ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯಾದ್ಯಂತ ಇರುವ ಐತಿಹಾಸಿಕ ನೂರಾರು ಸ್ಮಾರಕಗಳ ಸಂರಕ್ಷಣೆಗೆ ಭಾರತಿಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ಲಕ್ಷ್ಯ ಒಂದೆಡೆಯಾದರೆ, ಮಹಾನಗರದ ಅಭಿವೃದ್ಧಿಗೂ ತೊಡಕಾಗಿದೆ.
Advertisement
ವಿಜಯಪುರ ನಗರದಲ್ಲಿ ಪುರಾತತ್ವ ಇಲಾಖೆ ಸ್ಮಾರಕ ಸಂರಕ್ಷಕರ ಕಚೇರಿ ಮಾತ್ರ ಇದ್ದು ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವ ಅಧೀಕ್ಷರ ಕಚೇರಿ ದೂರದ ಧಾರವಾಡದಲ್ಲಿರುವ ಜಿಲ್ಲೆಯ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ ಶಕ್ತಿ ತೋರದ ಕಾರಣ ಜಿಲ್ಲೆ ಪ್ರವಾಸೋದ್ಯಮ ಅಭಿವೃದ್ಧಿ ವಿಷಯದಲ್ಲೂ ಹಿನ್ನಡೆ ಅನುಭವಿಸುವಂತಾಗಿದೆ.
Related Articles
Advertisement
ರಾಜ್ಯದ ಎಲ್ಲ ಜಿಲ್ಲೆಗಳ ಕೇಂದ್ರ ಸರ್ಕಾರಿ ವ್ಯಾಪ್ತಿಯ ಎಲ್ಲ ಸ್ಮಾರಕ ಸಂರಕ್ಷಣೆಗೆ ಭಾರತೀಯ ಪುರಾತತ್ವ ಇಲಾಖೆಯ ವೃತ್ತ ಕಚೇರಿ ಬೆಂಗಳೂರಿನಲ್ಲಿ ಮಾತ್ರ ಇತ್ತು. ಎಚ್.ಡಿ. ದೇವೇಗೌಡ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ, ಕನ್ನಡಿಗ ಎಸ್. ಆರ್. ಬೊಮ್ಮಾಯಿ ಅವರು ಮಾನವ ಸಂಪನ್ಮೂಲ ಇಲಾಖೆ ಸಚಿವರಾಗಿದ್ದರು. ರಾಜ್ಯದ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ದುಸ್ಥಿತಿ ಅರಿತ ಅವರು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಪಾರಂಪರಿಕ ಸ್ಮಾರಕಗಳ ರಕ್ಷಣೆಗೆ ಪ್ರತ್ಯೇಕ ವೃತ್ತ ಸ್ಥಾಪಿಸುವ ಉದ್ದೇಶದೊಂದಿಗೆ ಚಿಂತನೆ ನಡೆಸಿದರು.
ಅಂತಿಮವಾಗಿ ಸದರಿ ಕಚೇರಿಯನ್ನು ತಮ್ಮ ತವರು ಜಿಲ್ಲೆಯ ಸಹಜ ಪ್ರೇಮ, ವ್ಯಾಮೋಹದಿಂದಾಗಿ ಅವಿಭಜಿತ ಧಾರವಾಡದಲ್ಲಿ ಕೇಂದ್ರ ಕಚೇರಿ ಮಾಡಿಕೊಂಡರು. ಅಚ್ಚರಿಯ ಸಂಗತಿ ಎಂದರೆ ಅಖಂಡ ಧಾರವಾಡ ಜಿಲ್ಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವೃತ್ತ ಕಚೇರಿ ತೆರೆಯುವುದಕ್ಕೆ ಮುಖ್ಯವಾಗಿ ಬೇಕಿದ್ದ ನಿರೀಕ್ಷಿತ ಸಂಖ್ಯೆ ಸ್ಮಾರಕಗಳೇ ಇರಲಿಲ್ಲ. ಆದರೂ ಧಾರವಾಡದಲ್ಲಿ ಎಎಸ್ಐ ವೃತ್ತ ಕಚೇರಿ ಹೊಂದಿದ್ದು, ಈ ಕಚೇರಿ ವ್ಯಾಪ್ತಿಗೆ ಇದೀಗ ಧಾರವಾಡ ಜಿಲ್ಲೆಯಿಂದ ಪ್ರತ್ಯೇಕಗೊಂಡಿರುವ ಹಾವೇರಿ, ಗದಗ, ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಗೊಂಡಿರುವ ಬಾಗಲಕೋಟೆ, ವಿಭಜಿತ ವಿಜಯಪುರ, ಕಲಬುರಗಿ, ಬೀದರ ಜಿಲ್ಲೆಗಳು ಸೇರಿವೆ.
300ಕ್ಕೂ ಹೆಚ್ಚು ಸ್ಮಾರಕ: ಗಮನೀಯ ಆಂಶ ಎಂದರೆಧಾರವಾಡ ವೃತ್ತ ಕಚೇರಿ ವ್ಯಾಪ್ತಿಯಲ್ಲೇ ವಿಜಯಪುರ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಐತಿಹಾಸಿಕ ಸ್ಮಾಕರಗಳಿದ್ದು, ಈಗಾಗಲೇ ಸಮೀಕ್ಷೆಗೊಂಡು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀನದಲ್ಲೇ ಸಂರಕ್ಷಿತ ನಗರದಲ್ಲಿನ 88 ಸ್ಮಾರಕ ಸೇರಿ ಜಿಲ್ಲೆಯಾದ್ಯಂತ 96 ಸ್ಮಾರಕಗಳಿವೆ. ಜಿಲ್ಲೆಯಲ್ಲಿ ಸಮೀಕ್ಷೆ ಈ ವೃತ್ತದ ವ್ಯಾಪ್ತಿಯಲ್ಲಿರುವ ವಿಜಯಪುರ ಜಿಲ್ಲೆಯಲ್ಲಿ ಕಂಡು ಬರುವಷ್ಟು ಪಾರಂಪರಿಕ ಸ್ಮಾಕರಗಳು ದೇಶದಲ್ಲೇ ಅತ್ಯಧಿಕ ಎಂಬ ಹಿರಿಮೆ ಹೊಂದಿದೆ. ಹೀಗಾಗಿ ವಿಜಯಪುರ ಮಹಾನಗರಕ್ಕೆ ಪಾರಂಪರಿಕ ನಗರ ಎಂದು ಗುರುತಿಸಿದ್ದು, ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಅಧಿಕೃತ ಘೋಷಣೆಗೆ ನಿರ್ಧರಿಸಿದೆ. ಮತ್ತೊಂದೆಡೆ ಆದಿಲ್ಶಾಹಿ ಅರಸರ ಬೇಸಿಗೆ ಅರಮನೆ ಇರುವ ಕುಮಟಗಿ ಹಳ್ಳಿಗೆ ಪರಂಪರೆ ಗ್ರಾಮದ ಮಾನ್ಯತೆ ನೀಡುವ ಕುರಿತು ಸಿದ್ಧತೆ ನಡೆದಿದೆ. ದಶಕದ ಬೇಡಿಕೆ: ವಿಜಯಪುರ ಜಿಲ್ಲೆಯಲ್ಲಿ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವೃತ್ತ ಕಚೇರಿ ಇಲ್ಲದೇ ಕೇವಲ ಸಂರಕ್ಷಣೆಯ ಸಹಾಯಕರ ಸಾಂಕೇತಿಕ ಕಚೇರಿಯಿಂದಾಗಿ ಜಿಲ್ಲೆಯ ಸ್ಮಾರಕಗಳು ಸಂರಕ್ಷಣೆ ಇಲ್ಲದೇ ಬಳಲುವಂತಾಗಿವೆ. ವಿಜಯಪುರ ಜಿಲ್ಲೆಗೆ ಧಾರವಾಡದ ವೃತ್ತ ಕಚೇರಿಯನ್ನು ಸ್ಥಳಾಂತರಿಸುವ, ಇಲ್ಲವೇ ಪ್ರತ್ಯೇಕ ವೃತ್ತ ರಚಿಸುವ ಕುರಿತು ಹಲವು ದಶಕಗಳಿಂದ ಬೇಡಿಕೆ ಇದ್ದರೂ, ಆರೇಳು ವರ್ಷಗಳ ಹಿಂದೆ ಇದಕ್ಕೆ ಗಟ್ಟಿ ಧ್ವನಿ ಕೇಳಲಾರಂಭಿಸಿದೆ. ಎಎಸ್ಐ ನವದೆಹಲಿ ಕಚೇರಿಯಿಂದ ಬಂದಿದ್ದ ಜಮಾಲ್ ಹುಸೇನ್ ಎಂಬ ಸಹಾಯಕ ಮಹಾ ನಿರ್ದೇಶಕರಿಗೆ ಎಂ.ಬಿ. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಎಎಸ್ಐ ವೃತ್ತ ಕಚೇರಿ ಆರಂಭಕ್ಕೆ ಮನವಿ ಸಲ್ಲಿಸಿದ್ದರು. ಜಿಲ್ಲೆಯಲ್ಲಿ ಪಾರಂಪರಿಕ ನೂರಾರು ಸ್ಮಾರಕಗಳಿದ್ದು, ಇಷ್ಟೊಂದು ಸ್ಮಾರಕಗಳ ಸಂರಕ್ಷಣೆಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವ ಪ್ರತ್ಯೇಕ ಅಧೀಕ್ಷಕ ಹುದ್ದೆಯ ಕಚೇರಿ ಬೇಕಿದೆ. ಒಂದೊಮ್ಮೆ ಪ್ರತ್ಯೇಕ ವೃತ್ತ ಕಚೇರಿ ತೆರೆಯಲು ಆಸಾಧ್ಯ ಎಂದಾದರೆ ದೆಹಲಿ, ಲೇಹ ಹಾಗೂ ಹಂಪಿಗಳಲ್ಲಿ ಇರುವಂತೆ ಉಪ ವೃತ್ತ ಕಚೇರಿಯನ್ನು ನೀಡಿ, ಅಧೀಕ್ಷರ ಹುದ್ದೆಗೆ ಬದಲಾಗಿ ಉಪ ಆಧೀಕ್ಷಕರ ಹುದ್ದೆ ಸೃಷ್ಟಿಸಿ, ಸ್ವತಂತ್ರ ಅಧಿಕಾರ ನೀಡಿ ಎಂಬ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇಂಥ ಯಾವುದೇ ಬೇಡಿಕೆಗೆ ಭಾರತೀಯ ಪುರಾತತ್ವ ಇಲಾಖೆ ಮಹಾ ನಿರ್ದೇಶಕರು ಸೊಪ್ಪು ಹಾಕಲೇ ಇಲ್ಲ. ಇಷ್ಟಕ್ಕೂ ಕೇಂದ್ರ ಸರ್ಕಾರದ ಸಂಸ್ಕೃತಿ-ಪ್ರವಾಸೋದ್ಯಮ ಇಲಾಖೆ ಸಚಿವರು, ಸಚಿವಾಲಯದ ಅಧಿಕಾರಿಗಳನ್ನು ಈ ವಿಷಯದಲ್ಲಿ ಮನವರಿಕೆ ಮಾಡಿಕೊಡುವ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರದಿಂದ ಆಗಬೇಕಿರುವ ಈ ಕೆಲಸದ ಕುರಿತು ಒತ್ತಡ ಹೇರುವ ಕನಿಷ್ಠ ಕೆಲಸವೂ ಜಿಲ್ಲೆಯನ್ನು ಮೂರು ಬಾರಿ ಪ್ರತಿನಿಧಿಸಿ, ಮೋದಿ ಅವರ ಮೊದಲ ಅವಧಿ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ ಜಿಗಜಿಣಗಿ ಅವರಿಂದ ಆಗಿಲ್ಲ. ಮನವರಿಕೆ ಅಗತ್ಯ: ಕೇಂದ್ರ ಸರ್ಕಾರ ಮಾಡಬೇಕಿರುವ ಈ ಕೆಲಸಕ್ಕೆ ಸಂಸದರ ಒತ್ತಾಸೆಯ ಅಗತ್ಯವಿದೆ. ಆದರೆ ಸಂಸದ ರಮೇಶ ಜಿಗಜಿಣಗಿ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ, ಸಚಿವರಿಗೆ ಪತ್ರ ಕಳಿಸಿದ್ದೇನೆ, ಕಾರ್ಯದರ್ಶಿಗೆ ಹೇಳಿದ್ದೇನೆ ಎಂಬ ಹಂತದಿಂದ ಮುಂದೆ ಹೆಜ್ಜೆ ಇರಿಸಿಲ್ಲ. ಕೇಂದ್ರ ಸರ್ಕಾರದ ಪುರತತ್ವ ಇಲಾಖೆಯ ವ್ಯಾಪ್ತಿ ಹೊಂದಿರುವ ಕೇಂದ್ರ ಸಂಸ್ಕೃತಿ ಸಚಿವರಿಗೆ ಜಿಲ್ಲಾಡಳಿತದ ಮೂಲಕ ದಾಖಲೆಗಳನ್ನು ಸಂಗ್ರಹಿಸಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ವಿಜಯಪುರ ಜಿಲ್ಲೆಯಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವೃತ್ತ-ಉಪ ವೃತ್ತ ಕಚೇರಿ ಸ್ಥಾಪನೆಯ ಅಗತ್ಯತೆ ಹಾಗೂ ಮಹತ್ವದ ಕುರಿತು ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಿದೆ. ವಿಜಯಪುರ ಜಿಲ್ಲೆಯಲ್ಲಿ ಸಹಾಯಕ ಸ್ಮಾರಕ ಸಂರಕ್ಷಕರ ಹುದ್ದೆಯ ಕಚೇರಿ ಇರುವ ಕಾರಣ ಇವರಿಂದ ಸ್ಮಾರಕಗಳ ಸಂರಕ್ಷಣೆ ಹಾಗೂ ಹಾನಿಯಾದ ಸಂದರ್ಭದಲ್ಲಿ ಯಾವುದೇ ನಿರ್ಧಾರಕ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ. ಅಲ್ಲದೇ ನಗರದಲ್ಲಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಗಳು ಅಭಿವೃದ್ಧಿ ಕೈಗೊಳ್ಳುವ ಯೋಜನೆಗೆ ಪುರಾತತ್ವ ಇಲಾಖೆಯ ಸ್ಥಾನಿಕ ಅಧಿಕಾರಿಗಳು ತಕರಾರು ಪತ್ರ ಬರೆಯುವುದನ್ನು ಹೊರತುಪಡಿಸಿ ಬೇರೆ ಕೆಲಸ ಮಾಡುತ್ತಿಲ್ಲ. ಎಎಸ್ಐ ವಿಜಯಪುರ ಕಚೇರಿ ಸಿಬ್ಬಂದಿ ವರ್ತನೆಯ ದ್ವಂದ್ವ ಹೇಗಿದೆ ಎಂದರೆ ಐತಿಹಾಸಿಕ ಗಗನಮಹಲ್ ಬಳಿಯ ಅರೆಕಿಲ್ಲಾ ಸ್ವತ್ಛತೆ ಹಾಗೂ ನಿರ್ವಹಣೆಗಾಗಿ ಕಂದಕದಲ್ಲಿ ದೋಣಿ ವಿಹಾರ ಆರಂಭಕ್ಕೆ ತಕರಾರು ತೆಗೆಯುತ್ತಾರೆ. ಆದರೆ ತಮ್ಮ ಕಚೇರಿ ಇರುವ ಹಾಗೂ ನಿತ್ಯ ದೇಶ-ವಿದೇಶಿ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕ ಗೋಲಗುಮ್ಮಟ ಪ್ರವೇಶ ದ್ವಾರದ ಮುಂಭಾಗದಲ್ಲಿ ಮುಖ್ಯ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕ ಸುಲಭ ಶೌಚಾಲಯ ನಿರ್ಮಾಣ ಆಗಿದ್ದರೂ ಕಣ್ಮುಚ್ಚಿ ಕುಳಿತಿರುವುದು ಅಚ್ಚರಿ ಮೂಡಿಸುತ್ತದೆ. ಕಡತ ರನಾನೆಗಷ್ಟೇ ಸೀಮಿತ: ವಿಯಪುರದಲ್ಲಿರುವ ಸಂರಕ್ಷಕ ಹುದ್ದೆ ಸಿಬ್ಬಂದಿ ದರ್ಜೆಯದ್ದಾಗಿರುವ ಕಾರಣ ಯಾವುದೇ ನಿರ್ಧಾರ ಕೈಗೊಳ್ಳುವುದು ಇಲ್ಲಿನ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ಸ್ಥಳೀಯರು ನೀಡುವ ಯಾವುದೇ ದೂರು, ಬೇಡಿಕೆಗೆ ಇಲ್ಲಿಂದ ಕೇವಲ ಧಾರವಾಡ ಕಚೇರಿಗೆ ಕಡತ ರವಾನಿಸುವ ಹೊಣೆಯಷ್ಟೇ ಇದೆ. ಅಲ್ಲದೇ ನಗರದಲ್ಲಿ ಎಎಸ್ಐ ಮೂರು ಸಂರಕ್ಷಕ ಹುದ್ದೆ ತೆರೆದಿದ್ದು, ಈ ಅಧಿಕಾರಿಗಳಿಗೆ ಧಾರವಾಡದಿಂದ ಬೀದರವರೆಗಿನ ವಿವಿಧ ಸಂರಕ್ಷಕರ ಕಚೇರಿಗಳ ಪ್ರಭಾರಿ ನೀಡಿದ್ದಾರೆ. ಹೀಗಾಗಿ ವಿಜಯಪುರ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು ವಾಸ್ತವಿಕ ಸಂರಕ್ಷಣೆ ಇಲ್ಲದೇ ಬಳಲುವಂತಾಗಿದೆ. ವಿಜಯಪುರ ನಗರದಲ್ಲಿ ಎಎಸ್ಐ ಕಚೇರಿಯ ಮೂವರು ಸಹಾಯಕ ಸಂರಕ್ಷಕರ ಹುದ್ದೆಗಳಿದ್ದು, ಯಾರೊಬ್ಬರಿಗೂ ತಮ್ಮ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿರುವ ಸ್ಮಾರಕಗಳೆಷ್ಟು, ಎಲ್ಲೆಲ್ಲಿವೆ ಎಂಬುದೇ ತಿಳಿದಿಲ್ಲ. ಅಷ್ಟರ ಮಟ್ಟಿಗೆ ಜಿಲ್ಲೆಯ ಸ್ಮಾರಕಗಳು ಹಾಗೂ ಸ್ಮಾರಕಗಳ ಸಂರಕ್ಷಕರ ಮಧ್ಯೆ ಕಂದಕವಿದೆ. ಮತ್ತೂಂದೆಡೆ ಸ್ಥಳೀಯ ಸಿಬ್ಬಂದಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಇಲ್ಲದ ಕಾರಣ ಜಿಲ್ಲೆಯ ಅಭಿವೃದ್ಧಿಗೆ ಬಂದಿರುವ ಕೋಟಿ ಕೋಟಿ ಹಣ ಬಳಕೆಯಾಗದೇ ಸರ್ಕಾರಕ್ಕೆ ಮರಳಿದ ಉದಾಹರಣೆಗಳೂ ಇವೆ. ಜಿಲ್ಲೆಯಲ್ಲಿ ಎಎಸ್ಐ ಕಚೇರಿ ಆರಂಭಗೊಂಡರೆ ನಗರದ ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರಿ ಆಗಲಿದೆ. ಹಲವು ಪ್ರಯೋಜನ: ವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀಕ್ಷಕ ಉಪ ವಲಯ ಕಚೇರಿ ಸ್ಥಾಪಿಸಿದಲ್ಲಿ ವಿಜಯಪುರ ಮಹಾನಗರದಲ್ಲಿನ ಅಭಿವೃದ್ಧಿಗೆ ತೊಡಕಾಗಿರುವ ಯೋಜನೆಗಳಿಗೆ ಸ್ಥಳೀಯವಾಗಿ ಅಧೀಕ್ಷಕ ದಜೆರ್ಯ ಅಧಿಕಾರಿ ಸ್ಥಳೀಯವಾಗಿಯೇ ನಿರ್ಧಾರ ಕೈಗೊಳ್ಳುತ್ತಾರೆ. ತಮ್ಮ ವ್ಯಾಪ್ತಿಗೆ ಮೀರಿದ್ದರೆ ದೆಹಲಿಯಲ್ಲಿರುವ ಕೇಂದ್ರ ಕಚೇರಿ ಜೊತೆ ನೇರ ಸಂಪರ್ಕ ಸಾಧಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಓಗಾಗಲೇ ಒತ್ತುವರಿಯಾಗಿರುವ ಹಲವು ಸ್ಮಾರಕಗಳ ತೆರವು ಹಾಗೂ ಒತ್ತುವರಿ ಆಗುತ್ತಿರುವ ಸ್ಮಾರಕಗಳ ಸಂರಕ್ಷಣೆ ಸಾಧ್ಯವಾಗುತ್ತದೆ. ಹಂಪಿ ಮಾದರಿಯಲ್ಲೇ ವಿಜಯಪುರಕ್ಕೂ ಪ್ರತ್ಯೇಕವಾಗಿ ಕಿರುವೃತ್ತ ಕಚೇರಿ ತೆರೆದು ಸ್ವತಂತ್ರ ಅಧಿಕಾರದ ಅಧೀಕ್ಷಕ ಹುದ್ದೆ ನೀಡಿದಲ್ಲಿ ಜಿಲ್ಲೆಯ ಅಭಿವೃದ್ಧಿ, ಸ್ಮಾರಕಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಹಕಾರಿ ಆಗಲಿದೆ ಎಂಬ ಕೂಗು ಎದ್ದಿದೆ. ಕರ್ನಾಟಕ ಸರ್ಕಾರದ ಆಧೀನದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಕೂಡ ವಿಜಯಪುರ ಜಿಲ್ಲೆಯಲ್ಲಿ ಕಚೇರಿ ತೆರೆದರೆ ಹಂಪೆ ಹಾಗೂ ವಿಜಯಪುರ ಜಿಲ್ಲೆಯ ಇತಿಹಾಸದ ಮೇಲೆ ಬೂದಿ ಮುಚ್ಚಿರುವ ಹಲವು ಐತಿಹಾಸಿಕ ಸಂಗತಿಗಳ ಮೇಲೆ ಸಂಶೋಧನೆ ನಡೆಸಿ, ಬೆಳಕು ಚಲ್ಲುವ ಕೆಲಸವೂ ಆಗಲಿದೆ.