ವಿಜಯಪುರ : ಶಾಲಾ ಶಿಕ್ಷಣ ಇಲಾಖೆಯ ಉಪ ನಿದೇರ್ಶಕರ ಹುದ್ದೆಗೆ ಸರ್ಕಾರ ಹಾಲಿ ಇರುವ ಅಧಿಕಾರಿಗಳ ಸ್ಥಾನಕ್ಕೆ ಬೇರೊಬ್ಬರನ್ನು ವರ್ಗಾಯಿದೆ. ಪರಿಣಾಮ ಹಾಲಿ ಹಾಗೂ ವರ್ಗಾವಣೆಗೊಂಡು ಆಗಮಿಸಿರುವ ಉಪ ನಿರ್ದೇಶಕರ ಮಧ್ಯೆ ಕುರ್ಚಿಗಾಗಿ ಕಿತ್ತಾಟ ನಡೆದಿದೆ. ಇಬ್ಬರ ಮಧ್ಯದ ಕಿತ್ತಾಟ ಬಿಡಿಸಲು ಅಂತಿಮವಾಗಿ ಪೊಲೀಸರೇ ಮಧ್ಯ ಪ್ರವೇಶಿಸುವ ಮಟ್ಟಕ್ಕೆ ಪರಿಸ್ಥಿತಿ ಬಿಗಡಾಯಿಸಿತ್ತು.
ಶಾಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪ ನಿರ್ದೇಶಕರಾಗಿರುವ ಉಮೇಶ ಶಿರಹಟ್ಟಿಮಠ ಅವರಿಗೆ ಸರ್ಕಾರ ಜಂಟಿ ನಿದೇರ್ಶಕರಾಗಿ ಮುಂಬಡ್ತಿ ನೀಡಿದೆ. ಮುಂಬಡ್ತಿ ಪಡೆದಿರುವ ಶಿರಹಟ್ಟಿಮಠ ಅವರು ಜೂನ್ 30 ರಂದು ಸ್ಥಳ ನಿಯುಕ್ತಿ ಆಗಲಿದ್ದಾರೆ.
ಇದರ ಮಧ್ಯೆಯೇ ಸರ್ಕಾರ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಕ್ಷೇತರ ಶಿಕ್ಷಣಾಧಿಕಾರಿ ಹುದ್ದೆಯಲ್ಲಿದ್ದ ಯುವರಾಜ ನಾಯಕ ಎಂಬ ಅಧಿಕಾರಿಗೆ ಸರ್ಕಾರ ಉಪ ನಿರ್ದೇಶಕ ಹುದ್ದೆಗೆ ಮುಂಬಡ್ತಿ ನೀಡಿದೆ. ಅಲ್ಲದೇ ವಿಜಯಪುರ ಜಿಲ್ಲೆಯ ಆಡಳಿತ ವಿಭಾಗದ ಉಪ ನಿರ್ದೇಶಕರಾಗಿ ವರ್ಗಾಣೆ ಮಾಡಿ ಆದೇಶಿಸಿದೆ.
ಇದರಿಂದಾಗಿ ಸಹಜವಾಗಿ ಯುವರಾಜ ಅವರು ಕರ್ತವ್ಯಕ್ಕೆ ಹಾಜರಾಗಲು ಗುರುವಾರ ವಿಜಯಪುರಕ್ಕೆ ಆಗಮಿಸಿ, ಕಛೇರಿಗೆ ತೆರಳಿದ್ದರು. ಈ ಹಂತದಲ್ಲಿ ಕಚೇರಿಯಲ್ಲಿದ್ದ ಹಾಲಿ ಉಪ ನಿರ್ದೇಶಕ ಉಮೇಶ ಶಿರಹಟ್ಟಿಮಠ ಅವರು, ಯುವರಾಜ ನಾಯಕ ಅವರಿಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದಾರೆ.
Related Articles
ಪರಿಣಾಮ ನಾ ಕೊಡೆ, ನೀ ಬಿಡೆ ಎಂಬಂತೆ ಉಮೇಶ ಹಾಗೂ ಯುವರಾಜ ಮಧ್ಯೆ ಕುರ್ಚಿಗಾಗಿ ಗುರುವಾರ ಕಚೇರಿಯಲ್ಲಿ ಕಿತ್ತಾಟ ಆರಂಭಗೊಂಡಿದೆ. ಯುವರಾಜ ಅವರು ಕರ್ತವ್ಯಕ್ಕೆ ಹಾಜರಾಗಲು ತಮ್ಮ ಬೆಂಬಲಿಗ ಶಿಕ್ಷಕರು ಹಾಗೂ ಸ್ನೇಹಿತರನ್ನು ಕರೆತಂದಿದ್ದರು. ಹೀಗಾಗಿ ಸೌಜನ್ಯದಿಂದ ನಡೆಯಬೇಕಿದ್ದ ಅಧಿಕಾರ ಹಸ್ತಾಂತರದ ಚರ್ಚೆ, ದೊಡ್ಡ ಮಟ್ಟದಲ್ಲಿ ಮಾತಿನ ಚಕಮಕಿಗೆ ಕಾರಣವಾಗಿದೆ. ಅಂತಿಮವಾಗಿ ಪೊಲೀಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವ ಹಂತಕ್ಕೆ ಹೋಗಿದೆ.
ಜಂಟಿ ನಿರ್ದೇಶಕ ಹುದ್ದೆಗೆ ಮುಂಬಡ್ತಿ ಪಡೆದಿರುವ ಹಾಲಿ ಉಪ ನಿರ್ದೇಶಕ ಉಮೇಶ ಶಿರಹಟ್ಟಿಮಠ ಅವರು, ಮುಂಬಡ್ತಿ ಪಡೆದ ಸ್ಥಾನಕ್ಕೆ ತೆರಳಿ ಕರ್ತವ್ಯ್ಕಕೆ ಹಾಜರಾಗಲು ನನಗೆ ಜೂನ 30 ರ ವರೆಗೆ ಸರ್ಕಾರ ಕಾಲಾವಕಾಶ ನೀಡಿದೆ, ಹೀಗಾಗಿ ಈಗಲೇ ನಾನು ಅಧಿಕಾರ ಹಸ್ತಾಂತರ ಮಾಡಲಾರೆ ಎಂದಿದ್ದಾರೆ.
ಜೂ.30 ರ ಬಳಿಕ ಸರ್ಕಾರದ ಆದೇಶದಂತೆ ಬೆಂಗಳೂರಿನ ಜಂಟಿ ನಿರ್ದೇಶಕ ಹುದ್ದೆಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದೇನೆ. ಅಲ್ಲಿಯವರೆಗೆ ನಾನು ಅಧಿಕಾರ ಹಸ್ತಾಂತರಿಸಲಾರೆ ಎಂದು ಪಟ್ಟು ಹಿಡಿದ್ದಾರೆ.
ಸರ್ಕಾರ ನನಗೂ ಉಪ ನಿರ್ದೇಶಕ ಹುದ್ದೆಗೆ ಮುಂಬಡ್ತಿ ನೀಡಿ, ನೀವು ಅಧಿಕಾರದಲ್ಲಿರುವ ಸ್ಥಳಕ್ಕೆ ನಿಯೋಜನೆ ಮಾಡಿದೆ. ಹೀಗಾಗಿ ನಾನು ಅಧಿಕಾರ ವಹಿಸಿಕೊಳ್ಳಲು ಬಂದಿದ್ದು, ನನಗೆ ಅವಕಾಶ ಮಾಡಿಕೊಡಿ ಎಂದು ಯುವರಾಜ ಕೂಡ ಪಟ್ಟು ಹಿಡಿದಿದ್ದಾರೆ.
ಇಬ್ಬರು ಅಧಿಕಾರಿಗಳ ಮಧ್ಯೆ ಅಧಿಕಾರ ಹಸ್ತಾಂತರ ಹಾಗೂ ಅಧಿಕಾರ ಸ್ವೀಕಾರದ ವಿಷಯದಲ್ಲಿ ಸುಮಾರು ಒಂದೆರಡು ಗಂಟೆಗಳ ಕಾಲ ಮಾತಿಗೆ ಮಾತು ಬೆಳೆದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಇಬ್ಬರಿಗೂ ಸಮಾಧಾನ ಮಾಡಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿದ್ದಾರೆ.
ಉಮೇಶ ಶಿರಹಟ್ಟಿಮಠ ಅವರು ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸುವ ತಮ್ಮ ನಿಲುವಿಗೆ ಬದ್ದವಾಗಿದ್ದರಿಂದ ಉಪ ನಿರ್ದೇಶಕ ಹುದ್ದೆಯ ಅಧಿಕಾರ ಸ್ವೀಕಾರಕ್ಕೆ ಬಂದಿದ್ದ ಯುವರಾಜ ಅವರು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಗದೇ ಮರಳಿದರು.
ಇಬ್ಬರು ಅಧಿಕಾರಿಗಳ ಮಾತಿನ ಚಕಮಕಿ ಜೋರಾಗಿದ್ದರಿಂದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಡಿಡಿಪಿಐ ಕಛೇರಿ ಎದುರು ಪೊಲೀಸ್ ವಾಹನ ನಿಲ್ಲಿಸಿದ್ದು, ಕಛೇರಿ ಪ್ರವೇಶ ದ್ವಾರ ಹಾಗೂ ಡಿಡಿಪಿಐ ಕೋಣೆಯ ಮುಂಭಾಗದಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಿದ್ದರು.
ಸರ್ಕಾರ ಜಂಟಿ ನಿರ್ದೇಶಕ ಸ್ಥಾನಕ್ಕೆ ಮುಂಬಡ್ತಿ ನೀಡಿದ್ದು, ಬೆಂಗಳೂರಿನ ಕಛೇರಿಗೆ ವರ್ಗಾಯಿಸಿದೆ. ಆದರೆ ಬೆಂಗಳೂರಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಲು ಜೂನ 30ರವರೆಗೆ ಕಾಲಾವಕಾಶ ಇದೆ. ಹೀಗಾಗಿ ಖಾಲಿಯೇ ಇಲ್ಲದ ಹುದ್ದೆಗೆ ಮತ್ತೊಬ್ಬರು ಬಂದು ಅಧಿಕಾರ ಸ್ವೀಕರಿಸಲು ಸಾಧ್ಯವಿಲ್ಲ. ಹೀಗಾಗಿ ನಾನು ಅಧಿಕಾರ ಹಸ್ತಾಂತರ ಸಾಧ್ಯವಿಲ್ಲ ಎಂದು ಯುವರಾಜ ಅವರಿಗೆ ತಿಳಿಸಿದ್ದು, ಅವರೂ ಒಪ್ಪಿದ್ದಾರೆ.
ಉಮೇಶ ಶಿರಹಟ್ಟಿ, (ಉಪ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ)
ಕೂಡ್ಲಗಿ ಬಿಇಒ ಆಗಿದ್ದ ನನಗೆ ಸರ್ಕಾರ ಉಪ ನಿರ್ದೇಶಕ ಹುದ್ದೆಗೆ ಮುಂಬಡ್ತಿ ನೀಡಿ, ವಿಜಯಪುರ ಜಿಲ್ಲೆಗೆ ನಿಯೋಜಿಸಿದ್ದು, ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದೇನೆ. ಹಾಲಿ ಡಿಡಿಪಿಐ ಜೂನ್ 30 ರ ವರೆಗೆ ಸರ್ಕಾರ ನೀಡಿರುವ ಕಾಲಾವಕಾಶ ನೀಡಿದ್ದು, ಅಲ್ಲಿಯ ವರೆಗೆ ಅಧಿಕಾರ ಹಸ್ತಾಂತರ ಮಾಡಲಾರೆ ಎಂದಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಸರ್ಕಾರದ ನಿರ್ದೇಶನದಂತೆ ನಡೆಯುತ್ತೇನೆ.
ಯುವರಾಜ ನಾಯಕ( ನಿಯೋಜಿತ ಉಪ ನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ)