ವಿಜಯಪುರ: ರಾಜ್ಯ ಸರ್ಕಾರ ಕೋವಿಡ್ -19 ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ ವಿಷಯದಲ್ಲಿ ಅತ್ಯಂತ ಕಠಿಣ ನಿರ್ಧಾರ ಹಾಗೂ ತೀವ್ರ ಕಟ್ಟೆಚ್ಚರ ವಹಿಸಿದೆ. ಸರ್ಕಾರದ ಲಾಕ್‌ಡೌನ್ ನಿರ್ಧಾರ ಪಾಲಿಸಬೇಕಿದೆ. ಮದ್ದೇ ಇಲ್ಲದ ಈ ರೋಗಕ್ಕೆ ಜನರು ಮನೆಯಿಂದ ಹೊರಗೆ ಬರದೇ ನೆಮ್ಮದಿಯಿಂದ ಮನೆಯಲ್ಲೇ ಇರುವುದೇ ರೋಗಕ್ಕೆ ನಿಜವಾದ ಮದ್ದು ಎಂದು ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರವಿವಾರ ನಗರದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಶ್ವದಾದ್ಯಂತ ಕೋವಿಡ್-19 ಮಹಾಮಾರಿ ಕೋವಿಡ್ ಒಂದು ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದು, ಇನ್ನೂ 17 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲೂ ಈ ವರೆಗೆ 250 ಸೋಂಕಿತರಿದ್ದು, 6 ಜನ ಮೃತಪಟ್ಟಿದ್ದಾರೆ. ಇದರ ಹೊರತಾಗಿಯೂ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಜನರು ಮನೆಯಿಂದ ಬರದೇ ರೋಗ ನಿಗ್ರಹಕ್ಕೆ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ವಿಜಯಪುರ ಜಿಲ್ಲೆಗೆ ವಿದೇಶ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬಂದಿರುವ ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳು, ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಸೇರಿ ವಿವಿಧ ಅಧಿಕಾರಿ-ಸಿಬ್ಬಂದಿ, ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು ತಮ್ಮ ಪ್ರಾಣದ ಹಂಗು ತೊರೆದು ಸಾರ್ವಜನಿಕರ ಜೀವ ಉಳಿಸುವ ಸೇವೆಗೆ ನಿಂತಿದ್ದಾರೆ.
ಜನರಿಗಾಗಿ ಈ ಅಧಿಕಾರಿ-ಸಿಬ್ಬಂದಿ ಮನೆಯಿಂದ ಹೊರಗಿದ್ದು, ಜನರು ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಮನವಿ ಮಾಡಿದರು. ಹೊರಗಿನಿಂದ ಜಿಲ್ಲೆಗೆ ಬಂದಿರುವ ಜನರು ತಮ್ಮ ಆಗಮನದ ಕುರಿತು ಸ್ವಯಂ ಪ್ರೇರಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವ ರೋಗದ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ಪ್ರೇರಣೆಯಿಂದ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಡಿಸಿಎಂ ಗೋವಿಂದ ಕಾರಜೋಳ ಮನವಿ ಮಾಡಿದರು.
ನಾವೀಗ ಅತ್ಯಂತ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಈ ಸಂಕಷ್ಟ ನಿಗ್ರಹ ವಿಷಯದಲ್ಲಿ ಕೊಡುಗೈ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಸರ್ಕಾರಕ್ಕೆ ನೆರವು ನೀಡಬೇಕಿದೆ. ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರು ಮುಖ್ಯಮಂತ್ರಿ ಪರಿಹಾರ ನಿಧಿ ಗೆ 50.7 ಲಕ್ಷ ರೂ. ಗಳ ದೇಣಿಗೆ ನೀಡಿದ್ದಾರೆ ಎಂದರು.