತಿ ಸೂಚಿಸುವಂತೆ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.

Advertisement

ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ| ಎಚ್‌.ಬಿ. ಬಬಲಾದ ಮಾತನಾಡಿ, ಯುವ ಪೀಳಿಗೆ ಹವಾಮಾನ ವೈಪರಿತ್ಯವನ್ನು ಸಮರ್ಥವಾಗಿ ಎದುರಿಸಲು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಜೊತೆಗೆ ಕೃಷಿ ವಲಯವನ್ನು ಯಶಸ್ಸಿನ ವ್ಯವಸ್ಥೆಯಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.

ವೈದ್ಯಾ ಧಿಕಾರಿ ಡಾ| ಎಸ್‌.ಬಿ. ಕಲಘಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕರರಾದ ಡಾ| ಅಶೋಕ ಸಜ್ಜನ ಸ್ವಾಗತಿಸಿದರು. ಹಿರಿಯ ತಾಂತ್ರಿಕ ಅಧಿಕಾರಿ ಬಿ.ಸಿ. ಕೊಲ್ಹಾರ ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಟಿ. ಶಶಾಂಕ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next