Advertisement

ಡಿಕೆಶಿ ಬಂಧನ ಖಂಡಿಸಿ ಕೈ ಪ್ರತಿಭಟನೆ

12:07 PM Sep 05, 2019 | Team Udayavani |

ವಿಜಯಪುರ: ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರನ್ನು ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಇ.ಡಿ ಮೂಲಕ ಬಂಧಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

Advertisement

ಬುಧವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.

ಈ ವೇಳೆ ಮಾಜಿ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಸಿಬಿಐ, ಐಟಿ ಹಾಗೂ ಇ.ಡಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಿ, ಬೆದರಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಇ.ಡಿ ಸಂಸ್ಥೆ ಅಧಿಕಾರಿಗಳು ಕಾನೂನಾತ್ಮಕ ಹಾಗೂ ಪಾರದರ್ಶಕ ತನಿಖೆ ಮಾಡದೇ ಮೋದಿ ಹಾಗೂ ಅಮಿತ್‌ ಷಾ ಅವರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಮಾಜಿ ಶಾಸಕ ರಾಜು ಆಲಗೂರ ಮಾತನಾಡಿ, ಬಿಜೆಪಿ ನಾಯಕರು ವಿರೋಧ ಪಕ್ಷಗಳ ನಾಯಕರನ್ನು ಹೆದರಿಸಿ, ಬೆದರಿಸಿ ಇಂದು ದೇಶದಲ್ಲಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ. ಬಿಜೆಪಿ ನಾಯಕರು ಕರ್ನಾಟಕದಲ್ಲಿ ಸುಸೂತ್ರವಾಗಿ ನಡೆಯತ್ತಿರುವಂತಹ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದ ಶಾಸಕರನ್ನು ಹಣ ಹಾಗೂ ಅಧಿಕಾರದ ಆಸೆ ತೋರಿಸಿ ಆಪರೇಷನ್‌ ಕಮಲ ಮಾಡಿ ಅಧಿಕಾರ ಪಡೆದಿದ್ದಾರೆ. ಬಿಜೆಪಿ ನಾಯಕರಲ್ಲಿ ಶಾಸಕರನ್ನು ಖರೀದಿ ಮಾಡುವಷ್ಟು ಹಣ ಎಲ್ಲಿಂದ ಬಂತು? ಈ ವಿಷಯದಲ್ಲಿ ಐಟಿ ಹಾಗು ಇ.ಡಿ ಸಂಸ್ಥೆಗಳ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಏಕೆ ಎಂದು ಪ್ರಶ್ನಿಸಿದರು.

ಅಹ್ಮದ್‌ ಪಟೇಲ್ ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರು ಗುಜರಾತ ಶಾಸಕರಿಗೆ ರಾಜ್ಯದಲ್ಲಿ ರಕ್ಷಣೆ ನೀಡಿದ್ದರು. ಇದೇ ಕಾರಣಕ್ಕೆ ರಾಜಕೀಯ ದ್ವೇಷಕ್ಕಾಗಿ ಶಿವಕುಮಾರ ಅವರನ್ನು ಬಲಿಪಶು ಮಾಡಿ ಬಂಧಿಸಿ, ಹಿಂಸೆ ನೀಡಿ ಬೆದರಿಸಲಾಗುತ್ತದೆ. ಬಿಜೆಪಿ ನಾಯಕರನ್ನು ತನಿಖೆಗೆ ಒಳಪಡಿಸಿದರೆ ಇಡಿ ಪಕ್ಷವೇ ಜೈಲಿನಲ್ಲಿ ಒಳಗೆ ಇರಬೇಕಾದೀತು. ಇಂದು ಕಾಂಗ್ರೆಸ್‌ ಪಕ್ಷದ‌ ನಾಯಕರುಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ತಾವು ಆಡುತ್ತಿರುವ ನಾಟಕವನ್ನು ಜನ ಗಮನಿಸುತ್ತಿದ್ದು, ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು. ಕಾಂಗ್ರೆಸ್‌ ಪಕ್ಷ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಮಾತನಾಡಿದರು. ಕಾಂಗ್ರೆಸ್‌ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಹಾದೇವಿ ಗೋಕಾಕ, ಲಕ್ಷ್ಮೀ ದೇಸಾಯಿ, ಅಬ್ದುಲ್ ಹಮೀದ್‌ ಮುಷರೀಪ್‌, ಇಲಿಯಾಸ್‌ ಬೋರಾಮಣಿ, ಶ್ರೀದೇವಿ ಉತ್ಲಾಸರ, ಬಿ.ಎಸ್‌. ಪಾಟೀಲ ಯಾಳಗಿ, ಚಾಂದಸಾಬ ಗಡಗಲಾವ, ಜಮೀರ್‌ ಅಹ್ಮದ್‌ ಭಕ್ಷಿ, ಆರತಿ ಶಹಾಪುರ, ಇಲಿಯಾಸ್‌ ಬಗಲಿ, ಬಾಳನಗೌಡ ಪಾಟೀಲ, ಅಬ್ದುಲ್ಖಾದರ್‌ ಖಾದೀಮ್‌, ಸಾಹೇಬಗೌಡ ಬಿರಾದಾರ, ಇರ್ಫಾನ್‌ ಶೇಖ್‌, ಜಮೀರ್‌ಅಹ್ಮದ್‌ ಬಾಗಲಕೋಟ, ವಸಂತ ಹೊನಮೊಡೆ, ಶಬ್ಬೀರ್‌ ಜಾಗೀರದಾರ, ಆರ್‌.ಕೆ. ಜವನರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next