Advertisement

ಗ್ರಾ.ಪಂ.ಚುನಾವಣೆ ಧ್ವೇಷಕ್ಕೆ ಸುಪಾರಿ ಹತ್ಯೆ :ಐವರ ಬಂಧನ ;ಅಪಘಾತ ಎಂದು ಬಿಂಬಿಸಿದ್ದ ಪ್ರಕರಣ

07:20 PM Sep 17, 2021 | Team Udayavani |

ವಿಜಯಪುರ : ಗ್ರಾ.ಪಂ. ಚುನಾವಣೆಯ ದ್ವೇಷ ವ್ಯಕ್ತಿಯೊಬ್ಬನ ಸುಪಾರಿ ಹತ್ಯೆಗೆ ಕಾರಣವಾಗಿದೆ. ಅಪಘಾತ ಎಂದು ಬಿಂಬಿತವಾಗಿದ್ದ ಪ್ರಕರಣವನ್ನು ಕೇವಲ 22 ದಿನಗಳಲ್ಲಿ ಸುಪಾರಿ ಹತ್ಯೆ ಎಂದು ಪತ್ತೆ ಮಾಡಿರುವ ಜಿಲ್ಲೆಯ ಪೊಲೀಸರು, ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಆ.27 ರ ಬೆಳಗಿನ ಜಾವ ನಗರದ ಹೊರ ವಲಯದಲ್ಲಿರುವ ಇಟ್ಟಂಗಿಹಾಳ ಕ್ರಾಸ್ ಬಳಿ ಅಪಘಾತವಾದ ರೀತಿಯಲ್ಲಿ ಬೈಕ್ ಸಮೇತ ದಂಧರಗಿ ಗ್ರಾಮದ ಅನಿಲ ಮಾದೇವ ಬಿರಾದಾರ ಎಂಬ 32 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಕುರಿತು ಮೃತನ ಪತ್ನಿ ಮಹಾದೇವಿ ನೀಡಿದ ದೂರಿನಂತೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಘಾತ ಪ್ರಕರಣವೆಂದೇ ತನಿಖೆಗೆ ಇಳಿದಿದ್ದರು. ಆದರೆ ತನಿಖೆ ಹಂತದಲ್ಲಿ ದೊರೆತ ಸುಳಿವಿನ ಆಧಾರದಲ್ಲಿ ಬೇರೊಂದು ಮಗ್ಗುಲಿನಿಂದ ತನಿಖೆ ಆರಂಭಿಸಿದಾಗ ಸುಪಾರಿ ಹತ್ಯೆಯ ಕೃತ್ಯ ಬಯಲಾಗಿದೆ ಎಂದು ಎಸ್ಪಿ ಎಚ್.ಡಿ.ಆನಂದಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಹತ್ಯೆಯಾಗಿರುವ ಅನಿಲ ಹಾಗೂ ಪ್ರಕರಣದ ಪ್ರಥಮ ಆರೋಪಿಯಾದ ಅನಿಲನ ಸಂಬಂಧಿ ಬನ್ನಪ್ಪ ಉರ್ಫ್ ಅಪ್ಪು ಹಣಮಂತ ಬಿರಾದಾರ (41) ಈತನ ಮಧ್ಯೆ ಜಮೀನು ಹಾಗೂ ಭಾವಿ ನೀರಿನ ವಿಷಯದಲ್ಲಿ ಜಗಳವಾಗಿತ್ತು. ಮತ್ತೊಂದೆಡೆ ಗ್ರಾ.ಪಂ. ಸದಸ್ಯ ಸುರೇಶ ಕಲ್ಲಪ್ಪ ಅವಟಿ (34) ಈತ ಚುನಾವಣೆ ಸಂದರ್ಭದಲ್ಲಿ ಅನಿಲ ವಿರೋಧ ಅಭ್ಯರ್ಥಿಗೆ ಬಂಬಲಿಸಿದ್ದ. ಹೀಗಾಗಿ ಈ ಇಬ್ಬರೂ ಸೇರಿ ಅನಿಲನನ್ನು ಮುಗಿಸಿ ಬಿಡುವ ಸಂಚು ರೂಪಿಸಿದ್ದಾರೆ.

ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 1003 ಹೊಸ ಪ್ರಕರಣ : 1199 ಸೋಂಕಿತರು ಗುಣಮುಖ

ಇದಕ್ಕಾಗಿ ಲೋಗಾವಿ ಗ್ರಾಮದ ಬೀರಪ್ಪ ಸದಾಶಿವ ಗುಗವಾಡ (22), ದದಾಮಟ್ಟಿಯ ಕಿರಣ ಉಮೇಶ ಅಸ್ಕಿ (23) ಹಾಗೂ ತೊರವಿ ಗ್ರಾಮದ ರಾಜು ಕಿಶೋರ ಅಸಂಗಿ (23) ಇವರಿಗೆ ಅನಿಲನನ್ನು ಮುಗಿಸಲು 2.50 ಲಕ್ಷ ರೂ. ಸುಪಾರಿ ನೀಡಿದ್ದರು. ಇದರಂತೆ ಸುಪಾರಿ ನೀಡಿದ ಬಳಿಕ ಸುಪಾರಿ ಹತ್ಯೆ ಮಾಡಿದ ಮೂವರೊಂದಿಗೆ ಸೇರಿ ಆ.26 ರಂದು ಆರೋಪಿಗಳೆಲ್ಲ ಅನಿಲನ್ನು ಡಾಬಾಕ್ಕೆ ಕರೆಸಿ ವಿಪರೀತ ಮದ್ಯ ಕುಡಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಬ್ಬಿಣದ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದಿದ್ದು, ಮರ್ಮಾಂಗಕ್ಕೆ ಒದ್ದಿರುವ ಕಾರಣ ಸ್ಥಳದಲ್ಲೇ ಅನಿಲ ಮೃತಪಟ್ಟಿದ್ದಾನೆ. ಹತ್ಯೆ ಬಳಿಕ ಅನಿಲನ ಶವವನ್ನು ಆತನದೇ ಬೈಕ್‍ನಲ್ಲಿ ಹೊತ್ತೊಯ್ದು, ಇಂಟಗಿಹಾಳ ಕ್ರಾಸ್ ಬಳಿ ಅಪಘಾತ ಆಗಿರುವ ರೀತಿಯಲ್ಲಿ ಎಸೆದು ಪರಾರಿಯಾಗಿದ್ದರು.
ತನಿಖೆಯ ಹಂತದಲ್ಲಿ ಲಭ್ಯವಾದ ಸಾಕ್ಷಾಧಾರಗಳನ್ನು ಆಧರಿಸಿ ಅಪ್ಪು ಬಿರಾದಾರ, ಸುರೇಶ ಬಿರಾದಾರ, ಸುರೇಶ ಅವಟಿ, ಬೀರಪ್ಪ ಗುಗವಾಡ, ಕಿರಣ ಅಸ್ಕಿ ಹಾಗೂ ರಾಜು ಅಸಂಗಿ ಸೇರಿ ಐವರೂ ಆರೋಪಿಗಳನ್ನು ಸೆ.16 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ಹತ್ಯೆಯ ಕೃತ್ಯ ಬೆಳಕಿಗೆ ಬಂದಿದೆ.

Advertisement

ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸಿಪಿಐ ಸಂಗಮೇಶ ಪಾಲಭಾವಿ ನೇತೃತ್ವದ ಎಸೈ ಜಿ.ಎಸ್.ಉಪ್ಪಾರ, ಎಂ.ಎನ್.ಮುಜಾವರ, ಎಸ್.ಎ.ಸನದಿ, ಬಿ.ವಿ.ಪವಾರ್, ಹಣಮಂತ ಬಿರಾದಾರ, ಎಂ.ಬಿ.ಜನಗೊಂಡ, ಎಲ್.ಎಸ್.ಹಿರೇಗೌಡರ, ಆರ್.ಡಿ.ಅಂಜುಟಗಿ, ಗುರು ಹಡಪದ, ಶಿವನಂದ ಹಿರೇಗೋಳ ಅವರಿದ್ದ ವಿಶೇಷ ತನಿಖೆ ತಂಡಕ್ಕೆ ಎಸ್ಪಿ ಆನಂದಕುಮಾರ ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next