ವಿಜಯಪುರ: ಜಿಲ್ಲೆಯಲ್ಲಿ ಅಪ್ರಾಪ್ತ ಶಾಲಾ ವಿದ್ಯಾರ್ಥಿನಿ ಮೇಲೆ ಆಕೆಯ ಹತ್ತಿರದ ಸಂಬಂಧಿಯೇ ಅತ್ಯಾಚಾರ ನಡೆಸಿ, ಆಕೆಯ ಗರ್ಭಕ್ಕೆ ಕಾರಣವಾಗಿದ್ದ ಪ್ರಕರಣದಲ್ಲಿ ಜಿಲ್ಲೆಯ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ 26 ಸಾವಿರ ರೂ. ದಂಡ ಭರಿಸುವಂತೆಯೂ ಆದೇಶಿಸಿದೆ.
ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪೋಕ್ಸೋ ಅತ್ಯಾಚಾರ ಪ್ರಕರಣದ ಆರೋಪಿ ಅರ್ಜುನ ಕ್ಷತ್ರಿ ಎಂಬವನಿಗೆ ವಿಜಯಪುರ ಹೆಚ್ಚುವರಿ ಜಿಲ್ಲಾ -ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.
ಹೋರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ವಸ್ತಿ ಮನೆಯಲ್ಲಿ ವಾಸ ಇರುವ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ವಿದ್ಯಾರ್ಥಿನಿ ನಿತ್ಯವೂ ಅನತಿ ದೂರದಲ್ಲಿರುವ ಅರ್ಥಗಾಕ್ಕೆ ನಡೆದುಕೊಂಡು ಹೋಗಿ, ಅಲ್ಲಿಂದ ಅಥರ್ಗಾ ಗ್ರಾಮದಲ್ಲಿರುವ ಶಾಲೆಗೆ ಹೋಗಿ ಬರುತ್ತಿದ್ದಳು.
ಅದೊಂದು ದಿನ ಇಂಡಿ ಪಟ್ಟಣದಲ್ಲಿ ನಡೆದ ಶಾಲಾ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು ಅಥರ್ಗಾದಿಂದ ತನ್ನ ತೋಟದ ವಸ್ತಿ ಮನೆಗೆ ಮರಳುವಾಗ ಸಂತ್ರಸ್ತ ಬಾಲೆಯ ಸೋದರತ್ತೆಯ ಮಗನಾದ 23 ವರ್ಷದ ಅರ್ಜುನ ಅಡ್ಡಗಟ್ಟಿ, ಹತ್ತಿರದ ನಿಂಬೆ ತೋಟಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ.
ಅಲ್ಲದೇ ಈ ವಿಷಯವನ್ನು ಯಾರೀಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ. ಅಲ್ಲದೇ ಇದೇ ಬೆದರಿಕೆಯನ್ನು ಮುಂದಿಟ್ಟುಕೊಂಡು ಅಪೃಆಪ್ತೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುತ್ತ ಬಂದಿದ್ದ. ಪರಿಣಾಮ ವಿದ್ಯಾರ್ಥಿನಿ ಗರ್ಭ ಧರಿಸಿ, ಹೆಣ್ಣು ಮಗುವಿಗೆ ಜನ್ಮನೀಡುವಂತೆ ಮಾಡಿದ್ದ.
ಇದರಿಂದ ನೊಂದ ಬಾಲೆಯ ತಂದೆ ಹೊರ್ತಿ ಪೊಲೀಸ ಠಾಣೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾ-ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ರಆಮ ನಾಯಕ ಅವರು ಆರೋಪಿ ಕೃತ್ಯ ಎಸಗಿದ ಸಾಕ್ಷಾಧಾರ ಪರಿಗಣಿಸಿ 20 ವರ್ಷ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ 26 ಸಾವಿರ ರೂ. ದಂಡ ಭರಿಸುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ ವಿ.ಜಿ.ಹರಗೊಂಡ ಸಮರ್ಥವಾಗಿ ವಾದ ಮಂಡಿಸಿದ್ದರು.