Advertisement

ಡಿಸಿ ಕಚೇರಿ ನಿರ್ಮಾಣಕ್ಕೆ ಸರ್ಕಾರ ಅಸ್ತು

07:57 PM Oct 26, 2019 | Naveen |

„ಜಿ.ಎಸ್‌. ಕಮತರ
ವಿಜಯಪುರ:
ಸ್ವಾತಂತ್ರ್ಯಾ ನಂತರ ಐತಿಹಾಸಿಕ ಸ್ಮಾರಕಗಳಲ್ಲಿ ನಡೆಯುತ್ತಿರುವ ಜಿಲ್ಲಾಧಿಕಾರಿ ಕಚೇರಿ ತೆರುವುಗೊಳ್ಳಲು ಕಾಲ ಕೂಡಿ ಬಂದಿದೆ. ನನೆಗುದಿಗೆ ಬಿದ್ದಿದ್ದ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣದ ಯೋಜನೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು 25 ಕೋಟಿ ರೂ. ವೆಚ್ಚದ ಯೋಜನೆಯ ಕಡತ ಕಂದಾಯ ಇಲಾಖೆಗೆ ರವಾನೆ ಆಗಿದೆ.

Advertisement

ಅಂದುಕೊಂಡಂತೆ ನಡೆದಲ್ಲಿ ಈ ವರ್ಷಾಂತ್ಯಕ್ಕೆ ಜಿಪಂ ಕಚೇರಿ ಬಳಿಯೇ ಜಿಲ್ಲಾಡಳಿತದ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಐತಿಹಾಸಿಕ ಹಿನ್ನೆಲೆಯ ಪ್ರವಾಸಿ ತಾಣ ಎನಿಸಿರುವ ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾಡಳಿತಕ್ಕೆ ಸ್ವಂತ ಕಟ್ಟಡವಿಲ್ಲ. ಪರಿಣಾಮ ಆದಿಲ್‌ ಶಾಹಿ ಅರಸರು ನಿರ್ಮಿಸಿರುವ ಸುಮಾರು 500 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಸ್ಮಾರಕಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಕಂದಾಯ ಹಾಗೂ ಇತರೆ ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾಧಿಕಾರಿ ಕಚೇರಿ ಮಾತ್ರವಲ್ಲದೇ ಜಿಲ್ಲಾ ಕೇಂದ್ರದಲ್ಲಿ ಸರ್ಕಾರದ ವಿವಿಧ ಸುಮಾರು 35 ಇಲಾಖೆಗಳ ಜಿಲ್ಲಾ ಕಚೇರಿಗಳಿಲ್ಲದೇ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಈ ಕುರಿತು ಪ್ರವಾಸೋದ್ಯಮ ಕಥೆ-ವ್ಯಥೆ ವಿಶೇಷ ಅಭಿಯಾನದಲ್ಲಿ ‘ಉದಯವಾಣಿ’ ಪತ್ರಿಕೆ ಆಗಸ್ಟ್‌ 17ರಂದು ‘ಐತಿಹಾಸಿಕ ಸ್ಮಾರಕ ಅತಿಕ್ರಮಿಸಿದ ಸರ್ಕಾರಿ ಕಚೇರಿಗಳು’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಜಿಲ್ಲಾಡಳಿತದಿಂದ ಸಲ್ಲಿಕೆಯಾಗಿರುವ ಜಿಲ್ಲಾ ಕಾರ್ಯಾಲಯಗಳ ಸಂಕೀರ್ಣ ನಿರ್ಮಾಣಕ್ಕೆ ಸಮ್ಮತಿ ದೊರಕಿದೆ.

3 ಬಾರಿ ಪ್ರಸ್ತಾಚನೆ ಪರಿಷ್ಕರಣೆ: ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಬಿ. ಪಾಟೀಲ ಅವರ ಸೂಚನೆ ಮೇರೆಗೆ ವಿಜಯಪುರ ಜಿಲ್ಲಾಡಳಿತದಿಂದ 2015ರಲ್ಲಿ ಸಮಗ್ರ ಯೋಜನಾ ವರದಿ ಸಿದ್ಧವಾಗಿತ್ತು. ಕರ್ನಾಟಕ ಗೃಹ ಮಂಡಳಿ ಬೆಳಗಾವಿ ಕಾರ್ಯಪಾಲಕ ಅಭಿಯಂತರರು ನೀಲನಕ್ಷೆ ಸಮೇತ 90 ಲಕ್ಷ ರೂ. ವೆಚ್ಚದ ಸಮಗ್ರ ಯೋಜನಾ ವರದಿ ರೂಪಿಸಿ, 29-08-2015ರಂದು ಜಿಲ್ಲಾಡಳಿತ ಭವನಕ್ಕಾಗಿ ನೆಲ ಮಾಳಿಗೆ ಸೇರಿದಂತೆ ನಾಲ್ಕು ಆಂತಸ್ತಿನ ಕಟ್ಟಡ ನಿರ್ಮಾಣಕ್ಕೆ 90 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿತ್ತು.

ಜಿಲ್ಲೆಯಲ್ಲಿ ಸ್ವಂತ ಕಟ್ಟಡ ಇಲ್ಲದೇ ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು, ಭವಿಷ್ಯದಲ್ಲಿ ಹೊಸ ಯೋಜನೆಗಳ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜಿಲ್ಲಾಡಳಿತಕ್ಕೆ ಸ್ವಂತ ಕಟ್ಟಡದ ಅಗತ್ಯ ಇರುವ ಕುರಿತು ಸರ್ಕಾರಕ್ಕೆ ಸಮಗ್ರ ಯೋಜನಾ ವರದಿ ಸಲ್ಲಿಸಲಾಯಿತು.

Advertisement

ಆದರೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಜಿಲ್ಲಾಡಳಿತ ಭವನ ನಿರ್ಮಾಣ ಯೋಜನೆಗೆ ಸರ್ಕಾರ ಅನುಮೋದನೆ ನೀಡಲಿಲ್ಲ. ಈ ಕುರಿತು ಜಿಲ್ಲಾಡಳಿತ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ 02-02-2016 ಹಾಗೂ 01-03-2016, 7-10-2016ರಂದು ಪತ್ರ ಬರೆದರೂ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಹಲವು ತಿಂಗಳ ಬಳಿಕ ಸರ್ಕಾರ 90 ಲಕ್ಷ ರೂ. ವೆಚ್ಚದ ಭಾರಿ ಮೊತ್ತದ ಯೋಜನೆಗೆ ಸಮ್ಮತಿ ನೀಡದೇ, ಕಡಿಮೆ ವೆಚ್ಚದ ಹಾಗೂ ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಹಕಾರಿ ಆಗುವಂತೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿತ್ತು.

ಇದರಿಂದಾಗಿ 2017 ಜನೇವರಿ 20ರಂದು ಪರಿಷ್ಕೃತ ಯೋಜನೆ ರೂಪಿಸಿ, 45 ಲಕ್ಷ ರೂ. ಯೋಜನೆಯನ್ನು ಸಲ್ಲಿಸಲಾಯಿತು. ಇದಾದ ಬಳಿಕ ಮತ್ತೆ ಇನ್ನೂ ಕಡಿಮೆ ವೆಚ್ಚದ ಯೋಜನೆ ಪ್ರಸ್ತಾವನೆ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿತು. ಇದರಿಂದಾಗಿ 2017ರ ಏಪ್ರಿಲ್‌ 24ರಂದು ಜಿಲ್ಲಾಡಳಿತದಿಂದ 25 ಕೋಟಿ ರೂ. ವೆಚ್ಚಕ್ಕೆ ಯೋಜನೆ ರೂಪಿಸಿ, ಅನುಮೋದನೆ ನೀಡಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಯಿತು.

ಇದಕ್ಕೂ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್‌ ಸರ್ಕಾರ ಅನುಮೋದನೆ ನೀಡಲಿಲ್ಲ. ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್‌.ವಿ.ದೇಶಪಾಂಡೆ ಅವರು 24-12-2018 ರಂದು ಕಂದಾಯ ಇಲಾಖೆ ವಿಜಯಪುರ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಅನುಮೋದನೆ ನೀಡುವ ಕುರಿತು ಸೂಚನೆ ನೀಡಿದರು. ಇದಾದ ಬಳಿಕ ಮತ್ತೆ
13-02-2019ರಂದು 25 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಿ, ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಬಂದು, ನಂತರ ಸಮ್ಮಿಶ್ರ ಸರ್ಕಾರ ಪತನವಾಗಿತ್ತು.

ಪರಿಣಾಮ ಉದ್ದೇಶಿತ ಜಿಲ್ಲಾಡಳಿತದ ನೂತನ ಕಚೇರಿ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ 26-06-2019ರಂದು ಜಿಲ್ಲಾಡಳಿತದಿಂದ ಮತ್ತೂಂದು ಬಾರಿ ಪತ್ರ ಬರೆದು ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ತ್ವರಿತ ಅನುಮೋನೆ ನೀಡಿ ಎಂದು ಕೋರಲಾಗಿತ್ತು. ಇದೀಗ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ನಗರ ಶಾಸಕ ಬಸನಗೌಡ ಪಾಟೀಲ ಯುತ್ನಾಳ ಜಿಲ್ಲಾಡಳಿತ ಭವನ ನಿರ್ಮಾಣದ ಕುರಿತು ಹಲವು ಬಾರಿ ಮುಖ್ಯಮಂತ್ರಿ ಯಡಿಯಯೂರಪ್ಪ ಅವರ ಗಮನ ಸೆಳೆದಿದ್ದರು.

ಅಂತಿಮವಾಗಿ ಸಿಎಂ ಯಡಿಯೂರಪ್ಪ 25 ಕೋಟಿ ರೂ. ವೆಚ್ಚದ ಯೋಜನೆಗೆ ಸಮ್ಮತಿಸಿದ್ದು, ಸಂಪುಟ ಉಪ-ಸಮಿತಿ ಒಪ್ಪಿಗೆ ಬಳಿಕ ಕಳೆದ ಎರಡು ವಾರಗಳ ಹಿಂದೆ ಕಂದಾಯ ಇಲಾಖೆಗೆ ಜಿಲ್ಲಾಡಳಿತ ಭವನ ನಿರ್ಮಾಣ ಯೋಜನೆಯ ಕಡತ ರವಾನೆ ಆಗಿದೆ.

ಜಿಪಂ ಕಚೇರಿ ಬಳಿ ಸ್ಥಳ ಮೀಸಲು: ನಗರದ ಕನಕದಾಸ ಬಡಾವಣೆಯ ಜಿಪಂ ಕಚೇರಿ ಹತ್ತಿರದಲ್ಲೇ ಜಿಲ್ಲಾಡಳಿತ ಭವನ ನಿರ್ಮಿಸಲು ಸ್ಥಳ ಮೀಸಲು ಇರಿಸಲಾಗಿದೆ. ಮಹಲ್‌ ಭಾಗಾಯತ್‌ನ ಸರ್ವೇ ನಂ.313 ಹಾಗೂ 314ರಲ್ಲಿ ಸುಮಾರು 8 ಎಕರೆ ವಿಸ್ತೀರ್ಣದ ಜಮೀನನ್ನು ಮೀಸಲು ಇರಿಸಲಾಗಿದೆ. ಸದ್ಯ ಈ ಸ್ಥಳದಲ್ಲಿ ಅನಧಿಕೃತವಾಗಿ ವಿವಿಧ ಕ್ರಿಡೆಗಳನ್ನು ಆಡಲು ಬಳಸುತ್ತಿದ್ದು, ವಾಯು ವಿಹಾರಕ್ಕೂ ಬಳಕೆ ಆಗುತ್ತಿದೆ.

ಕಡ್ಡಡದ ಸ್ವರೂಪ: ನೆಲ ಮಾಳಿಗೆ ಸೇರಿ ಒಟ್ಟು ನಾಲ್ಕು ಆಂತಸ್ತಿನ ಕಟ್ಟಡ ನಿರ್ಮಾಣಗೊಳ್ಳಲಿದೆ. ನೆಲ ಮಾಳಿಗೆ ಸೇರಿದಂತೆ ಮೂರು ಆಂತಸ್ತಿನ ಕಟ್ಟಡಗಳು ತಲಾ 3,724 ಸಾವಿರ ಚದರ ಮೀಟರ್‌ ಕಡ್ಡಟ ನಿರ್ಮಾಣಗೊಳ್ಳಲಿದೆ. ನಾಲ್ಕನೇ ಮಹಡಿಯಲ್ಲಿ 1,884 ಚದರ ಮೀಟರ್‌ ಆಡಿಟೋರಿಯಂ ನಿರ್ಮಾಣಗೊಳ್ಳಲಿದೆ.

ಯಾವ್ಯಾವ ಕಚೇರಿ : ಮೊದಲ ಹಂತದಲ್ಲಿ ಸಲ್ಲಿಕೆಯಾಗಿದ್ದ ಮೂಲ ನೀಲ ನಕ್ಷೆಯಲ್ಲಿ ಮೂರು ಮಹಡಿಗಳಲ್ಲಿ ಪ್ರತಿ ಮಹಡಿಯಲ್ಲೂ ಯಾವ್ಯಾವ ಕಚೇರಿ ಇರಬೇಕು ಎಂದು ನಿಗದಿ ಮಾಡಿತ್ತು. ಆದರಂತೆ ನೆಲ ಮಹಡಿಯಲ್ಲಿ ಅಬಕಾರಿ ಇಲಾಖೆ ಆಯುಕ್ತರು, ಕಾರ್ಮಿಕ ಇಲಾಖೆ, ನಗರಾಭಿವೃದ್ಧಿ, ವಾರ್ತಾ ಮತ್ತು ಪ್ರಚಾರ ಇಲಾಖೆ, ಜಿಲ್ಲಾ ಖಜಾನೆ, ಅಲ್ಪಸಂಖ್ಯಾತ ಇಲಾಖೆ, ಡಿ.ದೇವರಾಜ ಅರಸರು ಹಿಂದುಳಿದ ನಿಮಗದ ಕಚೇರಿ, ವಿಕಲಚೇತನರು-ಹಿರಯ ನಾಗರಿಕರ ಇಲಾಖೆ, ವಿಶಾಲ ಸಭಾಂಗಣ, ಎನ್‌ಐಸಿ, ಬ್ಯಾಂಕ್‌ ಸೇರಿದಂತೆ ಇತರೆ ಕೆಲ ಕಚೇರಿಗಳು ಇರಲಿವೆ.

ಮೊದಲ ಮಹಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿ, ಆಹಾರ ಮತ್ತು ನಾಗರಿಕ ಪೂರೈಕೆ, ಜಿಲ್ಲಾ ಭೂದಾಖಲೆಗಳ ಅಭಿಲೇಖಾಲಯದ ಡಿಡಿಎಲ್‌ ಆರ್‌, ಚುನಾವಣೆ ವಿಭಾಗ, ಸಂಸದರ ಕಚೇರಿ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಜಿಲ್ಲಾ ಅಂಕಿಸಂಖ್ಯಾ ಇಲಾಖೆ, ಸ್ಥಳೀಯ ಲೆಕ್ಕ ಪರಿಶೋಧಕರ ಕಚೇರಿ, ವಿಪತ್ತು ನಿರ್ವಹಣಾ ಘಟಕಗಳು ಇರಲಿವೆ.

ಎರಡನೇ ಅಂತಸ್ತಿನಲ್ಲಿ ಸಣ್ಣ ನೀರಾವರಿ, ನಗರ ಸಮೀಕ್ಷೆ, ಔಷಧ ನಿಯಂತ್ರಕರ ಕಚೇರಿ, ಪಶು ಸಂಗೋಪನೆ, ಕಾನೂನು ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜವಳಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ರೇಷ್ಮೆ, ಕೃಷಿ, ಗ್ರಾಹಕರ ನ್ಯಾಯಾಲಯ, ಉದ್ಯೋಗ ಮತ್ತು ತರಬೇತಿ ಇಲಾಖೆ, ಸಹಕಾರಿ ಇಲಾಖೆ ಸೇರಿದಂತೆ ಇತರೆ ಕೆಲ ಇಲಾಖೆಗಳು ಲಭ್ಯ ಆಗಲಿವೆ.

ಮೂರನೇ ಮಹಡಿಯಲ್ಲಿ ಸಾವಿರ ಜನರು ಕುಳಿತುಕೊಳ್ಳಲು ಅವಕಾಶ ಇರುವ ಬೃಹತ್‌ ಸಭಾಂಗಣ ಇರಲಿದ್ದು, ಗಣ್ಯರು, ಮಹಿಳೆಯರ ವಿಶ್ರಾಂತಿ, ಶೌಚಾಲಯಗಳಂಥ ಮೂಲಭೂತ ಸೌಲಭ್ಯಗಳೂ  ಮಹಡಿಯಲ್ಲಿ ಇರಲಿವೆ.

ಪರಿಸರ ಸ್ನೇಹಿ ಜಿಲ್ಲಾಡಳಿತ ಭವನ : ವಿಜಯಪುರ ಜಿಲ್ಲಾಡಳಿತ ನೂತನ ಭವನ ನಿರ್ಮಾಣಗೊಂಡಲ್ಲಿ ರಾಜ್ಯಕ್ಕೆ ಮಾದರಿ ಸ್ವರೂಪದಲ್ಲಿ ಇರಲಿದೆ. ವಿದ್ಯುತ್‌ ಬಳಕೆಗೆ ಕಡಿವಾಣ ಹಾಕಿ, ನೈಸರ್ಗಿಕ ಮರು ಬಳಕೆಯ ಪರಿಸರ ಸ್ನೇಹಿತ ವಿದ್ಯುತ್‌ ಬಳಕೆಗೆ ಯೋಜನೆ ರೂಪಿಸಲಾಗಿದೆ. ಹಲವು ವೇಳೆಯಲ್ಲಿ ಕಚೇರಿ ಕೆಲಸದಲ್ಲಿ ಹೆಚ್ಚಿನ ವಿದ್ಯುತ್‌ ಬಳಕೆ ಕಾರಣ ಸರ್ಕಾರಕ್ಕೆ ಅಧಿಕ ಆರ್ಥಿಕ ಹೊರೆ ಬೀಳಲಿದೆ. ಈ ಹೊರೆ ತಪ್ಪಿಸುವ ಜೊತೆಗೆ ಪರಿಸರ ಸ್ನೇಹಿಯಾದ ಸೌರವಿದ್ಯುತ್‌ ಬಳಕೆಗೆ ಸದರಿ ಯೋಜನೆಯಲ್ಲಿ ಸೇರಿಸಲಾಗಿದೆ. ಜಿಲ್ಲಾಡಳಿತದ ಭವನ ಮೇಲ್ಛಾವಣಿಗೆ
ಸೋಲಾರ್‌ ಪ್ಯಾನೆಲ್‌ ಅಳವಡಿಸುವ ಮೂಲಕ ಸರ್ಕಾರಕ್ಕೆ ಕಚೇರಿಗಳ ವಿದ್ಯುತ್‌ ಬಳಕೆಯ ಅಧಿಕ ಆರ್ಥಿಕ ಹೊರೆಯನ್ನು ನೀಗಲು ಯೋಜಿಸಲಾಗಿದೆ.

ಮಳೆ ನೀರು ಕೊಯ್ಲು : ವಿಜಯಪುರ ನೂತನ ಜಿಲ್ಲಾಡಳಿತ ಭವನದ ಕಟ್ಟಡದಲ್ಲಿ ಮಳೆ ನೀರು ಕೊಯ್ಲು ಯೋಜನೆ ರೂಪಿಸಿದೆ. ಮಳೆ ನೀರು ಕೊಯ್ಲು ಮಾಡಿದ ನೀರನ್ನು ಜಿಲ್ಲಾಡಳಿತ ಭವನ ಸುತ್ತಲೂ ಹಸಿರೀಕರಣ ಹಾಗೂ ಉದ್ಯಾನವನ ನಿರ್ಮಾಣದ ಬಳಿಕ ನಿರ್ವಹಣೆಗೆ ಬಳಸಿಕೊಳ್ಳಲು ಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next