Advertisement

ಮಳೆಗಾಲದ ಅಪಾಯ ಎದುರಿಸಲು ಸನ್ನದ್ಧರಾಗಿ

01:35 PM May 27, 2020 | Naveen |

ವಿಜಯಪುರ: ಕಳೆದ ವರ್ಷ ಅಗಸ್ಟ್‌ನಲ್ಲಿ ಜಿಲ್ಲೆಯನ್ನು ಬಾಧಿಸಿದ್ದ ಪ್ರವಾಹದ ಅನುಭವದ ಹಿನ್ನೆಲೆಯಲ್ಲಿ ಪ್ರಸಕ್ತ ಮಳೆಗಾಲದಲ್ಲಿ ಸಂಭವನೀಯ ಪ್ರವಾಹ ಎದುರಿಸಲು ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಂಗಾರು ಪ್ರವಾಹ ಮುನ್ನೆಚ್ಚರಿಕೆ ಪೂರ್ವಭಾವಿ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಹವಾಮಾನ ಇಲಾಖೆ ಪ್ರಕಾರ ಈ ಬಾರಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಸಂಭವನೀಯ ಮುಳುಗಡೆ ಪ್ರದೇಶಗಳನ್ನು ಗುರುತಿಸಬೇಕು. ಅಲ್ಲದೇ ನದಿ ಪಾತ್ರದ ಜನರನ್ನು ಪ್ರವಾಹ ಪೂರ್ವದಲ್ಲೇ ತೆರವುಗೊಳಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಪ್ರವಾಹ ಪರಿಸ್ಥಿತಿ ಸಂಭವಿಸಿದಲ್ಲಿ ಜಿಲ್ಲೆಯ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಅಗತ್ಯ ಸಿಬ್ಬಂದಿ-ಸೌಲಭ್ಯ ಸಹಿತ ಕಂಟ್ರೋಲ್‌ ರೂಂ ತೆರೆದು 24×7 ಗಂಟೆ ಸಹಾಯವಾಣಿ ಆರಂಭಿಸಬೇಕು. ಪ್ರತಿದಿನದ ಜಿಲ್ಲಾ ಕಂಟ್ರೋಲ್‌ ರೂಂ ಟೋಲ್‌ಫ್ರೀ ಸಂಖ್ಯೆ 1077 ಹಾಗೂ 08352-221261 ಗೆ ಮಳೆ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯಿಂದ ಪ್ರವಾಹ ಮುನ್ನೆಚ್ಚರಿಕೆಗಾಗಿ ಪ್ರತಿ ತಾಲೂಕಾವಾರು ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದು, ಕೃಷಿ-ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗೆ ಆಯಾ ದಿನದ ಮಳೆಯ ವರದಿ, ಪ್ರಕೃತಿ ವಿಕೋಪದಿಂದ ಉಂಟಾಗುವ ಮಾನವ ಹಾಗೂ ಜಾನುವಾರು, ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾಗೂ ಮನೆ ಹಾನಿ ವರದಿ ಸಲ್ಲಿಸಬೇಕು. ಗ್ರಾಮಲೆಕ್ಕಾಧಿಕಾರಿ, ಪಿಡಿಒ, ಕಾರ್ಯದರ್ಶಿಗಳು ಕೇಂದ್ರ ಸ್ಥಾನದಲ್ಲೇ ಇದ್ದು ಅತೀವೃಷ್ಟಿ ಅಪಾಯಗಳ ಕುರಿತು ಜನರಿಗೆ ಎಚ್ಚರಿಕೆ ಸಂದೇಶ ನೀಡಬೇಕು ಎಂದರು.

ಹೋಬಳಿ, ಗ್ರಾಪಂ, ತಾಲೂಕು, ಮತ್ತು ಜಿಲ್ಲಾ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಬೇಕು. ತಾಲೂಕು ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆ ತಯಾರಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆಗಳಿಂದ ಸಂಭವಿಸುವ ಹಾಗೂ ಸಂಭವನೀಯ ಸಮಸ್ಯೆ ಎದುರಿಸಲು ಪುನರ್ವಸತಿಗೆ ಎತ್ತರ ಪ್ರದೇಶದ ಸರ್ಕಾರಿ ಕಟ್ಟಡಗಳನ್ನು ಗುರುತಿಸಿ, ಬಿಸಿಯೂಟದ ಸಿಬ್ಬಂದಿಯನ್ನು ಸಿದ್ಧತೆಯಲ್ಲಿ ಇರಿಸಿಕೊಳ್ಳಬೇಕು. ಚರಂಡಿಗಳ ಸ್ವಚ್ಛತೆ ಕಾಯ್ದುಕೊಳ್ಳುವ ಕೆಲಸವನ್ನೂ ಮಾಡಬೇಕು ಎಂದು ಸೂಚಿಸಿದರು.

ಕೆಬಿಜೆಎನ್‌ಎಲ್‌ ಅ ಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಹಾಗೂ ಮಹಾರಾಷ್ಟ್ರದ ಜಲಾಶಯಗಳಲ್ಲಿ ನೀರಿನ ಪ್ರಮಾಣ, ಶೇಖರಣೆ, ಒಳ-ಹೊರ ಹರಿವಿನ ಮೇಲೆ ನಿಗಾ ಇಡಲಾಗಿದೆ. ಮುನ್ಸೂಚನೆ ಇಲ್ಲದೇ ಏಕಾಏಕಿ ಜಲಾಶಯಗಳಿಂದ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸದಂತೆ ಕ್ರಮ ಕೈಗೊಳ್ಳಲು ಕರ್ನಾಟಕ ನೀರಾವರಿ ನಿಗಮಕ್ಕೆ ಮನವಿ ಮಾಡಿಕೊಳ್ಳುವುದಾಗಿ ವಿವರಿಸಿದರು.

Advertisement

ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ 3 ಟಿಎಂಸಿ ಅಡಿ, ಆಲಮಟ್ಟಿ ಲಾಲ ಬಹದ್ದೂದ್‌ ದೂರ ಶಾಸ್ತ್ರಿ ಜಲಾಶಯದಲ್ಲಿ 7 ಟಿಎಂಸಿ ಅಡಿ ನೀರು ಸಂಗ್ರಹಿಸಿಕೊಳ್ಳಲಾಗಿದೆ. ಪ್ರವಾಹದ ಹರಿವು ಜಲಾಶಯಗಳ ಹಿನ್ನೀರಿನಿಂದ ಮುಳುಗಡೆ ಸಂಭವನೀಯ ಪ್ರದೇಶಗಳನ್ನು ಗುರುತಿಸಿಕೊಂಡು, ಅಂಥ ಪ್ರದೇಶದ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಿ ತೆರವುಗೊಳಿಸಲು ಸೂಚಿಸಲು ವ್ಯವಸ್ಥೆ ಮಾಡಿಕೊಂಡಿದ್ದಾಗಿ ಸಭೆಗೆ ಮಾಹಿತಿ ನೀಡಿದರು. ಜಿಪಂ ಸಿಇಒ ಗೋವಿಂದರೆಡ್ಡಿ, ಎಡಿಸಿ ಡಾ| ಔದ್ರಾಮ್‌, ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ಇಂಡಿ ಉಪವಿಭಾಗಾ ಧಿಕಾರಿ ಸ್ನೇಹಲ್‌ ಲೋಖಂಡೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ತಹಶೀಲ್ದಾರರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next