Advertisement

ಚಡಚಣ ಸಹೋದರರ ಹತ್ಯಾ ಪ್ರಕರಣ : ನ್ಯಾಯಾಲಯಕ್ಕೆ ಹಾಜರಾದ ಭೈರಗೊಂಡ –ಸಹಚರರಿಗೆ ಭಾರಿ ಭದ್ರತೆ

05:45 PM Mar 22, 2022 | Team Udayavani |

ವಿಜಯಪುರ : ಭೀಮಾತೀರದ ಹಂತಕ ಧರ್ಮರಾಜ ಚಡಚಣ ನಕಲಿ ಎನ್ಕೌಂಟರ್ ಪ್ರಕರಣದ ಮಹಾದೇವ ಭೈರಗೊಂಡ ಸೇರಿದಂತೆ 16 ಆರೋಪಿಗಳು ಮಂಗಳವಾರ ನ್ಯಾಯಾಲಯಕ್ಕೆ ವಿಚಾರಣೆಗೆ ಆಗಮಿಸಿದ ಸಂದರ್ಭದಲ್ಲಿ ಪೊಲೀಸರು ಭಾರಿ ಬಂದೋಬಸ್ತ್ ಮಾಡಿದ ಘಟನೆ ಜರುಗಿತು.

Advertisement

2017 ಅಕ್ಟೋಬರ್ 30 ರಂದು ಚಡಚಣ ಬಳಿಯ ಕೊಂಕಣಗಾಂವ ಬಳಿ ಪೊಲೀಸರು ಧರ್ಮರಾಜ ಚಡಚಣ ಮೇಲೆ ನಡೆಸಿದ್ದ ಎನ್ಕೌಂಟರ್ ಹತ್ಯೆ ನಕಲಿ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ವಿಜಯಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವಿಚಾರಣೆ ಹಿನ್ನೆಲೆಯಲ್ಲಿ 17 ಆರೋಪಿಗಳಲ್ಲಿ 16 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಾಲಯ ವಿಚಾರಣೆಯನ್ನು ಜೂನ 8 ಕ್ಕೆ ಮುಂದೂಡಿದೆ. ಇದರಲ್ಲಿ ಓರ್ವ ಆರೋಪಿ ಮೃತಪಟ್ಟಿದ್ದರಿಂದ 16 ಆರೋಪಿಗಳು ಮಾತ್ರ ವಿಚಾರಣೆಗೆ ಹಾಜರಾಗಿದ್ದರು.

ತಮ್ಮ ಮಗ ಧರ್ಮರಾಜ ಚಡಚಣ ಮೇಲೆ ಪೊಲೀಸರು ನಡೆಸಿದ ಎನ್ಕೌಂಟರ್ ಹತ್ಯೆ ನಕಲಿಯಾಗಿದೆ. ಅಲ್ಲದೇ ಇನ್ನೋರ್ವ ಪುತ್ರ ಗಂಗಾಧರ ಚಡಚಣ ಸಂಶಯಾಸ್ಪದ ಸಾವು ಕೂಡ ಪೊಲೀಸರು ಮಹಾದೇವ ಭೈರಗೊಂಡ ಜೊತೆ ಸೇರಿ ನಡೆಸಿದ ಸಂಚಿನ ಹತ್ಯೆ. ಹೀಗಾಗಿ ಇಡೀ ಪ್ರಕರಣದ ಸಮಗ್ರ ತನಿಖೆ ನಡೆಸಿ ತಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಮೃತ ಚಡಚಣ ಸಹೋದರರ ತಾಯಿ ಹೈಕೋರ್ಟ್ ಮೊರೆ ಹೋಗಿದ್ದರು.

ಕಲಬುರ್ಗಿ ಹೈಕೋರ್ಟ್ ಚಡಚಣ ಸಹೋದರರ ಹತ್ಯಾ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ನಕಲಿ ಎನ್ಕೌಂಟರ್ ಪ್ರಕರಣದ ಆರೋಪದಲ್ಲಿ ಚಡಚಣ ಪೊಲೀಸ್ ಠಾಣೆಯ ಅಂದಿನ ಸಿಪಿಐ ಅಸೂಡೆ, ಎಸೈ ಗೋಪಾಲ ಹಳ್ಳೂರು, ಪ್ರಮುಖ ಆರೋಪಿ ಮಹಾದೇವ ಭೈರಗೊಂಡ ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿ, ಜೈಲಿಗೆ ತಳ್ಳಿತ್ತು.

ಇದನ್ನೂ ಓದಿ : ಕುರಿಗಾಹಿ ಮಹಿಳೆ ಕೊಲೆ ಪ್ರಕರಣ : ಸಿ.ಒ.ಡಿ. ತನಿಖೆಗೆ ಸಚಿವ ಎಂ.ಟಿ.ಬಿ. ನಾಗರಾಜು ಆಗ್ರಹ

Advertisement

ಇದಾದ ಬಳಿಕ ಈ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಭೈರಗೊಂಡ ಹಾಗೂ ಇತರರು ಜಾಮೀನಿನ ಮೆಲೆ ಬಿಡುಗಡೆ ಆಗಿದ್ದರು. ಇದಾದ ಬಳಿಕ ವಿಜಯಪುರ ನಗರದ ಹೊರ ವಲಯದಲ್ಲಿ ಮಹಾದೇವ ಭೈರಗೊಂಡ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆದಿತ್ತು. ಹೀಗಾಗಿ ಆರೋಪಿ ಭೈರಗೊಂಡಗೆ ಜೀವ ಬೆದರಿಕೆ ಇರುವ ಕಾರಣ ಪೊಲೀಸರು ನ್ಯಾಯಾಲಯದ ಸುತ್ತಲೂ ಭಾರು ಭದ್ರತೆ ಕಲ್ಪಿಸಿದ್ದರು.

ಚಡಚಣ ಸಹೋದರರಾದ ಧರ್ಮರಾಜ ಹಾಗೂ ಗಂಗಾಧರ ಅವರ ಹತ್ಯಾ ಪ್ರಕರಣದ ಕುರಿತು ಇದೀಗ ಜಿಲ್ಲಾ ನ್ಯಾಯಾಲಯಲ್ಲಿ ವಿಚಾರಣೆ ನಡೆಸಿದ್ದು, ಮಂಗಳವಾರ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಭಾರಿ ಪೊಲೀಸ್ ಭದ್ರತೆಯಲ್ಲಿ ಭೈರಗೊಂಡ ಸ್ವಗ್ರಾಮ ಚಡಚಣ ತಾಲೂಕ ಕೆರೂರನಿಂದ ವಿಚಾರಣೆಗೆ ಆಗಮಿಸಿದ್ದು, ನಂತರ ಪೊಲೀಸರು ಸೂಕ್ತ ಭದ್ರತೆಯಲ್ಲಿ ಆರೋಪಿಗಳನ್ನು ಅವರ ಗ್ರಾಮಕ್ಕೆ ಸುರಕ್ಷಿತವಾಗಿ ತಲುಪಿಸಿದ್ದಾರೆ.

ಪ್ರಮುಖ ಆರೋಪಿ ಮಹಾದೇವ ಭೈರಗೊಂಡ ಮೇಲೆ ಭಾರಿ ಪ್ರಮಾಣದ ದಾಳಿ ನಡೆದ ಕಾರಣ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುತ್ತಿರುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ನ್ಯಾಯಾಲಯದ ಸುತ್ತಲೂ ಭಾರಿ ಪೊಲೀಸ್ ಭದ್ರತೆ ಕಲ್ಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next