Advertisement

ನಿರ್ಗತಿಕ ಮಕ್ಕಳಿಗೆ ನೆರವು ನೀಡಿ

03:46 PM Jul 27, 2019 | Naveen |

ವಿಜಯಪುರ: ನಿರ್ಗತಿಕ ಮಕ್ಕಳಿಗಾಗಿ ನಗರದಲ್ಲಿರುವ ಸರ್ಕಾರಿ ಬಾಲಮಂದಿರ ಮಕ್ಕಳಿಗೆ ಸರ್ಕಾರದ ವಿವಿಧ ಯೋಜನೆಗಳಿಂದ ಕನಿಷ್ಠ ಮೂಲ-ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ನಿರ್ಗತಿಕ ಮಕ್ಕಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲು ಉದ್ಯಮಿಗಳು ಉದಾರ ದೇಣಿಗೆ ನೀಡಲು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಮನವಿ ಮಾಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಮಕ್ಕಳ ಯೋಜನೆ ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ನಗರದ ವಿವಿಧ ಭಾಗಗಳಲ್ಲಿ ಬಾಲಕರು-ಬಾಲಕಿಯರಿಗೆ ನಡೆಸಲಾಗುತ್ತಿರುವ ಬಾಲ ಮಂದಿರಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತು ಜರುಗಿದ ಉದ್ಯಮಿಗಳ ಸಭೆಯಲ್ಲಿ ಅವರು ಈ ಮನವಿ ಮಾಡಿದರು.

ವಿವಿಧ ಕಾರಣಗಳಿಂದ ನಿರ್ಗತಿಕರಾಗಿ, ಅನಾಥರಾಗಿರುವ ಮಕ್ಕಳಿಗೆ ರಕ್ಷಣೆ ಮತ್ತು ಪೋಷಣೆ ಮಾಡುವ ಉದ್ದೇಶದಿಂದ ಬಾಲ ಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಬಾಲಮಂದಿರಗಳಿಗೆ ಸರ್ಕಾರ ಹಲವು ಸೌಲಭ್ಯ ಕಲ್ಪಿಸಿದ್ದರೂ ಹೆಚ್ಚುವರಿ ಮೂಲಸೌಕರ್ಯ ಅವಶ್ಯಕತೆ ಇದೆ. ಹೀಗಾಗಿ ಹೆಚ್ಚಿನ ಮೂಲಸೌಕರ್ಯ ಕಲ್ಪಿಸುವ ಕುರಿತಂತೆ ಸ್ವಯಂ ಪ್ರೇರಣೆಯೊಂದಿಗೆ ಉದ್ದಿಮೆದಾರರು, ದಾನಿಗಳು ವಿವಿಧ ಪರಿಕರಗಳ ಮೂಲಕ ದೇಣಿಗೆ ನೀಡಲು ಮುಂದೆ ಬರಬೇಕು ಎಂದು ಕೋರಿದರು.

ಬಾಲಮಂದಿರದಲ್ಲಿ ವಿಜಯಪುರ ಹಾಗೂ ವಿವಿಧ ಭಾಗದ ಮಕ್ಕಳಿದ್ದು, ಅವರಿಗೆ ಸಾಮಾನ್ಯ ಮಕ್ಕಳು ಬದುಕುವ ಮಾದರಿಯಲ್ಲೇ ಮೂಲಭೂತ ಸೌಲಭ್ಯ ಕಲ್ಪಿಸಬೇಕಿರುವುದು ಸಮಾಜದಲ್ಲಿರುವ ನಮ್ಮೆಲ್ಲರ ಕರ್ತವ್ಯ. ವಿವಿಧ ಕಾರಣಗಳಿಗೆ ಹೆತ್ತವರನ್ನು ಕಳೆದುಕೊಂಡು ಸಮಾಜದಲ್ಲಿ ಅನಾಗರಿಕ ರೀತಿಯಲ್ಲಿ ಬೆಳೆಯದಂತೆ ಮುನ್ನೆಚ್ಚರಿಕೆ ವಹಿಸುವುದು ನಮ್ಮೆಲ್ಲರ ಹೊಣೆ. ಇದಕ್ಕಾಗಿ ಇಂಥ ಮಕ್ಕಳನ್ನು ಸಮಾಜದಲ್ಲಿ ಮಾದರಿ ನಾಗರಿಕರಾಗಿ ಬಾಳಲು ಅವಕಾಶ ಕಲ್ಪಿಸುವ ಅಗತ್ಯವಿದೆ. ಇದಕ್ಕಾಗಿ ಸಹೃದಯಿ ಉದ್ಯಮಿಗಳು ಸೇರಿದಂತೆ ಉದಾರ ದಾನಿಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ನಗರದ ಜಿಪಂ ಇರುವ ಬಾಲಕ-ಬಾಲಕಿಯರ ಬಾಲಮಂದಿಗಳು, ಟಕ್ಕೆಯಲ್ಲಿರುವ ಬಾಲಕರ ಬಾಲಮಂದಿರ, ಸರ್ಕಾರಿ ವೀಕ್ಷಣಾಲಯಗಳಿಗೆ ಉದ್ದಿಮೆದಾರರು ಖುದ್ದಾಗಿ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆ, ಅವಶ್ಯಕತೆಗಳ ಕುರಿತು ಮಾಹಿತಿ ಪಡೆಯಲು ಮುಂದಾಗಿ. ಸದರಿ ಬಾಲ ಮಂದಿರಗಳಲ್ಲಿ 6-18 ವರ್ಷದೊಳಗಿನ ಮಕ್ಕಳಿದ್ದು, ಸ್ವಯಂ ಪ್ರೇರಣೆಯಿಂದ ನೀವೇ ಅವರಿಗೆ ಸೌಲಭ್ಯ ಕಲ್ಪಿಸಲು ಮುಂದೆ ಬರಬೇಕಿದೆ. ನಿರ್ಗತಿಕ ಈ ಮಕ್ಕಳಿಗೆ ಸರ್ಕಾರ ಪ್ರಾಥಮಿಕ ಅವಶ್ಯಕತೆ ಪೂರೈಸಲಾಗುತ್ತಿದೆ. ಆದರೆ ಹೆಚ್ಚುವರಿ ಸೌಕರ್ಯ ಕಲ್ಪಿಸುವ ಬಗ್ಗೆ ಸ್ವಯಂ ಪ್ರೇರಣೆಯಿಂದ, ಮಾನವೀಯತೆ ದೃಷ್ಟಿಯಿಂದ ಸೌಕರ್ಯ ಕಲ್ಪಿಸಲು ಸಾರ್ವಜನಿಕರ ಸಹಕಾರದ ಅಗತ್ಯವಿದೆ. ದಾನಿಗಳು ನೀಡುವ ಎಲ್ಲ ದಾನಗಳ ಕುರಿತು ಅಗತ್ಯ ದಾಖಲೆಗಳನ್ನು ನಿರ್ವಹಿಸಲಾಗುತ್ತದೆ, ನೀವು ನೀಡುವ ದೇಣಿಗೆಯಲ್ಲಿ ಲೋಪ ಕಂಡು ಬಂದಲ್ಲಿ ಮೇಲಧಿಕಾರಿಗಳನ್ನು ಸಂಪರ್ಕಿಸಿ ಎಂದು ಹೇಳಿದರು.

Advertisement

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ ಮಾತನಾಡಿ, ನಿರ್ಗತಿಕ ಮಕ್ಕಳ ರಕ್ಷಣೆ ಹಾಗೂ ಪೋಷಣೆ, ಮಾಡುವ ಉದ್ದೇಶದೊಂದಿಗೆ 2012ರಲ್ಲಿ ವಿಜಯಪುರ ನಗರದಲ್ಲಿ ಮಕ್ಕಳ ರಕ್ಷಣಾ ಘಟಕ ಆರಂಭಗೊಂಡಿದೆ. ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಬಾಲ ನ್ಯಾಯ ಕಾಯ್ದೆ (ಮಕ್ಕಳ ಪಾಲನೆ ಮತ್ತು ರಕ್ಷಣೆ) 2015ರನ್ವಯ ಈ ಮಕ್ಕಳಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲ ನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ವಿಶೇಷ ಪೊಲೀಸ್‌ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಮಕ್ಕಳ ಸಂಕಷ್ಟದ ಪರಿಹಾರಕ್ಕೆ 1098 ಮಕ್ಕಳ ಸಹಾಯವಾಣಿ ಸೌಲಭ್ಯವಿದೆ. ನಗರದ 4 ಬಾಲಮಂದಿರಗಳಲ್ಲಿ 6-18 ವಯೋಮಾನದ ನಿರ್ಗತಿಕ ಬಾಲಕ-ಬಾಲಕಿಯರಿದ್ದು, ಮನೆ ಬಳಕೆ ಸೌಕರ್ಯಗಳ ಪೂರೈಕೆ ಬಗ್ಗೆ ಅವಶ್ಯಕ ಮಾಹಿತಿ ನೀಡಿದರು.

ಇ-ಲರ್ನಿಂಗ್‌, ಲ್ಯಾಬೋರೇಟರಿ, ಲೈಬ್ರರಿ, ವಿವಿಧ ಬಾಲಮಂದಿರಗಳಿಗೆ ನೂತನ ಕಟ್ಟಡಗಳ ಅವಶ್ಯಕತೆ, ಮಕ್ಕಳಿಗೆ ವಿವಿಧ ಪ್ರತಿಷ್ಠಿತ ಇಂಗ್ಲಿಷ್‌ ಶಾಲೆಗಳಲ್ಲಿ ಪ್ರವೇಶಾವಕಾಶ, ಕೋಚಿಂಗ್‌ ವ್ಯವಸ್ಥೆ, ನವೋದಯ, ಸೈನಿಕ ಶಾಲೆಗಳ ತರಬೇತಿಗೊಳಿಸುವ ವ್ಯವಸ್ಥೆ, ಮಕ್ಕಳನ್ನು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಅವಶ್ಯಕ ಲಘು ವಾಹನದ ವ್ಯವಸ್ಥೆ ಸೇರಿದಂತೆ ಇನ್ನಿತರ ಅವಶ್ಯಕತೆ ಇದೆ ಎಂದು ವಿವರಿಸಿದರು.

ಸಭೆಯಲ್ಲಿ ಹಾಜರಿದ್ದ ಉದ್ದಿಮೆದಾರರು ಮೂಲ ಸೌಕರ್ಯ ಕಲ್ಪಿಸುವ ಕುರಿತು ಉದ್ಯಮಿಗಳು ಸಮಿತಿ ರಚಿಸಿಕೊಂಡು, ಆಯಾ ಬಾಲಮಂದಿರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ಬಳಿಕ ಆಯಾ ಬಾಲ ಮಂದಿರಗಳಿಗೆ ಅಗತ್ಯ ಇರುವ ಸಾಮಗ್ರಿಗಳ ಪೂರೈಕೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಸೇರಿದಂತೆ ಜಿಲ್ಲೆಯ ಉದ್ದಿಮೆದಾರರು, ಸರ್ಕಾರೇತೆರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next