Advertisement

ಯತ್ನಾಳಗೆ ಅಧಿಕಾರ ತಪ್ಪಿಸಿದ ಹರಿತ ನಾಲಿಗೆ

10:41 AM Aug 21, 2019 | Naveen |

ಜಿ.ಎಸ್‌. ಕಮತರ
ವಿಜಯಪುರ:
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಕೊನೆಗೂ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆ ಆಗಿದ್ದು, ಬಿಜೆಪಿ ಮೂವರು ಶಾಸಕರಿದ್ದರೂ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಕೈ ತಪ್ಪಿದೆ. ಸಚಿವಗಿರಿ ರೇಸ್‌ನಲ್ಲಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪಕ್ಷದಲ್ಲೇ ಇರುವ ವಿರೋಧಿ ಪಡೆ ಹಾಗೂ ಹರಿತವಾದ ಅವರ ನಾಲಿಗೆ ಸಚಿವ ಸ್ಥಾನಕ್ಕೆ ಕೊಕ್ಕೆ ಹಾಕಿದೆ ಎಂಬ ವಿಶ್ಲೇಷಣೆ ನಡೆದಿದೆ.

Advertisement

ಸಂಪುಟ ವಿಸ್ತರಣೆ ನಡೆದ ಮಂಗಳವಾರ ಬೆಳಗಿನವರೆಗೂ ಮಾಧ್ಯಮಗಳಲ್ಲಿ ಹರಿದಾಡಿದ ಪಟ್ಟಿಯಲ್ಲಿ ವಿಜಯಪುರ ಶಾಸಕ ಯತ್ನಾಳ ಮುಂಚೂಣಿಯಲ್ಲಿದ್ದರು. ಎರಡು ಬಾರಿ ಸಂಸದರಾಗಿ, ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ರೈಲ್ವೆ ಹಾಗೂ ಜವಳಿ ಸಚಿವರಾಗಿದ್ದರು. ಎರಡು ಬಾರಿ ವಿಜಯಪುರ ಕ್ಷೇತ್ರದಿಂದ ವಿಧಾನಸಭೆಗೆ ಹಾಗೂ ಒಂದು ಬಾರಿ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಸ್ಥಾನದ ವಿಜಯಪುರ-ಬಾಗಲಕೋಟೆ ಕ್ಷೇತ್ರದಿಂದ ವಿಧಾನಸೌಧ ಮೆಟ್ಟಿಲೇರಿದ ರಾಜಕೀಯ ಹಿರಿತವಿದೆ. ಕೇಂದ್ರ ಮಂತ್ರಿಯಾಗಿ ಸೇವೆ ಸಲ್ಲಿಸಿದ ಕಾರಣಕ್ಕೆ ಪಕ್ಷದ ಕೇಂದ್ರದ ಹಾಲಿ ಸಚಿವರಾದ ನಿತಿನ ಗಡ್ಕರಿ, ಪಿಯೂಶ್‌ ಗೋಯಲ್ ಅವರಂಥ ಘಟಾನುಘಟಿ ನಾಯಕರ ಸಂಪರ್ಕವೂ ಇದೆ. ಈ ಕಾರಣಕ್ಕೆ ಯತ್ನಾಳ ಅವರಿಗೆ ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಖಾತ್ರಿ ಎಂದೇ ಜಿಲ್ಲೆ ಜನರು ನಂಬಿದ್ದರು.

ಆದರೆ ಯತ್ನಾಳ ಅವರ ಕಡ್ಡಿ ಮುರಿದಂತೆ ಮಾತನಾಡುವ ನಡೆ, ಪಕ್ಷದ ನಾಯಕರನ್ನೂ ಬಿಡದೆ ಆಡುವ ಹರಿತವಾದ ನಾಲಿಗೆ ಅವರಿಗೆ ಸಚಿವ ಸ್ಥಾನದ ಅವಕಾಶ ಕೈ ತಪ್ಪಿಸಿದೆ ಎಂಬ ಮಾತಿದೆ. 2011ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಯತ್ನಾಳ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಸೋತಿದ್ದರು. ಆಗ ಅವರ ಪಕ್ಷದ ಸರ್ಕಾರವನ್ನು ಮುನ್ನಡೆಸುತ್ತಿದ್ದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ವಾಚಾಮಗೋಚರ ಟೀಕಿಸಿದ್ದಕ್ಕೆ ಪಕ್ಷದಿಂದ ಉಚ್ಛಾಟನೆ ಆಗಿದ್ದರು. ನಂತರ ಜೆಡಿಎಸ್‌ ಸೇರಿ ಎರಡನೇ ಸೋಲು ಕಂಡ ಬಳಿಕ 2013ರ ಹೊತ್ತಿಗೆ ಅನಂತಕುಮಾರ ಅವರ ಮೂಲಕ ಮಾತೃ ಪಕ್ಷಕ್ಕೆ ಮರಳಿದ್ದರು.

ಸ್ಥಳೀಯ ಸಂಸ್ಥೆಗಳ ಮೇಲ್ಮನೆಯ ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಗಳ ದ್ವಿ ಸ್ಥಾನಗಳಲ್ಲಿ ಹಲವು ಚುನಾವಣೆಗಳಲ್ಲಿ ಬಾಗಲಕೋಟೆ ಯವರೇ ಗೆದ್ದಿದ್ದು, ಒಂದು ಸ್ಥಾನವನ್ನು ವಿಜಯಪುರ ಜಿಲ್ಲೆಗೆ ಬಿಟ್ಟುಕೊಟ್ಟು ತಮಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಬಿಜೆಪಿ ಮೇಲ್ಮನೆ ಚುನಾವಣೆಗೆ ಟಿಕೆಟ್ ಕೈ ತಪ್ಪಲು ಕಾರಣ ಎಂದು ಅಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ವಿರುದ್ಧವೂ ನಾಲಿಗೆ ಹರಿಬಿಟ್ಟಿದ್ದರು. ಇಷ್ಟಕ್ಕೆ ನಿಲ್ಲದೇ ಪಕ್ಷೇತರರಾಗಿ ಕಣಕ್ಕೆ ಇಳಿದು ಗೆದ್ದರೂ ಪಕ್ಷದಿಂದ ಎರಡನೇ ಬಾರಿಗೆ ಉಚ್ಛಾಟನೆಗೊಳ್ಳುವಂತೆ ಮಾಡಿತ್ತು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತ್ತೆ ಮಾತೃ ಪಕ್ಷ ಬಿಜೆಪಿ ಸೇರ್ಪಡೆಯಾಗಿ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಜಯಪುರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಕೇಂದ್ರ ಸಚಿವ ರಮೇಶ ಜಿಗಜಿಣಗಿ ವಿರುದ್ಧ ಬಹಿರಂಗ ಟೀಕೆ ಮುಂದುವರಿಸಿದರು. ಇಷ್ಟಾದರೂ ಜಿಗಜಿಣಗಿ ವಿಜಯ ಸಾಧಿಸಿದ್ದರು. ಕೇಂದ್ರ ಮಟ್ಟದಲ್ಲಿ ಸದ್ಯ ಉತ್ತಮ ಸಂಬಂಧ ಹೊಂದಿರುವ ಜಿಗಜಿಣಗಿ ಅವರು ಯತ್ನಾಳ ವಿರುದ್ಧ ಕೇಂದ್ರ ನಾಯಕರಿಗೆ ದೂರು ನೀಡಿದ್ದಾರೆ. ಪಕ್ಷದ ನಾಯಕರ ವಿರುದ್ಧ ಹಲವು ಬಾರಿ ನಾಲಿಗೆ ಹರಿಬಿಟ್ಟ ಈ ಹಿಂದಿನ ನಡೆಯನ್ನೆಲ್ಲ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಕೇಂದ್ರದಲ್ಲಿ ಸಚಿವರಾಗಿರುವ ಜೋಶಿ ಅವರೂ ಧ್ವನಿಗೂಡಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಸಂಪುಟ ಸೇರುವ ಶಾಸಕರ ಪಟ್ಟಿ ಹೈಕಮಾಂಡ್‌ ಮಟ್ಟದಲ್ಲಿ ನಿರ್ಧಾವಾಗಿರುವ ಕಾರಣ ಜಿಗಜಿಣಗಿ ಅವರು ನಾಲಿಗೆ ಕಥೆಯನ್ನು ಬಿಚ್ಚಿಟ್ಟಿದ್ದು, ಯತ್ನಾಳ ಅವರಿಗೆ ಸಚಿವ ಸ್ಥಾನ ಕೈ ತಪ್ಪಿಸಿದೆ ಎಂಬ ವಿಶ್ಲೇಷಣೆಗಳಿವೆ.

Advertisement

ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಖುದ್ದು ಯಡಿಯೂರಪ್ಪ ಅವರ ಬಳಿ ಹೋಗಿ ಒತ್ತಡ ಇರುವವರಿಗೆ ಸಚಿವ ಸ್ಥಾನ ನೀಡಿ, ನನಗೆ ಬೇಡ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಿ ಸಾಕು ಎಂದು ಹೇಳಿದ ಮೊದಲ ಶಾಸಕರೇ ಯತ್ನಾಳ. ಹೀಗಾಗಿ ನಮ್ಮ ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಿಲ್ಲ ಹಾಗೂ ಅಸಮಾಧಾನವಿಲ್ಲ. ಇದನ್ನು ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
•ರಾಘು ಅಣ್ಣಿಗೇರಿ, ಶಾಸಕ ಯತ್ನಾಳ ಆಪ್ತ

Advertisement

Udayavani is now on Telegram. Click here to join our channel and stay updated with the latest news.

Next