Advertisement

ಹಸಿ-ಒಣ ಬರ ಸಂಕಷ್ಟದಲ್ಲಿ ಬೆಳಕಿನ ಹಬ್ಬಕ್ಕೆ  ಭರದ ಸಿದ್ಧತೆ

12:15 PM Oct 27, 2019 | |

ವಿಜಯಪುರ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಒಂದೆಡೆ ಮುಂಗಾರು ಹಂತದಲ್ಲಿ ಮಳೆ ಇಲ್ಲದೇ ಭೀಕರ ಆವರಿಸಿದ್ದರೆ, ಮತ್ತೂಂದೆಡೆ ಏಲ್ಲೋ ಸುರಿದ ಮಳೆಗೆ ಬರದಲ್ಲಿ ಜಿಲ್ಲೆ ನದಿಗಳು ಪ್ರವಾಹ ಸೃಷ್ಟಿಸಿ ಅನ್ನದಾತನನ್ನು ಹೈರಾಣು ಮಾಡಿತ್ತು. ಇದೀಗ ನಿರಂತರ ಮಳೆ ಸುರಿಯುವ ಮೂಲಕ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಗೂ ಅವಕಾಶ ನೀಡದಂತೆ ಮಾಡಿದ್ದು, ಹಸಿ ಬರವನ್ನು ಆಹ್ವಾನಿಸಿದೆ. ಇದರ ಬೆನ್ನಲ್ಲೇ ಏನೆಲ್ಲ ಸಂಕಷ್ಟಗಳನ್ನು ನುಂಗಿಕೊಂಡು ಜಿಲ್ಲೆಯ ಜನರು ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement

ನೆರೆಯ ಜಿಲ್ಲೆಯ ನದಿ ಪಾತ್ರದ ಜನರು ಸಂಕಷ್ಟದಲ್ಲಿರುವ ಕಾರಣ ಜಿಲ್ಲೆಯಲ್ಲಿ ಹಬ್ಬದ ಅಬ್ಬರ ಕಂಡು ಬರದಿದ್ದರೂ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ದೊಡ್ಡ ಹಬ್ಬ ಎನಿಸಿರುವ ದೀಪಾವಳಿ ಆಚರಣೆಗೆ ಮುಂದಾಗಿದ್ದಾರೆ.

ನಗರದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಮಾರುಕಟ್ಟೆ ಗ್ರಾಹಕರಿಂದ ಭರ್ತಿಯಾಗಿದೆ. ಕಿತ್ತೂರು ಚನ್ನಮ್ಮ ಮಾರುಕಟ್ಟೆ ಪ್ರದೇಶ, ಸಿದ್ದೇಶ್ವರ ರಸ್ತೆ ಮಾರ್ಗದ ಮಾರುಕಟ್ಟೆಗಳು ಗ್ರಾಹಕರಿಂದ ತುಂಬಿಕೊಂಡಿವೆ. ಕುಟುಂಬಗಳಲ್ಲಿ ಹಿರಿಯರು ಹಳೆ ಬಟ್ಟೆಗಳನ್ನು ತೊಟ್ಟರೂ ಮಕ್ಕಳಿಗೆ ಹಬ್ಬದ ಸಂಭ್ರಮದ ಕೊರತೆ ಆಗದಿರಲೆಂದು ಹೊಸಬಟ್ಟೆ ಖರೀದಿಸುವ ಹಾಗೂ ಲಕ್ಷ್ಮೀಪೂಜೆಗೆ ಸೀರೆ ಕೊಳ್ಳುತ್ತಿದ್ದಾರೆ. ದೀಪಗಳ ಹಬ್ಬಕ್ಕಾಗಿ ಹಣತೆಗಳನ್ನು ಹಚ್ಚಲು ಮಣ್ಣಿನ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ವರ್ಣರಂಜಿತ ಆಕಾಶಬುಟ್ಟಿಗಳೂ ಗ್ರಾಹಕರನ್ನು ಆಕರ್ಷಿಸುತ್ತಿವೆ. ದೀಪಾವಳಿ ಹಬ್ಬದಲ್ಲಿ ಐಶ್ವರ್ಯ ಲಕ್ಷ್ಮಿಯ ಪೂಜೆ ಹಾಗೂ ಅಲಂಕಾರಕ್ಕೆ ಬಳಸುವ ವಿವಿಧ ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಇದರ ಮಧ್ಯೆಯೂ ನಗರ ಸೇರಿದಂತೆ ಗ್ರಾಮ, ಗ್ರಾಮಗಳಲ್ಲೂ ಅಂಗಡಿ-ಮುಂಗಟ್ಟು, ಹೋಟೆಲ್‌, ಸರಕಾರಿ ಕಚೇರಿಗಳು, ಬ್ಯಾಂಕ್‌ ಸೇರಿದಂತೆ ಎಲ್ಲೆಲ್ಲೂ ದೀಪಾಲಂಕಾರ ಕಂಡು ಬರುತ್ತಿದೆ. ಪ್ರಸ್ತುತ ಹಬ್ಬದಲ್ಲಿ ಹಿಂದಿನ ದೀಪಾವಳಿಗಳಲ್ಲಿ ಕಂಡು ಬರುತ್ತಿದ್ದ ಆಕಾಶ ಬುಟ್ಟಿಯ ಬದಲಿಗೆ ಈಗ ಆಕರ್ಷಕವಾಗಿ ಮನೆ ಬೆಳಗುವ ಬಣ್ಣ-ಬಣ್ಣದ ಆಕಾಶ ಬುಟ್ಟಿಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟಿವೆ. ಹೀಗಾಗಿ ಗ್ರಾಹಕರು ತಮ್ಮ ಮನಸ್ಸಿಗೆ ಆನಂದ ನೀಡುವ ಆಕರ್ಷಕ ಆಕಾಶ ಬುಟ್ಟಿಗಳನ್ನು ಖರೀದಿಸುತ್ತಿದ್ದಾರೆ. ಇನ್ನು ಕೆಲವರು ಚೀನಾ ಶೈಲಿಯ ಆಕಾಶ ಬುಟ್ಟಿಗೆ ಭಾರಿ ಬೇಡಿಕೆ ಬಂದಿದ್ದು ವಿಶೇಷ.

ಗ್ರಾಹಕರನ್ನು ಆಕರ್ಷಿಸಲು ತರಹೇವಾರಿ ಹಣತೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ವರ್ಷದಿಂದ ವರ್ಷಕ್ಕೆ ಹಣತೆಗಳು ಬೇರೆ ಬೇರೆ ಶೈಲಿಯಲ್ಲಿ ಬರುತ್ತಿರುವುದರಿಂದ ಮಹಿಳೆಯರು ಹೊಸ ಶೈಲಿಯ ಬೆಳ್ಳಿ ಹಾಗೂ ಮಣ್ಣಿನ ಹಣತೆಗಳ ಖರೀದಿಗೆ ಮೊರೆ ಹೋಗಿದ್ದಾರೆ. ಜೊತೆಗೆ ಹಬ್ಬದ ಪೂಜೆಗೆ ಅಗತ್ಯವಾದ ಪೂಜಾ ಸಾಮಗ್ರಿಗಳು ಅಲ್ಲಲ್ಲಿ ಕಾಣಿಸಿಕೊಂಡಿವೆ. ಶನಿವಾರ ಹಾಗೂ ರವಿವಾರದ ಹೊತ್ತಿಗೆ ಇನ್ನೂ ಹೆಚ್ಚಿನ ಪ್ರಮಾಣದ ಪೂಜಾ ಸಾಮಗ್ರಿಗಳು ಮಾರುಕಟ್ಟೆಗೆ ಬರುತ್ತವೆ ಎಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಖರೀದಿ ಮಂದಾಗಿ ನಡೆದಿದೆ.

Advertisement

ಊದಬತ್ತಿಯಿಲ್ಲದೇ ಪೂಜೆಯಿಲ್ಲ. ಹೀಗಾಗಿ ಲಕ್ಷ್ಮೀ ಬೃಹತ್‌ ಪ್ರಮಾಣದಲ್ಲಿ ಅಲಂಕಾರ ಮಾಡಿ ಪೂಜೆ ಮಾಡಿದರೆ ಮುಗಿಯಲಿಲ್ಲ. ಪೂಜೆಗೆ ತೀರಾ ಅಗತ್ಯವಾದ ಊದಬತ್ತಿ ಬೆಳಗಿದರೆ ಪೂಜೆ ಅರ್ಥಪೂರ್ಣ. ಹೀಗಾಗಿ ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆಗೆ ಘಮ-ಘಮ ಸೌರಭ ಬೀರುವ ಊದು ಬತ್ತಿಗಳಿಗೆ ಭಾರಿ ಬೇಡಿಕೆ ಎದುರಾಗಿದೆ.

ದೀಪಾವಳಿ ಹಬ್ಬದಲ್ಲಿ ಪಟಾಕಿಗಳಿಗೆ ತಮ್ಮದೇ ಸ್ಥಾನವಿದೆ. ಗಣಪತಿ ವೃತ್ತದಲ್ಲಿರುವ ಹೊಸ ವಿಠ್ಠಲ ಮಂದಿರ ರಸ್ತೆಗಳ ವಿವಿಧ ಅಂಗಡಿಗಳಲ್ಲಿ ಪಟಾಕಿ ಮಾರಾಟ ಜೋರಾಗಿದೆ. ಜಿಲ್ಲಾಡಳಿತದಿಂದ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಮತ್ತೂಂದೆಡೆ ಲಕ್ಷ್ಮೀ ಪೂಜೆಗೆ ಹೂ-ಪತ್ರಿ, ನ್ಯೆವೇದ್ಯಕ್ಕೆ ಇರಿಸಲು ಹಣ್ಣುಗಳನ್ನು ಕೊಳ್ಳಲು ಗ್ರಾಹಕರು ಆಸಕ್ತಿ ತೋರಿದರೂ ಮಳೆಯಿಂದಾಗಿ ಸಂಪರ್ಕ ಮಾರ್ಗ ಕಡಿತವಾಗಿ ಅಗತ್ಯ ಪ್ರಮಾಣದ ಹಣ್ಣು-ಹೂ ನಗರಕ್ಕೆ ಆಗಮಿಸದ ಕಾರಣ ಇರುವ ಹಣ್ಣು-ಹೂ ಬೆಲೆ ದ್ವಿಗುಣಗೊಂಡಿವೆ. ಕೆಲವು ಹಣ್ಣುಗಳ ಬೆಲೆ 3-4 ಪಟ್ಟು ಹೆಚ್ಚಿದೆ.

ದೀಪಾವಳಿ ಹಬ್ಬಕ್ಕಾಗಿ ಜಿಲ್ಲೆಯ ರೈತರು ಬೆಳೆದಿದ್ದ ಹೂಗಳು ಮಳೆಯ ಹೊಡೆತಕ್ಕೆ ಕೊಳೆತು ಹಾಳಾಗಿದ್ದು, ಹೆಚ್ಚಿನ ಬೇಡಿಕೆ ಇದ್ದರೂ ಹೂಗಳ ಕೊರತೆಯಿಂದಾಗಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇದರ ಹೊರತಾಗಿಯೂ ನಗರ ಹಲವು ಕಡೆಗಳಲ್ಲಿ ಹೂ, ತೋರಣಕ್ಕೆ ಮಾವಿನ ಎಲೆ, ಪೂಜೆಗೆ ಕಬ್ಬಿನ ಜಲ್ಲೆ, ಬಾಳೆಗೊನೆ, ಚಂಡು ಹೂವಿನ ಗೊನೆಗಳು ಸೇರಿದಂತೆ ವಿವಿಧ ವಸ್ತುಗಳ ಮಾರಾಟವೂ ಜೋರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next