ವಿಜಯಪುರ: ತ್ಯಾಜ್ಯಗಳಿಂದಾಗಿ ಕೊಳಕು ನೀರಿನಿಂದ ದುರ್ವಾಸನೆ ಹರಡಿಕೊಂಡಿರುವ ನಗರದ ಅರೆಕಿಲ್ಲಾ ಪ್ರದೇಶದಲ್ಲಿರುವ ಐತಿಹಾಸಿಕ ಗಗನಮಹಲ್ ಕಂದಕದ ಕಡೆಗೆ ಕೊನೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಣ್ತೆರೆದಿದೆ. ತ್ಯಾಜ್ಯಗಳಿಂದಾಗಿ ಮಾಲಿನ್ಯ ಸೃಷ್ಟಿಸಿ ಐತಿಹಾಸಿಕ ಗಗನಮಹಲ್ ಕಂದಕದ ಕಸ ತೆಗೆಯವುದಕ್ಕಾಗಿ ಸ್ವಚ್ಛತೆಗೆ ಕೈ ಹಾಕಿದೆ.
Advertisement
ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ದುಸ್ಥಿತಿ ಕುರಿತು ಉದಯವಾಣಿ ಪತ್ರಿಕೆ ಆರಂಭಿಸಿರುವ ಸರಣಿ ವರದಿಗಳ ಪ್ರವಾಸೋದ್ಯಮ ಕಥೆ-ವ್ಯಥೆ ಅಭಿಯಾನಕ್ಕೆ ಸ್ಪಂದನೆ ವ್ಯಕ್ತವಾಗಿದೆ. ಸೆ. 2ರಂದು ಪತ್ರಿಕೆಯಲ್ಲಿ ‘ಸ್ಮಾರಕಗಳ ಮೌಲ್ಯ ಕಳೆಯುತ್ತಿರುವ ಕೊಳಕು’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
Related Articles
Advertisement
ಇಲಾಖೆ 15 ಸಿಬ್ಬಂದಿ ಅಲ್ಲದೇ ದಿನಗೂಲಿಯ 25 ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆಗೆ ಇಳಿದಿದೆ. ಅರೆಕಿಲ್ಲಾ ಕಂದಕ ಮಾತ್ರವಲ್ಲ ಗೋಲಗುಂಬಜ್ ಪ್ರದೇಶದಲ್ಲೂ ಬರುವ 15 ದಿನಗಳ ಕಾಲ ನಿರಂತರ ಸ್ವಚ್ಛತೆ ಅಭಿಯಾನ ಹಮ್ಮಿಕೊಂಡಿದ್ದೇವೆ. ಸ್ಮಾರಕಗಳ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಪುರಾತತ್ವ ಇಲಾಖೆ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.
ಈ ಮಧ್ಯೆ ಉದಯವಾಣಿ ಪತ್ರಿಕೆ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಐತಿಹಾಸಿಕ ಸ್ಮಾರಕಗಳ ದುಸ್ಥಿತಿ ಕುರಿತು ವಿಶೇಷ ಸರಣಿ ವರದಿಗಳ ಮೂಲಕ ಬೆಳಕು ಚೆಲ್ಲುತ್ತಲೇ ಪುರಾತತ್ವ ಇಲಾಖೆ ಮೇಲಧಿಕಾರಿಗಳ ಕಣ್ಣು ಕೆಂಪಾಗಿವೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ಭಾರತೀಯ ಪುರಾತತರ್ವ ಇಲಾಖೆಯ ಧಾರವಾಡ ವಲಯದ ಅಧೀಕ್ಷಕರು, ಇಲಾಖೆಯ ಯಾವುದೇ ಅಧಿಕಾರಿ, ಸಿಬ್ಬಂದಿ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕಟ್ಟುನಿಟ್ಟಾಗಿ ತಾಕೀತು ಮಾಡಿ ಬಾಯಿ ಮುಚ್ಚಿಸಿದೆ.
ಧಾರವಾಡ ವಲಯದ ಅಧಿಕಾರಿಗಳು ಸುತ್ತೋಲೆ ಮೂಲಕ ತನ್ನ ಕೆಳ ಹಂತದ ಅಧಿಕಾರಿ-ಸಿಬ್ಬಂದಿಗಳ ಬಾಯಿಗೆ ಬೀಗ ಹಾಕುವುದಕ್ಕೆ ತೋರಿದ ಆಸಕ್ತಿ ಹಾಗೂ ಕಾಳಜಿಯನ್ನು ಸ್ಥಳೀಯವಾಗಿ ಇರುವ ಸಮಸ್ಯೆಗಳ ಪರಿಹಾರಕ್ಕೆ ತೋರಬೇಕು. ಸ್ಮಾರಕಗಳನ್ನು ದುಸ್ಥಿತಿಯಿಂದ ಕಾಪಾಡಲು ಸ್ಥಳೀಯರ ಸಹಕಾರದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರಿಂದ ಆಗ್ರಹಗಳು ಕೇಳಿ ಬರತೊಡಗಿದೆ.