Advertisement

Vijayapura: ಎಸ್ಸೆಸ್ಸೆಲ್ಸಿ 60 ಟಾಪರ್ಸ್‌ಗೆ ರಾಜಧಾನಿ ಪ್ರವಾಸ ಭಾಗ್ಯ

04:46 PM May 23, 2023 | Nagendra Trasi |

ವಿಜಯಪುರ: ಈಗಾಗಲೇ ಮಿಷನ್‌ ವಿದ್ಯಾಪುರ ಕಾರ್ಯಕ್ರಮದ ಮೂಲಕ ಜಿಪಂ ಸಿಇಒ ರಾಹುಲ್‌ ಶಿಂಧೆ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಜಿಲ್ಲೆಯ ಎಸ್ಸೆಸ್ಸೆಲ್ಸಿ 60 ಟಾಪರ್‌ ಗಳಿಗೆ ರಾಜಧಾನಿ ಪ್ರವಾಸ ಆಯೋಜಿಸಿ ಪ್ರೇರಣಾದಾಯಕವಾದ ಮತ್ತೊಂದು ವಿನೂತನ ಹೆಜ್ಜೆ ಇರಿಸಲು ಮುಂದಾಗಿದ್ದಾರೆ.

Advertisement

ರಾಜ್ಯದಲ್ಲೇ ಮೊದಲ ಬಾರಿಗೆ ವಿಜಯಪುರ ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯಲ್ಲಿನ ಸುಧಾರಣೆಗಾಗಿ ಇಂಥದ್ದೊಂದು ವಿನೂತನ
ಪ್ರಯೋಗಕ್ಕೆ ಸಿದ್ಧತೆ ಅಂತಿಮಗೊಂಡಿದೆ. ಎಸ್ಸೆಸ್ಸೆಲ್ಸಿ ಪ್ರತಿಭಾವಂತ ಮಕ್ಕಳಿಗೆ ಉನ್ನತ ಗುರಿ ಸೃಷ್ಟಿಸಿಕೊಳ್ಳಲು ಹಾಗೂ ಇದೀಗ 9 ಹಾಗೂ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಇಂಥ ಅವಕಾಶ ಪಡೆಯುವಲ್ಲಿ ಸ್ಫೂರ್ತಿ  ಹಾಗೂ ಪ್ರೇರಣೆ ನೀಡುವಲ್ಲಿ ಈ ಪ್ರಯೋಗ ಮತ್ತೂಂದು ರೀತಿಯಲ್ಲಿ ನೆರವಾಗಲಿದೆ ಎಂಬ ನಿರೀಕ್ಷೆ ಇದೆ.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಶಿಕ್ಷಣ ಇಲಾಖೆ ತಾಲೂಕುವಾರು ಟಾಪರ್‌ ಆಯ್ಕೆ ಮಾಡಿದ 30
ವಿದ್ಯಾರ್ಥಿಗಳನ್ನು, ವಿವಿಧ ವಸತಿ ನಿಲಯಗಳಿಂದ 30 ಮಕ್ಕಳು ಸೇರಿ 60 ಟಾಪರ್‌ಗಳನ್ನು ಪ್ರವಾಸಕ್ಕೆ ಕಳಿಸಲು ನಿರ್ಧರಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಮಾತ್ರ ಈ ವಿಶೇಷ ಪ್ರವಾಸಕ್ಕೆ ಅರ್ಹರು. ಇದರಲ್ಲಿ ಸಮಾಜ ಕಲ್ಯಾಣ ಇಲಾಖೆ 16, ಹಿಂದುಳಿದ ವರ್ಗದ 8, ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಯಲದ 6 ಮಕ್ಕಳನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಅರ್ಧದಷ್ಟು ಬಾಲಕ-ಬಾಲಕಿಯರು ಇರಲಿದ್ದಾರೆ.

ಉದ್ದೇಶ: ಗ್ರಾಮೀಣ ಪರಿಸರದಿಂದ ಬಂದಿರುವ ಬಡ ಮಕ್ಕಳಿಗೆ ಉನ್ನತ ಗುರಿಯೊಂದಿಗೆ ಪ್ರೇರಣಾದಾಯಕ ಕನಸು
ರೂಪಿಸಿಕೊಳ್ಳಲು ಈ ವಿಶೇಷ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಪ್ರವಾಸದಲ್ಲಿ ಕನ್ನಡದಲ್ಲೇ ಓದಿ, ಉನ್ನತ ಸ್ಥಾನಕ್ಕೇರಿದ ಸಾಧಕರ ಭೇಟಿ ಮಾಡಿಸಲಾಗುತ್ತಿದೆ. ಬೆಂಗಳೂರಿನಂತ ಮಹಾನಗರದಲ್ಲಿ ನಾವೂ ಉನ್ನತ ಶಿಕ್ಷಣ ಪಡೆದು, ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಿದೆ. ಭವಿಷ್ಯದ ಜೀವನ ರೂಪಿಸಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ಪ್ರತಿಭಾವಂತ ಮಕ್ಕಳಲ್ಲಿ ಪ್ರೇರಣೆ ನೀಡುವುದು ಪ್ರವಾಸದ ಉದ್ಧೇಶ.

ಎಲ್ಲೆಲ್ಲಿ ಭೇಟಿ: ವಿಧಾನಸೌಧ, ವಿಕಾಸಸೌಧ, ಬಹು ಮಹಡಿ ಕಟ್ಟಡ, ಉಚ್ಛ ನ್ಯಾಯಾಲಯ, ನೆಹರು ತಾರಾಲಯ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ಆಫ್‌ ಸೈನ್ಸ್‌, ವಿಕ್ಟೋರಿಯಾ ಆಸ್ಪತ್ರೆ-ವೈದ್ಯಕೀಯ ಕಾಲೇಜು, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ, ಬಹುರಾಷ್ಟ್ರೀಯ ಬೃಹತ್‌ ಕಂಪನಿಗಳಿಗೆ ಭೇಟಿ ನೀಡಲಿದ್ದಾರೆ. ಈ ಅವ ಧಿಯಲ್ಲಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಭೇಟಿಗೆ ಜಿಪಂ ಸಿಇಒ ಅದಾಗಲೇ ಪತ್ರ ಬರೆದು, ಸಮಯ ನೀಡುವಂತೆ ಕೋರಿದ್ದಾರೆ. ಕನ್ನಡದಲ್ಲೇ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದ ಸಾಧಕರೊಂದಿಗೆ ಮಕ್ಕಳು ಮುಖಾಮುಖೀಯಾಗಲು ವೇದಿಕೆ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಮಾರ್ಕೆಟಿಂಗ್‌
ಹಾಗೂ ಮೆಟ್ರೋ ರೈಲು ಪ್ರಯಾಣಕ್ಕೂ ಅವಕಾಶ ಕಲ್ಪಿಸಲಾಗಿದೆ.

Advertisement

3 ಲಕ್ಷ ರೂ. ವೆಚ್ಚ: ಟಾಪರ್‌ಗಳ ಪ್ರವಾಸಕ್ಕೆ ಸುಮಾರು 3 ಲಕ್ಷ ರೂ. ವೆಚ್ಚ ತಗುಲುವ ಅಂದಾಜಿದ್ದು, ಸಮುದಾಯದ ಹೊಣೆಗಾರಿಕೆ ನಿಧಿಯಿಂದ ಇದನ್ನು ಭರಿಸಲಾಗುತ್ತಿದೆ. ಪ್ರವಾಸಕ್ಕೆ ಆಯ್ಕೆಯಾದ ಮಕ್ಕಳಿಗೆ ಒಂದು ಟಿ-ಶರ್ಟ್‌, ಪ್ರವಾಸದ ಪಟ್ಟಿ, ಪೆನ್‌, ಪ್ಯಾಡ್‌ ಸೇರಿದಂತೆ ಸಣ್ಣ ಕಿಟ್‌ ಕೊಡಲಾಗುತ್ತದೆ. ಬೆಂಗಳೂರಿನ ಅತ್ಯುತ್ತಮ ಸೌಲಭ್ಯ ಇರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರವಾಸಿ ಮಕ್ಕಳ ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಟಾಪರ್‌ಗಳ ವಿಶೇಷ ಶೈಕ್ಷಣಿಕ ಪ್ರವಾಸಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ 2 ಬಸ್‌ ಕಳಿಸಲು ಸಿದ್ಧತೆ ನಡೆಸಿದ್ದಾರೆ.

ಯಾವಾಗ ಪ್ರವಾಸ: ಮೇ 24ರಂದು ಸಂಜೆ ವಿಜಯಪುರ ನಗರದಿಂದ ಪ್ರವಾಸ ಆರಂಭಗೊಂಡು 25 ಹಾಗೂ 26ರವರೆಗೆ
ಬೆಂಗಳೂರಿನಲ್ಲಿ ಉದ್ಧೇಶಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 27ರಂದು ಬೆಳಗ್ಗೆ ವಿಜಯಪುರ ನಗರಕ್ಕೆ ಮರಳಲಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಬೆಂಗಳೂರಿನ ಪರಿಸ್ಥಿತಿಯಲ್ಲಿ ಬದಲಾವಣೆ  ಆಗದಿದ್ದಲ್ಲಿ ಪ್ರವಾಸದ ದಿನಾಂಕ ಬದಲಾವಣೆ ಆಗುವ ಸಾಧ್ಯತೆ ಇದೆ.

ಅಧಿಕಾರಿಗಳ ತಂಡ: ಜಿಪಂ ಅಧಿಕಾರಿ ಎ.ಬಿ.ಅಲ್ಲಾಪುರ, ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಮಂಜುನಾಥ ಗುಳೇದಗುಡ್ಡ,
ಮಾರ್ಗದರ್ಶನಕ್ಕೆ ಸರ್ಕಾರಿ ಪ್ರವಾಸಿ ಮಾರ್ಗದರ್ಶಿ ಉಮೇಶ ರಾಠೊಡ, ದೈಹಿಕ ಶಿಕ್ಷಕಿಯರು ಸೇರಿ ವಿಶೇಷ ತಂಡ ರಚಿಸಲಾಗಿದೆ.

ಜಿಲ್ಲೆಯ ಶೈಕ್ಷಣಿಕ ಮಟ್ಟದಲ್ಲಿ ಏರಿಕೆಯ ಉದ್ಧೇಶ, ಗ್ರಾಮೀಣ-ಕನ್ನಡ ಮಾಧ್ಯಮದ ಪ್ರತಿಭಾವಂತ ಮಕ್ಕಳು ಉನ್ನತ ಗುರಿ ರೂಪಿಸಿಕೊಂಡು ಸಾಧನೆಯ ಹೆಜ್ಜೆ ಇರಿಸಲು ಈ ಪ್ರಯೋಗ ಯಶಸ್ವಿ ಆಗಲಿದೆ ಎಂಬ ನಿರೀಕ್ಷೆ ಇದೆ. ಇದೀಗ 9-10ನೇ ತರಗತಿಯಲ್ಲಿರುವ ಮಕ್ಕಳಿಗೆ ಪ್ರೇರಣೆ ನೀಡುವಂತೆ ಮಾಡುವುದು ವಿಶೇಷ ಶೈಕ್ಷಣಿಕ ಪ್ರವಾಸದ ಉದ್ದೇಶ.
ರಾಹುಲ್‌ ಶಿಂಧೆ,
ಯೋಜನೆ ರೂವಾರಿ, ಸಿಇಒ-ಜಿಪಂ ವಿಜಯಪುರ

*ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್‌ಗೆ ಭೇಟಿ
*ನೆಹರು ತಾರಾಲಯ, ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ ವೀಕ್ಷಣೆ
*ಕನ್ನಡದಲ್ಲೇ ಓದಿ ಉನ್ನತ ಹುದ್ದೆಗೇರಿದ
ಗಣ್ಯರ ಮುಖಾಮುಖಿ
*ಗ್ರಾಮೀಣ ಮಕ್ಕಳಿಗೆ ಉನ್ನತ ಗುರಿಯ
ಪ್ರೇರಣೆಗೆ ವಿಶೇಷ ಪ್ರವಾಸ
*ಸಿಎಸ್‌ಆರ್‌ ನಿ ಧಿಯಲ್ಲಿ 3 ಲಕ್ಷ ರೂ.
ವೆಚ್ಚದ ಅಂದಾಜು

*ಜಿ.ಎಸ್‌.ಕಮತರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next