ವಿಜಯಪುರ: ”ಹಳೆ ಗೆಜೆಟ್ ಅಧಿಸೂಚನೆಯಲ್ಲಿನ ದೋಷದ ಹಿನ್ನೆಲೆಯಲ್ಲಿ ವಕ್ಫ್ ಕಾಯ್ದೆಯಡಿ ಜಿಲ್ಲೆಯ ಹೊನವಾಡ ಗ್ರಾಮದ ರೈತರಿಗೆ ತಮ್ಮ ಪೂರ್ವಜರ ಭೂಮಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ” ಎಂದು ಸಚಿವ ಎಂ.ಬಿ.ಪಾಟೀಲ್ ಭಾನುವಾರ(ಅ27) ಹೇಳಿದ್ದಾರೆ.
ಇದೆ ವೇಳೆ, ಗ್ರಾಮದಲ್ಲಿರುವ 1,200 ಎಕರೆ ರೈತರ ಜಮೀನಿನ ಮೇಲೆ ಕರ್ನಾಟಕ ವಕ್ಫ್ ಮಂಡಳಿ ಹಕ್ಕು ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
“1974ರಲ್ಲಿ ಗೆಜೆಟ್ ನೋಟಿಫಿಕೇಶನ್‌ನಲ್ಲಿ ಹೊನವಾಡ ಗ್ರಾಮ ಎಂದು ತಪ್ಪಾಗಿ ಬರೆಯಲಾಗಿತ್ತು. ಅಲ್ಲಿನ ಜಮೀನು ಮೂಲತಃ ಮಹಲ್ ಬಾಗ್ ಸರ್ವೆ ನಂಬರ್ ನ ಭಾಗವಾಗಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
1977 ರಲ್ಲಿ, ವಕ್ಫ್ ಮಂಡಳಿಯು ತನ್ನ ದಾಖಲೆಗಳನ್ನು ಸರಿಪಡಿಸಿತ್ತು. ಕೇವಲ 10 ಎಕರೆ ಖಬರಸ್ತಾನ್ ಭೂಮಿಗೆ ಸೇರಿದೆ ಎಂದು ಸ್ಪಷ್ಟಪಡಿಸಿತು. ಉಳಿದ ವಕ್ಫ್ ಎಂದು ಹೇಳಿಕೊಳ್ಳಲಾದ 1,200 ಎಕರೆ ಭೂಮಿ ರೈತರಿಗೆ ಸೇರಿದೆ. ಹಾಗಾಗಿ ರೈತರಿಗೆ ಸೇರಿದ ಒಂದು ಇಂಚು ಭೂಮಿಯೂ ವಕ್ಫ್ ಆಸ್ತಿಯಾಗಿಲ್ಲ ಎಂದು ಸಚಿವ ಪಾಟೀಲ್ ಹೇಳಿದ್ದಾರೆ.
ಗೊಂದಲ ಬಗೆಹರಿಸಲು ಜಿಲ್ಲಾ, ಕಂದಾಯ ಇಲಾಖೆ ಹಾಗೂ ವಕ್ಫ್ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು.10 ಎಕರೆ ಖಬರಸ್ತಾನ್ ಭೂಮಿ ಕೂಡ ಪಂಚಾಯತ್ ಆಸ್ತಿ, ಸಂಬಂಧಿಸಿದ ವಿಷಯವೂ ಅಧೀನವಾಗಿದೆ ಮತ್ತು ಫಲಿತಾಂಶಕ್ಕಾಗಿ ಜನರು ಕಾಯಬೇಕು ಎಂದರು.
ವಿಜಯಪುರದ ಇಂಡಿ ತಾಲೂಕಿನ ಗ್ರಾಮಗಳಲ್ಲಿ ಮ್ಯುಟೇಶನ್ ಬದಲಾವಣೆ ಬಗ್ಗೆ ಸಚಿವರ ಗಮನ ಸೆಳೆದಾಗ, ಹೊನವಾಡ ಗ್ರಾಮವನ್ನು ಉಲ್ಲೇಖಿಸಿ ಇಂಡಿ ಅಲ್ಲ ಎಂದು ಹೇಳಿದರು.
ಹೊನವಾಡದ ಗ್ರಾಮಸ್ಥರು ತಮ್ಮ ಜಮೀನು ವಕ್ಫ್ ಮಂಡಳಿಗೆ ಸೇರಿದ್ದು ಎಂದು ನೋಟಿಸ್ ಬಂದಿದ್ದರಿಂದ ಆಕ್ರೋಶಗೊಂಡು ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಧರಣಿ ನಡೆಸಿ ಗಮನ ಸೆಳೆದಿದ್ದರು.