Advertisement

ಬೋಟಿಂಗ್‌ಗೆ ಜಿಲ್ಲಾಡಳಿತ ಸಿದ್ಧತೆ

11:56 AM Sep 15, 2019 | Naveen |

ಜಿ.ಎಸ್‌. ಕಮತರ
ವಿಜಯಪುರ:
ತ್ಯಾಜ್ಯಗಳಿಂದಾಗಿ ಕೊಳಕು ನಾರುತ್ತಿರುವ ನಗರದ ಅರೆಕಿಲ್ಲಾ ಪ್ರದೇಶದಲ್ಲಿರುವ ಐತಿಹಾಸಿಕ ಗಗನ ಮಹಲ್ ಕಂದಕದಲ್ಲಿ ಬೋಟಿಂಗ್‌ ಆರಂಭಿಸಿ ಮಾಲಿನ್ಯದ ದುಸ್ಥಿತಿಗೆ ಮುಕ್ತಿ ನೀಡಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಿದ್ಧತೆ ನಡೆಸಿದೆ. ಇತ್ತ ನಗರದ ಅಭಿವೃದ್ಧಿಗೆ ತಕರಾರು ಮಾಡುತ್ತಲೇ ಇರುವ ಭಾರತೀಯ ಪುರಾತತ್ವ ಇಲಾಖೆ ಬೋಟಿಂಗ್‌ ಆರಂಭಕ್ಕೂ ಕ್ಯಾತೆ ತೆಗೆದು ಅಡ್ಡಗಾಲು ಹಾಕಿದೆ.

Advertisement

ವಿಜಯಪುರ ಜಿಲ್ಲೆ ಪ್ರವಾಸೋದ್ಯಮ ದುಸ್ಥಿತಿ ಕುರಿತು ಉದಯವಾಣಿ ಪತ್ರಿಕೆ ಆರಂಭಿಸಿರುವ ಸರಣಿ ವರದಿಗಳ ಪ್ರವಾಸೋದ್ಯಮ ಕಥೆ-ವ್ಯಥೆ ಅಭಿಯಾನಕ್ಕೆ ಸ್ಪಂದನೆ ವ್ಯಕ್ತವಾಗಿದೆ. ಸೆ. 2ರಂದು ಪತ್ರಿಕೆಯಲ್ಲಿ ‘ಸ್ಮಾರಕಗಳ ಮೌಲ್ಯ ಕಳೆಯುತ್ತಿರುವ ಕೊಳಕು’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಕಂದಕದ ದುಸ್ಥಿತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಬೋಟಿಂಗ್‌ ಆರಂಭದ ಅವಕಾಶಗಳ ಕುರಿತು ವರದಿ ಪ್ರಕಟವಾಗಿತ್ತು. ಜಿಲ್ಲಾಡಳಿತ ಕಂದಕದಲ್ಲಿ ಬೋಟಿಂಗ್‌ ಆರಂಭಿಸುವ ಮೂಲಕ ಸ್ಪಂದಿಸಿ ಪತ್ರಿಕೆ ವರದಿಗೆ ಫ‌ಲಶೃತಿ ನೀಡಿದೆ.

ಈ ವರದಿ ಪ್ರಕಟವಾಗುವ ಹಂತದಲ್ಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅರೆಕಿಲ್ಲಾದ ಗಗನಮಹಲ್ ಕಂದಕದಲ್ಲಿನ ಮಲೀನ ವ್ಯವಸ್ಥೆಗೆ ಮುಕ್ತಿ ಹಾಡಿ, ಬೋಟಿಂಗ್‌ ಆರಂಭಿಸಲು 3 ವರ್ಷಗಳ ಅವಧಿ ಟೆಂಡರ್‌ ಕರೆದಿದೆ. ಶುಲ್ಕ ರಹಿತವಾಗಿದ್ದ ಟೆಂಡರ್‌ ಅರ್ಜಿ ಪಡೆದಿದ್ದ 10 ಸಂಸ್ಥೆಗಳಲ್ಲಿ ಟೆಂಡರ್‌ನಲ್ಲಿ ಎರಡು ಸಂಸ್ಥೆಗಳು ಮಾತ್ರ ಪಾಲ್ಗೊಂಡಿವೆ.

ಕಾರವಾರ ಜಿಲ್ಲೆಯ ಜೋಯಿಡಾ ತಾಲೂಕಿನ ಇಳವಾ-ಗಣೇಶಗುಡಿಯ ಫ್ಲ್ಯೆಕ್ಯಾಚರ್‌ ಅಡ್ವೆಂಚರ್‌ ಸಂಸ್ಥೆ ವಾರ್ಷಿಕ 3 ಲಕ್ಷ ರೂ. ಬಿಡ್‌ ನಮೂದಿಸಿದ್ದು, ಬೋಟಿಂಗ್‌ಗೆ ಬೇಕಾದ 3 ರ್ಯಾಫ್ಟಿಂಗ್‌ ಬೋಟ್, 2 ಪೆಡಲ್ ಬೋಟ್ ಹಾ‌ಗೂ 4 ಕಯಾಕ್‌ ಬೋಟ್‌ಗಳನ್ನು ಹೊಂದಿದೆ. ಇದಲ್ಲದೇ ಜಲದುರಂತ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವ ಹಾಗೂ ಜಲ ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡಿರುವ ಅನುಭವ ಇರುವ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಹೊಂದಿದ ನಿಪುಣರನ್ನು ಹೊಂದಿದ್ದಾಗಿ ಟೆಂಡರ್‌ನಲ್ಲಿ ನಮೂದಿಸಿದೆ.

ಇದಲ್ಲದೇ ಸಂಸ್ಥೆ ಮುಖ್ಯಸ್ಥ ಅಬ್ದುಲ್ ಕುಟ್ಟಿ ಸೇರಿದಂತೆ ಚಾಂದಮೌಲಾನಾ ಬಸೀರ್‌ ಕುಟ್ಟಿ ಆವರಂಥ ನುರಿತ ಜಲಸಾಹಸಿಗರ ತಂಡವನ್ನು ಹೊಂದಿದೆ. ಸಮುದ್ರ-ನದಿಗಳಲ್ಲಿ ಪ್ರವಾಸಿ ಜಲಸಾಹಸ ಕ್ರೀಡೆ ಆರೋಜಿಸಿದ ಹಾಗೂ ಜಂಗಲ್ ಲಾಡ್ಜ್-ರೆಸ್ಟೋರೆಂಟ್ ರ್ಯಾಪ್ಟಿಂಗ್‌ ಕ್ರೀಡೆಗೆ ಸಲಕರಣೆ ಸಹಿತ ಮಾನವ ಸಂಪನ್ಮೂಲ ಒದಗಿಸಿರುವ ಅನುಭವ ಹಾಗೂ ಜವಾಹರ ಇನ್ಸ್‌ಟಿಟ್ಯೂಟ್ ಮೌಂಟೇನರಿ ವಿಂಟರ್‌ ನ್ಪೋರ್ಟ್ಸ್ ಹಾಗೂ ಜನರಲ್ ತಿಮ್ಮಯ್ಯ ನ್ಯಾಷನಲ್ ಅಕಾಡೆಮಿ ಆಫ್ ಆಡ್ವೆಂಚರ್‌ನಲ್ಲಿ ತರಬೇತಿ ಪಡೆದ ಅನುಭವಿಗಳನ್ನು ಹೊಂದಿದ್ದಾಗಿ ಹೇಳಿಕೊಂಡಿದೆ.

Advertisement

ಇನ್ನು ವಾರ್ಷಿಕ 45 ಸಾವಿರ ರೂ. ಬಿಡ್‌ ನಮೂದು ಮಾಡಿರುವ ಹಾಗೂ ಇಗ್ನೋ ಮೂಲಕ ದುರಂತ ನಿರ್ವಹಣೆಯಲ್ಲಿ ಶಿಕ್ಷಣ ಪಡೆದಿರುವ ಬಳ್ಳಾರಿ ಮೂಲದ ಎಂ.ಎ. ಶಕೀಬ್‌ ಒಡೆತನದ ಮೇ ನೋಪಾಸನಾ ಸಂಸ್ಥೆ ಟೆಂಡರ್‌ನಲ್ಲಿ ಪಾಲ್ಗೊಂಡಿದೆ. ಈಗಾಗಲೇ ಕಲಬುರಗಿಯ ಶರಣಬಸಪ್ಪ ಅಪ್ಪ ಕೆರೆ, ರಾಯಚೂರಿನ ಮಾವಿನಕೆರೆ ಹಾಗೂ ಬಳ್ಳಾರಿ ಡಾ| ರಾಜಕುಮಾರ ಉದ್ಯಾನದಲ್ಲಿ ದೋಣಿ ವಿಹಾರ ನಡೆಸಿರುವ ಅನುಭವ ಹೊಂದಿದೆ. ಇದಲ್ಲದೇ ಅಪಾಯಕಾರಿ ಪರಿಸ್ಥಿತಿ ನಿಭಾಯಿಸುವ ವಿಶೇಷ ತರಬೇತಿ ಪಡೆದಿರುವ ಚಂದ್ರಕಾಂತ ಹಾಗೂ ಪರಮೇಶಿ ಎಂಬ ನುರಿತ ಸಿಬ್ಬಂದಿಯನ್ನೂ ಹೊಂದಿದೆ.

ಈ ಎರಡೂ ಸಂಸ್ಥೆಗಳು ಜಲಕ್ರೀಡೆ ಹಾಗೂ ದೋಣಿ ವಿಹಾರ ನಡೆಸುವಲ್ಲಿ ತಮ್ಮದೇ ಆದ ವಿಶೇಷ ಅನುಭವ ಹೊಂದಿದ್ದು, ಹೆಚ್ಚಿನ ಬಿಡ್‌ ಹಾಕಿರುವ ಗಣೇಶಗುಡಿಯ ಫ್ಲ್ಯೆಕ್ಯಾಚರ್‌ ಅಡ್ವೆಂಚರ್‌ ಸಂಸ್ಥೆಗೆ ಟೆಂಡರ್‌ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೆ. 23ರಂದು ನಡೆಯುವ ಸಾಧ್ಯತೆ ಇರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಮಾಡುವ ಸಾಧ್ಯತೆ ಇದೆ.

ಟೆಂಡರ್‌ ಕರೆಯುವ ಸಂದರ್ಭದಲ್ಲಿ ಟೆಂಡರ್‌ ಪಡೆಯುವ ಸಂಸ್ಥೆಗೆ 27 ನಿಬಂಧನೆ ರೂಪದ ಷರತ್ತು ವಿಧಿಸಲಾಗಿದೆ. ಐತಿಹಾಸಿಕ ಗಗನಮಹಲ್ ಹಾಗೂ ಕಂದಕ ಪರಿಸರಕ್ಕೆ ಹಾನಿ ಮಾಡುವಂತಿಲ್ಲ. ಸ್ವಚ್ಛತೆ ಹಾಗೂ ಶಾಂತಿ ಭಂಗಕ್ಕೆ ಅವಕಾಶ ನೀಡುವಂತಿಲ್ಲ. ಯಾವುದೇ ರೀತಿಯ ನಿರ್ಮಾಣಗಳನ್ನು ಮಾಡುವಂತಿಲ್ಲ. ದೋಣಿ ವಿಹಾರಿಗಳಿಗೆ ಜೀವರಕ್ಷಕ ಕವಚಗಳು, ವಿಮೆ ಮಾಡಿಸುವುದು, ಸ್ವಚ್ಛತೆ ಹಾಗೂ ರಕ್ಷಣೆಗೆ ಸಿಬ್ಬಂದಿಯನ್ನು ನೇಮಿಸಿ, ಗುರುತು ಪತ್ರ ಹಾಗೂ ಸಮವಸ್ತ್ರ ಸಹಿತವಾಗಿ ಕೆಲಸ ಮಾಡಬೇಕು. ಕಂದಕದ ನೀರಿನ ಶುದ್ಧತೆ ಕಾಯ್ದುಕೊಳ್ಳಬೇಕು ಎಂದೆಲ್ಲ ಷರತ್ತು ಹಾಕಿದೆ.

ಇದಲ್ಲದೇ ಬೋಟಿಂಗ್‌ ಸಂದರ್ಭದಲ್ಲಿ ಜಲದುರಂತ ಸಂಭವಿಸಿದರೆ ರಕ್ಷಣಾ ಕಾರ್ಯಕ್ಕೆ ಮಾತ್ರ ಬಳಸಲು ಹಾಗೂ ಪ್ರವಾಹ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆಗೆ ಮುಂದಾಗಬೇಕೆಂಬ ಷರತ್ತಿನೊಂದಿಗೆ ಜಿಲ್ಲಾಡಳಿತ 2 ಮೋಟಾರು ಬೋಟ್‌ಗಳನ್ನು ನೀಡಲಿದೆ. ಟೆಂಡರ್‌ ಅವಧಿ ಮುಗಿದ ನಂತರ ಬೋಟ್‌ಗಳಿಗೆ ಭೌತಿಕ ಹಾನಿಯಾಗಿದ್ದರೆ ಮುಂಗಡ ಹಾಗೂ ಠೇವಣಿ ಹಣದಲ್ಲಿ ಕಡಿತ ಮಾಡುವ ಎಚ್ಚರಿಕೆಯನ್ನೂ ನೀಡಿದೆ.

ಕಂದಕದಲ್ಲಿ ಜಲ ವಿಹಾರ ಆರಂಭಿಸುವ ಟೆಂಡರ್‌ದಾರರಿಗೆ ಜಿಲ್ಲಾಡಳಿತದಿಂದ ಡಬಲ್ ಸೀಟರ್‌ನ 10 ಕಯಾಕಿಂಗ್‌ ಬೋಟ್‌ಗಳನ್ನು ನೀಡಲಿದ್ದು, ಟೆಂಡರ್‌ ಅವಧಿ ಮುಗಿದ ನಂತರ ಬಳಸಿದ ಬೋಟ್‌ಗಳನ್ನು ಸಂಸ್ಥೆ ತಾನೇ ಇರಿಸಿಕೊಂಡು ಹೊಸ ಬೋಟ್‌ಗಳನ್ನು ನೀಡಬೇಕು. ಪ್ರತಿ ತಿಂಗಳು 5ರೊಳಗೆ ಮಾಸಿಕ ಬಾಡಿಗೆ ಪಾವತಿಸಬೇಕು. ಸತತ ಮೂರು ತಿಂಗಳು ಬಾಡಿಗೆ ಪಾವತಿಸದಿದ್ದಲ್ಲಿ ಟೆಂಡರ್‌ ಕರಾರು ತನ್ನಿಂದ ತಾನೇ ರದ್ದಾಗುತ್ತದೆ. ಕಂದಕ ಪ್ರದೇಶದಲ್ಲಿ ದೋಣಿ ವಿಹಾರದ ಹೊರತಾಗಿ ಜಲಸಾಹಸದ ಕ್ರೀಡೆಗಳನ್ನು ಆಯೋಜಿಸುವಂತಿಲ್ಲ ಹಾಗೂ ಯುವಜನಸೇವಾ ಹಾಗೂ ಸಾಹಸ ಕ್ರೀಡಾ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಷರತ್ತು ವಿಧಿಸಲಾಗಿದೆ.

ಹೀಗೆ ಹಲವು ಕಟ್ಟುನಿಟ್ಟಿನ ಕ್ರಮಗಳ ಷರತ್ತುಗಳೊಂದಿಗೆ ಅರೆಕಿಲ್ಲಾದ ಗಗನಮಹಲ್ನ ಕಂದಕದಲ್ಲಿ ದೋಣಿ ವಿಹಾರಕ್ಕೆ ಸಿದ್ಧತೆ ಮಾಡಿಕೊಂಡಿರುವ ಹಂತದಲ್ಲೇ ಭಾರತೀಯ ಪುರಾತತ್ವ ಇಲಾಖೆ ಕ್ಯಾತೆ ತೆಗೆದಿದೆ. ತನ್ನ ಒಡೆತನದ ಐತಿಹಾಸಿಕ ಸ್ಮಾರಕಗಳಿರುವ ಕಂದಕ ಪ್ರದೇಶದಲ್ಲಿ ಬೋಟಿಂಗ್‌ ಆರಂಭಕ್ಕೆ ದೆಹಲಿಯಲ್ಲಿರುವ ಕೇಂದ್ರ ಕಚೇರಿಯಿಂದ ಪರವಾನಿಗೆ ಪಡೆಯುವಂತೆ ಧಾರವಾಡದ ಪುರಾತತ್ವ ಇಲಾಖೆ ಅಧಿಕಾರಿಗಳು ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆದಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲಿ ಅನಗತ್ಯವಾಗಿ ಅಡ್ಡಗಾಲು ಹಾಕುತ್ತಿರುವ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ತಕ್ಕ ಉತ್ತರ ನೀಡಲು ಜಿಲ್ಲಾಡಳಿತವೂ ಸಿದ್ಧತೆ ನಡೆಸಿದೆ. ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ನಗರದ ಅಭಿವೃದ್ಧಿ ವಿಷಯದಲ್ಲಿ ಭಾರತೀಯ ಪುರಾತತ್ವ ಇಲಾಖೆ ಜಿಲ್ಲಾಡಳಿತದ ಪ್ರತಿ ನಡೆಯಲ್ಲೂ ತಕರಾರು ಮಾಡುತ್ತದೆ. ಆದರೆ ಐತಿಹಾಸಿಕ ಕೋಟೆಗಳ ಒತ್ತುವರಿ, ಸ್ಮಾರಕಗಳ ವಿರೂಪ ಹಾಗೂ ನಾಶ ಮಾಡುವ ಹಾಗೂ ಸ್ಮಾರಕ ಪ್ರದೇಶದಲ್ಲಿ ಅನೈತಿಕ ಚಟುವಟಿಕೆ ನಡೆಯುವುದನ್ನು ತಡೆಯುವಲ್ಲಿ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಜಿಲ್ಲಾಡಳಿತ ಆಕ್ರೋಶ ಹೊರ ಹಾಕಿದೆ.ಗಗನಮಹಲ್ ಕಂದಕದಲ್ಲಿ ಬೋಟಿಂಗ್‌ ಆರಂಭಕ್ಕೆ 2015 ಫೆಬ್ರವರಿ ತಿಂಗಳಲ್ಲಿ ನಡೆದ ನವರಸಪುರ ಉತ್ಸವದ ಸಂದರ್ಭದಲ್ಲೇ ಪರವಾನಿಗೆ ಪಡೆಯಲಾಗಿದೆ. ಪದೇ ಪದೇ ಪರವಾನಿಗೆ ಪಡೆಯುವ ಅಗತ್ಯವೂ ಇಲ್ಲ. ಎಎಸ್‌ಐ ಕೇಂದ್ರ ಕಚೇರಿಗೆ ಪತ್ರ ಬರೆಯಲು ಮುಂದಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆಗಳ ಅಧಿಕಾರಿಗಳು ಪ್ರತಿಷ್ಠೆಗೆ ಬೀಳದೇ ಪರಸ್ಪರರು ಅಭಿವೃದ್ಧಿಗೆ ಪೂರಕವಾಗಿ ಸಮನ್ವಯದಿಂದ ಹೆಜ್ಜೆ ಹಾಕುವುದು ಅಗತ್ಯವಿದೆ. ಸಾರ್ವಜನಿಕರ ವಲಯದಿಂದ ಕೇಳಿ ಬರುತ್ತಿರುವ ಇಂಥ ಆಶಯ ಈಡೇರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next