Advertisement

ಪ್ಲಾಸ್ಟಿಕ್‌ ಮಾರಿದರೆ ಅಂಗಡಿಗಳ ಲೈಸೆನ್ಸ್‌ ರದ್ದು ಮಾಡಿ: ಡಿಸಿ

11:03 AM Jul 03, 2019 | Naveen |

ವಿಜಯಪುರ: ಜಿಲ್ಲೆಯಾದ್ಯಂತ ನಿಷೇಧಿತ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದರ ಹೊರತಾಗಿಯೂ ಪ್ಲಾಸ್ಟಿಕ್‌ ಸಂಗ್ರಹಣೆ ಮಾಡಿಕೊಂಡಿರುವ ಮಾಲೀಕರು ಕೂಡಲೇ ಸ್ಥಳೀಯ ಸಂಸ್ಥೆಗಳಿಗೆ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ಅಂಗಡಿ ಲೈಸೆನ್ಸ್‌ ರದ್ದು ಪಡಿಸಿ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಕಟ್ಟೆಚ್ಚರ ನೀಡಿದ್ದಾರೆ.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ವ್ಯಾಪ್ತಿಯ ಘನತ್ಯಾಜ್ಯ ನಿಯಂತ್ರಣ ನಿಯಮಗಳು-2016ರ ಅನುಷ್ಠಾನ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶದ ಪಾಲನೆ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ರಚಿಸಿದ ವಿಶೇಷ ಕಾರ್ಯಪಡೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಪೀಠದ ಆದೇಶದನ್ವಯ ಪ್ಲಾಸ್ಟಿಕ್‌ ಬಳಕೆ ಹಾಗೂ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಹೀಗಾಗಿ ಪ್ಲಾಸ್ಟಿಕ್‌ ಸಂಗ್ರಹಿಸಿ ಇರಿಸಿರುವ ಅಂಗಡಿ ಮಾಲೀಕರು ಕೂಡಲೇ ಪ್ಲಾಸ್ಟಿಕ್‌ ಸಂಗ್ರಹವನ್ನು ಸ್ಥಳೀಯ ಸಂಸ್ಥೆಗಳಿಗೆ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಅನಿವಾರ್ಯ ಎಂದರು.

ಎಲ್ಲ ಅಂಗಡಿ ಮಾಲೀಕರು ಕೂಡ ನಿಷೇಧಿತ ಪ್ಲಾಸ್ಟಿಕ್‌ ಬ್ಯಾಗ್‌ಗಳ ಕುರಿತು ಗ್ರಾಹಕರಲ್ಲಿ ತಿಳಿವಳಿಕೆ ಮೂಡಿಸಬೇಕು. ಜಿಲ್ಲೆಯಾದ್ಯಂತ ಎಲ್ಲ ಅಂಗಡಿ ಮಾಲೀಕರು ಪ್ಲಾಸ್ಟಿಕ್‌ ಬ್ಯಾಗ್‌ಗಳಿಗೆ ಪರ್ಯಾಯವಾಗಿ ಬಟ್ಟೆ ಕೈ ಚೀಲಗಳನ್ನು ಬಳಸಬೇಕು. ಸಾಧ್ಯವಿರುವೆಡೆ ಗ್ರಾಹಕರೇ ತಮ್ಮ ಮನೆಯಿಂದ ಬಟ್ಟೆಯ ಕೈ ಚೀಲಗಳನ್ನು ತರುವಂತೆ ತಿಳಿವಳಿಕೆ ನೀಡಬೇಕು. ಇದನ್ನು ಮೀರಿ ಪ್ಲಾಸ್ಟಿಕ್‌ ಬಳಕೆ ಕಂಡು ಬಂದಲ್ಲಿ ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ ಜಪ್ತಿ ಮಾಡಬೇಕು. ಪ್ಲಾಸ್ಟಿಕ್‌ ಬಳಕೆ ಮುಂದುವರಿದರೆ ಅಂಗಡಿ ಲೈಸನ್ಸ್‌ ರದ್ದುಪಡಿಸಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ನಾಶದ ಜೊತೆಗೆ ನಗರ-ಗ್ರಾಮಗಳ ಸೌಂದರ್ಯ ಹಾಳಾಗುತ್ತದೆ. ಚರಂಡಿಗಳಲ್ಲಿ ಸಂಗ್ರಹವಾಗಿ ಚರಂಡಿ ನೀರು ರಸ್ತೆಗೆ ಹರಿಯಲು ಕಾರಣವಾಗುತ್ತದೆ. ಜಾನುವಾರುಗಳು ಆಹಾರಕ್ಕಾಗಿ ಪ್ಲಾಸ್ಟಿಕ್‌ ಸೇವಿಸಿ ಸಾವನ್ನಪ್ಪ್ಪುತ್ತಿವೆ. ಆದ್ದರಿಂದ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿ ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

Advertisement

ಸ್ಥಳೀಯ ಸಂಸ್ಥೆಗಳು ಪ್ಲಾಸ್ಟಿಕ್‌ ನಾಶಕ್ಕೆ ಹತ್ತಿರದ ಸಿಮೆಂಟ್ ಕಾರ್ಖಾನೆಗಳ ಸಹಾಯ ಪಡೆದು ಕೋ-ಪ್ರೊಸೆಸಿಂಗ್‌ಗೆ ಒಳಪಡಿಸಬೇಕು. ಜಿಲ್ಲೆಯ ನಗರಸಭೆ, ಪಪಂ, ತಾಪಂ, ಪುರಸಭೆ ವ್ಯಾಪ್ತಿಯಲ್ಲಿ ಮನೆ-ಮನೆಗೆ ಹೋಗಿ ಘನತ್ಯಾಜ್ಯ ಸಂಗ್ರಹಿಸಿ, ನಿಯಮಾನುಸಾರ ವಿಂಗಡಣೆ ಮಾಡಿ ಎರೆ ಹುಳು ಗೊಬ್ಬರ ತಯಾರಿಸಲು ಎಲ್ಲ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದರು.

ಎರೆಹುಳು ಗೊಬ್ಬರ ತಯಾರಿಕಾ ಪ್ರಕ್ರಿಯೆಗೆ ಸಂಬಂಧಿಸಿದ ಆರೋಗ್ಯ ನಿರೀಕ್ಷಕರಿಗೆ ಸೂಕ್ತ ನಿರ್ದೇಶನ ನೀಡಿ, ಆರೋಗ್ಯ ನಿರೀಕ್ಷಕರಿಲ್ಲದ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ನೆಪ ಹೇಳದೆ ಲಭ್ಯವಿರುವ ಪೌರ ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡಿ ಎರೆಹುಳು ಗೊಬ್ಬರ ತಯಾರಿಕೆಗೆ ಕ್ರಮ ಲೈಗೊಳ್ಳುವಂತೆ ಸಲಹೆ ನೀಡಿದರು.

ಸ್ಥಳೀಯ ಸಂಸ್ಥೆಗಳೂ ತಮ್ಮ ವ್ಯಾಪ್ತಿಯಲ್ಲಿ ಬರುವ ಉದ್ಯಾನ ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಘನತ್ಯಾಜ್ಯ ವಿಂಗಡಣೆ ಮಾಡಿ, ಎರೆಹುಳು ಗೊಬ್ಬರ ತಯಾರಿಕಾ ಪ್ರಕ್ರಿಯೆ ನಡೆಸಬಹುದು. ಈ ಕುರಿತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಾದ್ಯಂತ ಕಸ ಸುಡುವುದನ್ನು ಸಂಪೂರ್ಣ ನಿಷೇಸಲಾಗಿದ್ದು, ನಾಗರಿಕರು ಸಹಕರಿಸಬೇಕು. ನಿಯಮದ ವಿರುದ್ಧ ನಡೆದುಕೊಂಡಲ್ಲಿ ಸೂಕ್ತ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.

ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಶ್ರಮ ವಹಿಸಬೇಕು. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಸ್ಥಳೀಯ ಸಂಸ್ಥೆಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ, ಅನುದಾನದ ಸೂಕ್ತ ಬಳಕೆ ಮಾಡಬೇಕು. ಗೊಂದಲವಿರುವೆಡೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವೀಂದ್ರ ಕಾರಭಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಪ್ರದೀಪ ಮಮದಾಪುರ, ಮಹಾನಗರ ಪಾಲಿಕೆ ಆಯುಕ್ತ ಡಾ| ಔದ್ರಾಮ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೀರೇಶಕುಮಾರ, ಪಾಲಿಕೆ ಪರಿಸರ ಅಭಿಯಂತರ ಜಗದೀಶ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next