Advertisement

ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

01:04 PM Feb 27, 2020 | Naveen |

ವಿಜಯಪುರ: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ಮುನ್ನೆಚ್ಚರಿಕೆಯಾಗಿ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿಸುವ ಜೊತೆಗೆ ನಿರಂತರ ನೀರಿನ ನಿರ್ವಹಣೆ ಮಾಡುವಂತೆ ಜಿಲ್ಲಾ ಧಿಕಾರಿ ವೈ.ಎಸ್‌. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಜೂನ್‌ ಅಂತ್ಯದವರೆಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಜಿಲ್ಲೆಯ ಕೆರೆಗಳಲ್ಲಿ ನೀರಿನ ಲಭ್ಯತೆ ಹಾಗೂ ಕಾಲುವೆ ನೀರು ಸಮರ್ಪಕ ನಿರ್ವಹಣೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬೇಸಿಗೆಯಲ್ಲಿ ಶಾಶ್ವತ ಕುಡಿಯುವ ನೀರಿನ ಕ್ರಮಕ್ಕೆ ಪ್ರಥಮ ಆದ್ಯತೆ ನೀಡಬೇಕು. ನೈಸರ್ಗಿಕ ನೀರು, ಸರ್ಕಾರಿ ಕೊಳವೆ ಬಾವಿಗಳ ಲಭ್ಯತೆಯೊಂದಿಗೆ ಖಾಸಗಿ ಬೊರ್‌ವೆಲ್‌ಗ‌ಳ ನೀರು ಲಭ್ಯತೆ ಆಧಾರದ ಮೇಲೆ ಅವಶ್ಯಕತೆ ಇರುವ ಕಡೆ ಖಾಸಗಿ ಕೊಳವೆಬಾವಿ ಮಾಲೀಕರೊಂದಿಗೆ ಒಪ್ಪಂದ, ತೀರಾ ಅಗತ್ಯ ಇರುವೆಡೆ ಪರ್ಯಾಯ ನೀರಿನ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿ, ಅನುಮೋದನೆ ಪಡೆದುಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಫೆ. 29ರವರೆಗ ಕಾಲಾವಕಾಶ ನೀಡುವುದಾಗಿ ಸೂಚಿಸಿದರು.

ಬರುವ ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮೇಲೆ ಅವಲಂಬನೆಯಾಗದೇ ನೈಸರ್ಗಿಕ ಜಲ ಸಂಪನ್ಮೂಲಗಳ ಬಳಕೆಗೆ ವಿಶೇಷ ಒತ್ತು ನೀಡಬೇಕು. ಜಿಲ್ಲೆಯಲ್ಲಿ ವಿವಿಧ ಕೆರೆಗಳಲ್ಲಿ ನೀರಿನ ಪ್ರಮಾಣದ ಬಗ್ಗೆ ಖಾತ್ರಿ ಪಡಿಸಿಕೊಂಡು ಜೂನ್‌ ಅಂತ್ಯದವರೆಗೆ ಸಾಕಾಗುವಷ್ಟು ನೀರು ನಿರ್ವಹಣೆ ಮಾಡಬೇಕು. ಸಮಸ್ಯೆ ಹೆಚ್ಚಿರುವ ಕಡೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಸಣ್ಣ ನೀರಾವರಿ ಇಲಾಖೆಯ ಸಂಗೋಗಿ ಕೆರೆಯಿಂದ 81 ಗ್ರಾಮಗಳಿಗೆ ನೀರು ಲಭ್ಯವಾಗಲಿವೆ. ಹೀಗಾಗಿ ಕೆರೆಗೆ ನೀರು ತುಂಬಿಸುವ ಹಾಗೂ ನೀರಿನ ನಿರ್ವಹಣೆಗೆ ಗಮನ ನೀಡಬೇಕು. ತಡವಲಗಾ ಕೆರೆ ಭರ್ತಿಗೆ ಸಂಬಂಧಪಟ್ಟಂತೆ ಅವಶ್ಯಕ ಕ್ರಮಗಳ ಬಗ್ಗೆ ಚಿಂತನೆ ನಡೆಸಬೇಕು. ಹೊರ್ತಿ ಕೆರೆಯಿಂದ 32 ಗ್ರಾಮಗಳಿಗೆ ನೀರು ಲಭ್ಯವಾಗುವ ಹಿನ್ನೆಲೆಯಲ್ಲಿ ಇರುವ ಜಲ ಸಂಪನ್ಮೂಲ ಸದ್ಭಳಕೆ ಮಾಡಬೇಕು ಎಂದು ತಿಳಿಸಿದರು.

ಪೀರಾಪುರ, ಅರ್ಜನಾಳ, ಲೋಣಿ ಕೆರೆ, ಬಸವನಬಾಗೇವಾಡಿ ಅರೆಶಂಕರ ಕೆರೆ ನೀರು ನಿರ್ವಹಣೆ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಯಾ ತಹಶೀಲ್ದಾರ್‌ ರು, ತಾಪಂ ಇಒಗಳು, ಜಿಪಂ ಅಭಿಯಂತರರು ಜೂನ್‌ ಅಂತ್ಯದವರೆಗೆ ನೀರು ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ವರದಿಯಂತೆ ಸಕಾಲಕ್ಕೆ ಪ್ರಸ್ತಾವನೆಗೆ ಅನುಮೋದನೆ ಪಡೆಯಬೇಕು. ಇದಲ್ಲದೇ ಹೆಸ್ಕಾಂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ವಿದ್ಯುತ್‌ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಇಂಡಿ ತಾಲೂಕಿನ ಚಡಚಣ, ನಿವರಗಿ ಮತ್ತು ದಸೂರ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ನೀರಿನ ಸಮಸ್ಯೆಯಾಗದಂತೆ ಭೀಮಾ ನದಿ ನೀರು ಸದ್ಭಳಕೆಗೆ ಮಾಡಿಕೊಳ್ಳಬೇಕು. ಸಿಂದಗಿ ತಾಲೂಕಿನ ಬಳಗಾನೂರ, ಯಂಕಂಚಿ ಕೆರೆಗಳು ಪೂರ್ಣ ತುಂಬಿರುವ ಕುರಿತು ಹಾಗೂ ಕನ್ನೊಳ್ಳಿ ಕೆರೆಯ ವಿದ್ಯುತ್‌ ಸ್ಟಾರ್ಟರ್‌ ಸಮಸ್ಯೆ ಪರಿಹಾರಕ್ಕೆ ಸಿಂದಗಿ ತಹಶೀಲ್ದಾರ್‌ರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು. ಜೂನ ಅಂತ್ಯದವರೆಗೆ ಸಿಂದಗಿ ಪಟ್ಟಣಕ್ಕೆ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಅಭಾವ ಆಗದಂತೆ ನೋಡಿಕೊಳ್ಳಲು ಎಸ್‌ಎಫ್‌ಸಿ ವಿಶೇಷ ಅನುದಾನ ನೀಡುವುಗಾಗಿ ಭರವಸೆ ನೀಡಿದರು.

Advertisement

ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ಸಮರ್ಪಕ ನಿರ್ವಹಿಸಬೇಕು. ಮಮದಾಪುರ ಕೆರೆ ಹೆಚ್ಚುವರಿ ಭರ್ತಿಯಿಂದ ಕೆಲವು ರೈತರ ಜಮೀನುಗಳಿಗೆ ನೀರು ನುಗ್ಗುವುದರಿಂದ ಆಗುತ್ತಿರುವ ಸಮಸ್ಯೆ ತಡೆಯಲು ಹೆಚ್ಚುವರಿ ನೀರು ಭರ್ತಿ ತಡೆಯಬೇಕು. ಯಾವುದೇ ಪರಿಸ್ಥಿತಿಯಲ್ಲಿ ರೈತರ ಜಮೀನುಗಳಿಗೆ ಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಜಿಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, ಮುದ್ದೇಬಿಹಾಳ, ಇಂಡಿ, ಚಡಚಣ, ದೇವರಹಿಪ್ಪರಗಿ ತಾಲೂಕುಗಳಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಆಗದಂತೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಕೆರೆಗಳಿಗೆ ನೀರು ತುಂಬಿಸುವ, ನೀರಿನ ನಿರ್ವಹಣೆಗೆ ವಿಶೇಷ ಗಮನ ನೀಡಬೇಕು. ತಾಂತ್ರಿಕ ಸಮಸ್ಯೆ ಪರಿಹರಿಸಿಕೊಂಡು, ಅವಶ್ಯಕತೆ ಇರುವೆಡೆ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ಪಡೆದುಕೊಳ್ಳುವಂತೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ, ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ್‌ರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಕೃಷ್ಣಾ ಭಾಗ್ಯ ಜಲ ನಿಗಮ, ನಗರ ನೀರು ಸರಬರಾಜು ಇಲಾಖಾ ಅಧಿಕಾರಿಗಳು, ಸಹಾಯಕ ಅಭಿಯಂತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next