Advertisement
ವಿಜಯಪುರ ಜಿಲ್ಲೆಯಲ್ಲಿ ಕಳೆದ ವರ್ಷ ಆರಂಭಿಸಿರುವ 5 ಹಾಗೂ ಈ ವರ್ಷ ಆರಂಭಗೊಳ್ಳುತ್ತಿರುವ 5 ಕರ್ನಾಟಕ ಪಬ್ಲಿಕ್ ಶಾಲೆಗಳು ಸೇರಿದಂತೆ ಜಿಲ್ಲೆಯಲ್ಲಿ 36 ಶಾಲೆಗಳನ್ನು ಪ್ರಸಕ್ತ ವರ್ಷದಿಂದ ಪ್ರತ್ಯೇಕವಾಗಿ ಇಂಗ್ಲಿಷ್ ಮಾಧ್ಯಮ ಕಲಿಕೆ 1ನೇ ತರಗತಿ ಆರಂಭಗೊಳ್ಳಲಿದೆ. ಖಾಸಗಿ ಶಾಲೆಗಳು ಇಂಗ್ಲಿಷ್ ಭಾಷಾ ಮಾಧ್ಯಮ ಭೋದನೆ ನೆಪದಲ್ಲಿ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿರುವ ಕಾರಣ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಇಂಗ್ಲಿಷ್ ಕಲಿಕೆಯ ಆಸೆ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲೇ ಪ್ರತ್ಯೇಕವಾಗಿ ಇಂಗ್ಲಿಷ್ ಮಾಧ್ಯಮ ವಿಭಾಗ ತೆರೆಯಲು ಮುಂದಾಗಿದೆ.
Related Articles
Advertisement
ಇದಲ್ಲದೇ ಇಂಗ್ಲಿಷ್ ಮಾಧ್ಯಮ ವಿಭಾಗದ ಶಾಲೆಗಳ ಶಿಕ್ಷಕರು ಜನರಲ್ಲಿ ಈ ಕುರಿತು ಹೆಚ್ಚಿನ ಪ್ರಚಾರಕ್ಕಾಗಿ ಜಾಗೃತಿ ಮೂಡಿಸಲು ಬ್ಯಾನರ್‌ಗಳ ಅವಳಡಿಕೆ, ಕರಪತ್ರಗಳ ವಿತರಣೆ, ಹಳ್ಳಿಗಳಲ್ಲಿ ಡಂಗೂರ ಬಾರಿಸುವುದು, ಶಿಕ್ಷಕರೇ ಸ್ವಯಂ ತಮ್ಮ ವ್ಯಾಪ್ತಿಯ ಗಲ್ಲಿಗಳಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ನೀಡುವಂತೆ ಮೌಖೀಕ ಸೂಚನೆ ನೀಡಲಾಗಿತ್ತು. ಆದರೆ ಜಿಲ್ಲೆಯ ಕೆಲವು ಶಾಲೆಗಳ ಶಿಕ್ಷಕರು ನಾಲ್ಕು ದಿನಗಳ ಹಿಂದಷ್ಟೇ ನಮಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಹೀಗಾಗಿ ಬ್ಯಾನರ್, ಕರಪತ್ರ ಮುದ್ರಣ, ಹಂಚಿಕೆ ಇನ್ನಷ್ಟೇ ಆಗಬೇಕಿದೆ ಎಂದು ಹೇಳುತ್ತಾರೆ.
ಮತ್ತೆ ಕೆಲ ಶಿಕ್ಷಕರು ಈಗಾಗಲೇ ಇಲಾಖೆಯ ಮೇಲಧಿಕಾರಿಗಳು ಮೌಖೀಕವಾಗಿ ಸೂಕ್ತ ನಿರ್ದೇಶನ ಸಹಿತ ಮಾಹಿತಿ ನೀಡಿದ್ದಾರೆ. ಅಲ್ಲದೇ ಇಂಗ್ಲಿಷ್ ಭೋದನೆಗೆ ಆಯ್ಕೆಯಾದ ಅಯ್ದ ಶಾಲೆಗಳ ಇಂಗ್ಲಿಷ್ ಶಿಕ್ಷಕರಿಗೆ ಅಗತ್ಯ ತರಬೇತಿಯನ್ನೂ ನೀಡಿದೆ. ಇದರ ಅನ್ವಯ ನಮ್ಮ ಶಾಲೆಯ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಜನರಲ್ಲಿ ಜಾಗೃತಿಗಾಗಿ ಕರಪತ್ರ ಮುದ್ರಿಸಿ ಹಂಚಲಾಗಿದೆ. ಇದಲ್ಲದೇ ಶಾಲೆಯ ಪ್ರವೇಶ ದ್ವಾರದಲ್ಲಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಕಟ್ಟಿ ಜನರಲ್ಲಿ ಜಾಗೃತಿ ಮೂಡಿಸಿದ್ದರಿಂದ ನಿರೀಕ್ಷೆ ಮೀರಿ ಪ್ರವೇಶ ದಾಖಲೀಕರಣ ಮಾಡಿದ್ದೇವೆ.
ಮತ್ತೂಂದೆಡೆ ಶಾಲೆಯ ಶಿಕ್ಷಕರೇ ಮನೆ ಮನೆಗೆ ತೆರಳಿ ಮಕ್ಕಳ ಪಾಲಕರಿಗೆ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಉಚಿತ ಶಿಕ್ಷಣಕ್ಕೆ ಪ್ರವೇಶ ದೊರೆಯಲಿದೆ ಎಂಬ ಕುರಿತು ಮಾಹಿತಿ ನೀಡಿದ್ದೇವೆ. ಇದರಿಂದ ನಮ್ಮ ಶಾಲೆಯ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರವೇಶ ದಾಖಲೆಗೆ ನೋಂದಣಿ ಆರಂಭಿಸಿದ್ದಾರೆ ಎಂದು ವಿವರಿಸುತ್ತಾರೆ.
ಇತ್ತ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಪ್ರತ್ಯೇಕವಾಗಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುವ ಯೋಜನೆಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಖಾಸಗಿ ಇಂಗ್ಲಿಷ್ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಶಿಕ್ಷಣ ಮಾಧ್ಯಮ ಆರಂಭಿಸಿರುವುದು ಉತ್ತಮ ಬೆಳವಣಿಗೆ. ಬಡ ಹಾಗೂ ಮಧ್ಯಮ ವರ್ಗಗಳ ಕುಟುಂಬಗಳ ಮಕ್ಕಳು ಶಿಕ್ಷಣ ಕಲಿಕೆ ಕುರಿತು ಇರುವ ಹಿಂಜರಿಕೆ ಹೋಗಲಾಡಿಸಲು ನೆರವಾಗುತ್ತದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸುವವರೂ ಇದ್ದಾರೆ.
ಇದೆಲ್ಲದ ಪರ-ವಿರೋಧದ ಮಧ್ಯೆ ಜಿಲ್ಲೆಯಲ್ಲಿ ಇಂಗ್ಲಿಷ್ ಮಾಧ್ಯಮ ವಿಭಾಗ ಆರಂಭಕ್ಕೆ ಸಕಲ ಸಿದ್ದತೆ ನಡೆಸಿದೆ. ಶಿಕ್ಷಣ ಇಲಾಖೆ ವಿಶೇಷ ಆಸಕ್ತಿಯಿಂದ ಚುರುಕಿನ ಕೆಲಸ ಮಾಡುವುದಕ್ಕೆ ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಜಿಲ್ಲೆಯಲ್ಲಿ ವಿರೋಧದ ಮಧ್ಯೆಯೂ ಸೂಕ್ತ ಸ್ಪಂದನೆ ವ್ಯಕ್ತವಾಗುತ್ತಿದೆ.