Advertisement

ಕಾಲಚಕ್ರ ಉರುಳುವುದು ಪ್ರಕೃತಿ ನಿಯಮ: ಸವದಿ

02:57 PM Aug 31, 2019 | Naveen |

ವಿಜಯಪುರ: ಕಾಲಚಕ್ರ ಉರುಳುತ್ತಲೇ ಇರುತ್ತದೆ, ಹೀಗಾಗಿ ಯಾರು ಯಾರಿಗೆ ಕೌದಿ ಹಾಕ್ತಾರೆ ಎಂದು ನಾನು ಹೇಳಲಾಗದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಜಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

Advertisement

ಶುಕ್ರವಾರ ಉಪಮುಖ್ಯಮಂತ್ರಿ ಅಧಿಕಾರ ಸ್ವೀಕಾರದ ಬಳಿಕ ವಿಜಯಪುರಕ್ಕೆ ಮೊದಲ ಭೇಟಿ ಸಂಧರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸೃಷ್ಟಿ ನಿಯಮದಂತೆ ಕಾಲಚಕ್ರ ಸದಾ ಉರುಳುತ್ತಿರುತ್ತದೆ‌. ಮೇಲಿದ್ದ ಕೆಳಗೆ ಬರಲೇಬೇಕು, ಕೆಳಗಿದ್ದವ ಮೇಲೆ ಹೋಗಲೇ ಬೇಕು. ಎಲ್ಲವನ್ನೂ ಭಗವಂತ ನಿಯಂತ್ರಿಸುವ ಶಕ್ತಿ ಹೊಂದಿದ್ದಾನೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ವಿಪಕ್ಷದಲ್ಲಿ ಕುಳಿತಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇರುವುದೇ ಬಿಜೆಪಿ ಸರ್ಕಾರ ತೆಗಳುವುದಕ್ಕಾಗಿ. ಆಡಳಿತ ಪಕ್ಷದ ನಾವು ಉತ್ತಮ ಕೆಲಸ ಮಾಡಿದರೂ ನಮ್ಮನ್ನು ಎಂದಿಗೂ ಅವರು ಹೊಗಳಲು ಸಾಧ್ಯವಿಲ್ಲ. ಹೀಗಾಗಿ ಅವರು ಟೀಕಿಸುತ್ತಲೇ ಇರಲಿ ಎಂದು ಕುಟುಕಿದರು.

ಉಪ ಮುಖ್ಯಮಂತ್ರಿ ಹುದ್ದೆ ನನಗೆ ಬಯಸದೇ ಬಂದಿರುವ ಭಾಗ್ಯ. ಅಲ್ಲದೇ ಸಾರಿಗೆ ಇಲಾಖೆಯಂಥ ಮಹತ್ವದ ಸಚಿವ ಖಾತೆ ನೀಡಿದ್ದು, ನಾನು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸ ಇರಿಸಿಯೇ ಹೈಕಮಾಂಡ್‌ ನನಗೆ ಈ ಸ್ಥಾನ ನೀಡಿದೆ ಎಂದರು.

ರಾಜ್ಯದಲ್ಲಿ ಭವಿಷ್ಯದಲ್ಲಿ ನಡೆಯುವ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಜೊತೆಗೆ ಸರ್ಕಾರ ಉತ್ತಮ ಆಡಳಿತ ನೀಡಿ ಭವಿಷ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುಬೇಕಿದೆ. ಕರ್ನಾಟಕ ಕಲ್ಯಾಣ ರಾಜ್ಯವಾಗಬೇಕು ಎಂಬ ಅಶಯದಿಂದ ಪಕ್ಷದ ಹೈಕಮಾಂಡ್‌ ಉತ್ತರ ಕರ್ನಾಟಕಕ್ಕೆ ಎರಡು ಉಪ ಮುಖ್ಯಮಂತ್ರಿ ಸ್ಥಾನ ನೀಡಿದೆ.

Advertisement

ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ ಬಿಜೆಪಿ ಸರ್ಕಾರಕ್ಕೆ ಒಳ್ಳೆ ಹೆಸರು ತರುವ ಹಾಗೂ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ತರುವ ಉದ್ದೇಶದಿಂದ ಪಕ್ಷದ ವರಿಷ್ಠರು ನನಗೆ ಮಹತ್ವದ ಹೊಣೆ ನೀಡಿದ್ದಾರೆ. ರಾಜ್ಯದ ಹಾಲಿ ಸರ್ಕಾರ ಸುಭದ್ರವಾಗಿರಬೇಕು ಎಂಬ ಸದುದ್ದೇಶದಿಂದ ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕಿದೆ. ಜೊತೆಗೆ ರಾಜ್ಯದಲ್ಲಿ ಕನಿಷ್ಠ 20 ವರ್ಷ ಬಿಜೆಪಿ ಸರ್ಕಾರ ಸುಭದ್ರ ಆಡಳಿತ ನೀಡಬೇಕಿದೆ. ಇದಕ್ಕಾಗಿ ಪಕ್ಷದ ವರಿಷ್ಠರು ನಮ್ಮ ಭಾಗಕ್ಕೆ ಹೆಚ್ಚಿನ ಅಧಿಕಾರದ ಅವಕಾಶ ನೀಡಿದ್ದಾರೆ ಎಂದು ವಿವರಿಸಿದರು.

ರಾಜ್ಯದಲ್ಲಿ ಸುಮಾರು 22 ಜಿಲ್ಲೆಗಳಲ್ಲಿ ಪ್ರವಾಹ ಹಾಗೂ ಅತಿವೃಷ್ಠಿಯಿಂದಾಗಿ ಜನರು ಅಪಾರ ಆಸ್ತಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಸಂತ್ರಸ್ತರಿಗೆ ಪರಿಹಾರ ನೀಡಿ ಆತ್ಮಸ್ಥೈರ್ಯ ತುಂಬುವ ಕೆಲಸ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ. ಪ್ರವಾಹದ ಸಂತ್ರಸ್ತರಿಗೆ ಆಸರೆಯಾಗಲು ಕೇಂದ್ರದ ತಂಡ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೇಂದ್ರಕ್ಕೆ ವರದಿ ನೀಡಿವೆ. ಪ್ರಾಥಮಿಕ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 30 ಸಾವಿರ ಕೋಟಿ ರೂ. ಪ್ರವಾಹದಿಂದಾಗಿ ಹಾನಿಯಾಗಿದೆ ಎಂದು ಅಂದಾಜಿಸಿದೆ. ಈಗಾಗಲೇ ರಾಜ್ಯ ಸರ್ಕಾರ ನಿರಾಶ್ರಿತರಿಗೆ ಶೇ. 90 ತಾತ್ಕಾಲಿಕ ಪರಿಹಾರ ನೀಡಿದೆ ಎಂದರು.

ಸಂಪೂರ್ಣ ಮನೆ ಕಳೆದುಕೊಂಡ ಸಂತ್ರಸ್ತಗರಿಗೆ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ., ಬಾಡಿಗೆ ಮನೆಯಲ್ಲಿದ್ದವರಿಗೆ 10 ತಿಂಗಳ ಕಾಲ 5 ಸಾವಿರ ರೂ. ಹಣ ನೀಡಲಾಗುತ್ತಿದೆ. ಇದಲ್ಲದೇ ಶೀಘ್ರವೇ ರಾಜ್ಯದಿಂದ ಕೇಂದ್ರಕ್ಕೆ ಎರಡನೇ ವರದಿ ಸಲ್ಲಿಸಲಾಗುತ್ತದೆ. ರಾಜ್ಯದ ನೆರೆ ಪರಿಹಾರಕ್ಕಾಗಿ ಸರ್ವ ಪಕ್ಷಗಳ ನಿಯೋಗ ಹೋಗುವ ಅಗತ್ಯವಿಲ್ಲ. ಬದಲಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರು ಮಾತ್ರ ದೆಹಲಿಗೆ ನಿಯೋಗದಲ್ಲಿ ತೆರಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಲಿದೆ ಎಂದು ವಿವರಿಸಿದರು.

ನಗರದಲ್ಲಿರುವ ಷಣ್ಮುಖಾರೂಢ ಮಠಕ್ಕೆ ಭೇಟಿ ನೀಡಿ ಶ್ರೀಮಠದ ಪೀಠಾಧಿಪತಿ ಅಭಿನವ ಶಿವಪುತ್ರ ಶ್ರೀಗಳ ಅಶೀರ್ವಾದ ಪಡೆದರು. ನಂತರ ಸುಮಾರು ಆರ್ಧ ಗಂಟೆ ಕಾಲ ಶ್ರೀಗಳೊಂದಿಗೆ ಗುಪ್ತ ಸಮಾಲೋಚನೆ ನಡೆಸಿದರು. ಮಾಜಿ ಅಪ್ಪು ಪಟ್ಟಣಶೆಟ್ಟಿ, ಕುಡಚಿ ಶಾಸಕ ಪಿ.ರಾಜೀವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next