ವಿಜಯಪುರ: ಕೋವಿಡ್-19ವಿರುದ್ಧದ ಹೋರಾಟಗಾರರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು ಜಿಲ್ಲಾಡಳಿತದ ಕೋವಿಡ್ ವಾರಿಯರ್ಸ್ ಸಿಬ್ಬಂದಿಗೆ ಬಿಎಲ್‌ಡಿಇ ಸಂಸ್ಥೆಯ ಎವಿಎಸ್ ಆಯುರ್ವೇದ ಕಾಲೇಜಿನಲ್ಲಿ ಉತ್ಪಾದಿಸಿದ ಕೊರೊನಾ ರೋಗ ಪ್ರತಿನಿರೋಧಕ ಉತ್ಪನ್ನಗಳನ್ನು ಎಂಎಲ್‌ಸಿ ಸುನೀಲಗೌಡ ಪಾಟೀಲ ಉಚಿತವಾಗಿ ವಿತರಿಸಿದರು.
ಬುಧವಾರ ಜಿಲ್ಲಾಧಿಕಾರಿ ವೈ. ಎಸ್.ಪಾಟೀಲ ಅವರಿಗೆ ತಮ್ಮ ಸಂಸ್ಥೆ ಉತ್ಪಾದಿಸಿರುವ ರೋಗ ನಿರೋಧಕ ಹಾಗೂ ಶಕ್ತವರ್ಧಕ ಉತ್ಪನ್ನಗಳನ್ನು ಹಸ್ತಾಂತರಿಸಿ ಮಾತನಾಡಿದ ಸುನೀಲಗೌಡ ಪಾಟೀಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಆಯುಷ್ ಮಂತ್ರಾಲಯ ನಿಗದಿ ಪಡಿಸಿರುವ ಉತ್ಪನ್ನಗಳನ್ನು ಬಳಸುವಂತೆ ಕರೆ ನೀಡಿದೆ. ಹೀಗಾಗಿ ನಮ್ಮ ಬಿಎಲ್ ಡಿಇ ಸಂಸ್ಥೆ ಆಯುರ್ವೇದ ಕಾಲೇಜು ಫಾರ್ಮಸಿ ವಿಭಾಗದ ಔಷಧ ತಜ್ಞರ ನೆರವಿನಿಂದ ಹರಿದ್ರಾಕಾಂಡ ಹಾಗೂ ಹರ್ಬಲ್ ಟೀ ಉತ್ಪನ್ನ ಉತ್ಪಾದಿಸಲಾಗಿದೆ.
ಹರಿದ್ರಾಕಾಂಡಗೆ ಗೋಲ್ಡನ್ ಮಿಲ್ಕ್ ಎಂದು, ನಿತ್ಯ ಕುಡಿಯುವ ಚಹಾಕ್ಕೆ ಹರ್ಬಲ್ ಟೀ ಎಂದು ಹಸರಿಸಲಾಗಿದೆ ಎಂದು ವಿವರಿಸಿದರು. ಬಿಎಲ್‌ಡಿಇ ಆಡಳಿತಾಧಿಕಾರಿ ಡಾ| ರಾಘವೇಂದ್ರ ಕುಲಕರ್ಣಿ ಮಾತನಾಡಿ, ಭಾರತೀಯ ವೈದ್ಯಕೀಯ ಆಯುರ್ವೇದ ಪದ್ಧತಿಯ ಮನೆ ಮದ್ದು ದಿವ್ಯ ಔಷಧ ಎನಿಸಿದೆ. ಇದನ್ನು ಆಧರಿಸಿ ಆಯುರ್ವೇದಿಕ್ ಶಕ್ತಿವರ್ಧಕ ತಯಾರಿಸಿದೆ. ನಮ್ಮ ಸಂಸ್ಥೆಯ ಅಧ್ಯಕ್ಷ ಶಾಸಕ ಎಂ.ಬಿ.ಪಾಟೀಲ 1 ಲಕ್ಷ ರೂ. ಹಣದಲ್ಲಿ ಇದನ್ನು ಖರೀದಿಸಿದ್ದು, ಅವರ ಸೂಚನೆ ಮೇರೆಗೆ ಕೊರೊನಾ ವಾರಿಯರ್ ಗಳಿಗೆ ಉಚಿತವಾಗಿ ವಿತರಿಸಲಾಗಿದೆ ಎಂದರು.
ಪ್ರಚಾರಾಧಿಕಾರಿ ಡಾ| ಮಹಾಂತೇಶ ಬಿರಾದಾರ ಮಾತನಾಡಿ, ಇಂಗ್ಲೆಂಡ್ ಪ್ರಧಾನಮಂತ್ರಿ ಸೇರಿದಂತೆ ಜಗತ್ತಿನ ಅನೇಕ ಗಣ್ಯರು, ರಾಜಮನೆತನದವರು ಪರ್ಯಾಯ ಔಷಧ ಪದ್ಧತಿ ಬಳಸಿಯೇ ಕೊರೊನಾದಿಂದ ಗುಣಮುಖ ರಾಗಿದ್ದಾರೆ. ಹೀಗಾಗಿ ಆಯುರ್ವೆàದ, ಹೋಮಿಯೊಪತಿ, ಯೋಗ ಪದ್ಧತಿಗಳಿಗೆ ಬೆಲೆ ಬಂದಿದೆ. ಬಿಎಲ್ ಡಿಇ ಆಯುರ್ವೇದ ಫಾರ್ಮಸಿಯಲ್ಲಿ ತಯಾರಿಸಿರುವ ಉತ್ಪನ್ನಗಳ ಮಾರಾಟಕ್ಕೆ ಸಂಬಂ ಧಿಸಿದ ಪ್ರಾ ಧಿಕಾರಕ್ಕೆ ಅನುಮತಿ ಕೇಳಿದ್ದು, ದೊರೆತ ನಂತರ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ಸಾರ್ವಜನಿಕರಿಗೆ ನಿಗ ದಿತ ದರದಲ್ಲಿ ನೀಡಲಾಗುವದು ಎಂದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಗೋವಿಂದರೆಡ್ಡಿ ಮಾತನಾಡಿ, ಬಿಎಲ್‌ಡಿಇ ಸಂಸ್ಥೆ ಕೋವಿಡ್ ಹೋರಾಟದಲ್ಲಿ ನಮ್ಮೊಂದಿಗೆ ನಿರಂತರ ಸಹಕಾರ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜು ಉಪಪ್ರಾಚಾರ್ಯ ಡಾ| ಶಶಿಧರ ನಾಯಕ, ಡಾ| ಪ್ರಮೋದ ಬರಗಿ, ಇತರರು ಉಪಸ್ಥಿತರಿದ್ದರು.